ಸುಮಾರು ನಾಲ್ಕು ದಶಕಗಳ ಕಾಲ ಕನ್ನಡ ಚಿತ್ರರಂಗದಲ್ಲಿ ಮೆರೆದ ವಿಷ್ಣುವರ್ಧನ್ 200ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದರು. ತಮಿಳು, ತೆಲುಗು, ಮಲೆಯಾಳಮ್ ಸಿನೆಮಾಗಳಲ್ಲೂ ಅಭಿನಯಿಸಿದ್ದ ವಿಷ್ಣುವರ್ಧನ್, ಹಿಂದಿ ಭಾಷೆಯ ಸಿನೆಮಾದಲ್ಲಿ ನಟಿಸುವ ಮೂಲಕ Bollywoodಗೂ ಎಂಟ್ರಿ ಕೊಟ್ಟಿದ್ದರು. ಎಲ್ಲ ರೀತಿಯ ಪಾತ್ರಗಳಿಗೂ ತಮ್ಮ ಭಾವಪೂರ್ಣ ನಟನೆಯಿಂದ ಜೀವ ತುಂಬುತ್ತಿದ್ದ ವಿಷ್ಣುವರ್ಧನ್, ‘ಅಭಿನಯ ಭಾರ್ಗವ’ ಎಂಬ ಬಿರುದು ಪಡೆದಿದ್ದರು. ಕನ್ನಡದ ಜನರು ಮತ್ತು ಚಿತ್ರರಂಗ ಅವರಿಂದ ಇನ್ನೂ ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿದ್ದಾಗಲೇ ಮರೆಯಾದವರು ವಿಷ್ಣುವರ್ಧನ್.  ‘ಸಾಹಸ ಸಿಂಹ’ ಎಂದು ಕರೆಸಿಕೊಳ್ಳುತ್ತಿದ್ದ ವಿಷ್ಣುವರ್ಧನ್ ಜನ್ಮದಿನದ ಸಂದರ್ಭದಲ್ಲಿ ಅವರ ಬದುಕು ಮತ್ತು ಸಿನೆಮಾಗಳ ಬಗ್ಗೆ ಮಾಧ್ಯಮ ಅನೇಕದಿಂದ ಒಂದು ಸಂಕ್ಷಿಪ್ತ ಚಿತ್ರಣ.

‘ವಿಷ್ಣುವರ್ಧನ್’ ಎಂದು ಹೆಸರಾಗಿದ್ದ ಸಂಪತ್ ಕುಮಾರ್ ಹುಟ್ಟಿದ್ದು 1950ನೇ ಇಸವಿ ಸೆಪ್ಟಂಬರ್ 18ರಂದು. ಮೈಸೂರು ಇವರ ಜನ್ಮಸ್ಥಳ. ವಿಷ್ಣು ಅವರ ತಂದೆ ಹೆಚ್.ಎಲ್.ನಾರಾಯಣ ರಾವ್, ತಾಯಿ ಕಾಮಾಕ್ಷಮ್ಮ. ಇವರು ಮೂಲತಃ ಮಂಡ್ಯ ಜಿಲ್ಲೆಯ ಹಲ್ಲೇಗೆರೆಯವರು. ವಿಷ್ಣು ಅವರದ್ದು ದೊಡ್ಡ ಕುಟುಂಬವಾಗಿದ್ದು, ಅವರಿಗೆ ಒಟ್ಟು 6 ಜನ ಸೋದರ, ಸೋದರಿಯರಿದ್ದರು. ವಿಷ್ಣು ತಂದೆ ನಾರಾಯಣ ರಾವ್ ಅವರು ಒಬ್ಬ ಕಲಾವಿದ, ಸಂಗೀತಗಾರ ಹಾಗೂ ಸಂಭಾಷಣೆಕಾರ ಆಗಿದ್ದರು. ವಿಷ್ಣುವರ್ಧನ್ ಅವರ ಪ್ರಾಥಮಿಕ ವಿದ್ಯಾಭ್ಯಾಸ ಮೈಸೂರಿನ ಗೋಪಾಲಸ್ವಾಮಿ ಶಾಲೆಯಲ್ಲಿ ಆಗಿತ್ತು. ಆ ಬಳಿಕ ಅವರ ತಂದೆಯವರು ಬೆಂಗಳೂರಿಗೆ ಬಂದಿದ್ದರಿಂದ ವಿಷ್ಣು, ಇಲ್ಲಿನ ಮಾಡೆಲ್ ಹೈಸ್ಕೂಲ್ ಸೇರಿಕೊಂಡರು. ಆನಂತರ ಬಸವನಗುಡಿಯ ನ್ಯಾಷನಲ್ ಕಾಲೇಜು ಸೇರಿದ ವಿಷ್ಣುವರ್ಧನ್ ಅಲ್ಲಿಯೇ ಪದವಿ ಶಿಕ್ಷಣ ಮುಗಿಸಿದರು.

ಬಾಲ್ಯದಿಂದಲೂ ಚಟುವಟಿಕೆಯ ಹುಡುಗನಾಗಿದ್ದ ವಿಷ್ಣುವರ್ಧನ್ ತಮ್ಮ ಐದನೇ ವಯಸ್ಸಿನಲ್ಲಿಯೇ ‘ಶಿವಶರಣೆ ನಂಬೆಯಕ್ಕ’ ಸಿನೆಮಾದಲ್ಲಿ ನಟಿಸಿದ್ದರು. ಆ ಬಳಿಕ 1956ರಲ್ಲಿ ‘ಕೋಕಿಲವಾಣಿ’ ಎಂಬ ಚಿತ್ರದಲ್ಲೂ ಕಾಣಿಸಿಕೊಂಡಿದ್ದರು. 1972ರಲ್ಲಿ ಬಿಡುಗಡೆಯಾದ ‘ವಂಶವೃಕ್ಷ’ ಸಿನೆಮಾದಲ್ಲೂ ಪಾತ್ರ ವಹಿಸಿದ್ದ ವಿಷ್ಣುವರ್ಧನ್, ಆ ದಿನಗಳ ಪ್ರಸಿದ್ಧ ನಿರ್ದೇಶಕ ಪುಟ್ಟಣ ಕಣಗಾಲ್ ಅವರ ಕಣ್ಣಿಗೆ ಬಿದ್ದಿದ್ದರು.

ಅಲ್ಲಿಯವರೆಗೂ ಸಂಪತ್ ಕುಮಾರ್ ಆಗಿದ್ದ ಯುವಕನಿಗೆ ‘ವಿಷ್ಣುವರ್ಧನ್’ ಎಂದು ನಾಮಕರಣ ಮಾಡಿದ ಪುಟ್ಟಣ್ಣ ಕಣಗಾಲ್, ತರಾಸು ಅವರ ಕಾದಂಬರಿ ಆಧಾರಿತ ‘ನಾಗರಹಾವು’ ಸಿನೆಮಾದಲ್ಲಿ ನಾಯಕನ ಪಾತ್ರ ಕೊಟ್ಟರು. ಪುಟ್ಟಣ್ಣ ಅವರ ನಿರೀಕ್ಷೆಯನ್ನು ಸಂಪೂರ್ಣವಾಗಿ ಈಡೇರಿಸುವ ರೀತಿಯಲ್ಲಿ ಅಭಿನಯಿಸಿದ ವಿಷ್ಣುವರ್ಧನ್, ಸಿನೆಮಾ ಜಗತ್ತಿಗೆ ತಮ್ಮ ಆಗಮನವನ್ನು ದೊಡ್ಡ ರೀತಿಯಲ್ಲಿ ಪ್ರಕಟಿಸಿದ್ದರು. ಅದ್ಭುತವಾದ ಯಶಸ್ಸುಗಳಿಸಿದ ನಾಗರಹಾವು ಚಿತ್ರ, ರಾಷ್ಟ್ರ ಪ್ರಶಸ್ತಿ ಗಳಿಸಿಕೊಂಡಿತ್ತು. ವಿಷ್ಣು, ಕನ್ನಡ ಚಿತ್ರರಂಗದ ಮೊದಲ Angry Young Man ಅನ್ನಿಸಿಕೊಂಡಿದ್ದರು.

ಅಲ್ಲಿಂದಾಚೆಗೆ ಹಲವಾರು ಸಿನೆಮಾಗಳಲ್ಲಿ ಅಭಿನಯಿಸಿದ ವಿಷ್ಣುವರ್ಧನ್ ಅವರಿಗೆ ಮತ್ತೊಂದು ದೊಡ್ಡ ಹೆಸರು ತಂದುಕೊಟ್ಟ ಚಿತ್ರ ಸಿದ್ದಲಿಂಗಯ್ಯ ಅವರ ನಿರ್ದೇಶನದ ‘ಭೂತಯ್ಯನ ಮಗ ಅಯ್ಯು’. ಆ ಬಳಿಕ ಪ್ರೊಫೆಸರ್ ಹುಚ್ಚೂರಾಯ, ಅಣ್ಣ ಅತ್ತಿಗೆ, ದೇವರ ಗುಡಿ, ಕೂಡಿ ಬಾಳೋಣ, ಕಳ್ಳ ಕುಳ್ಳ, ಒಂದೇ ಗುಣ ಎರಡು ರೂಪ, ಬಂಗಾರದ ಗುಡಿ, ನಾಗರ ಹೊಳೆ, ಸಹೋದರರ ಸವಾಲ್, ಕಿಟ್ಟುಪುಟ್ಟು, ಹೊಂಬಿಸಿಲು, ಮುಯ್ಯಿಗೆ ಮುಯ್ಯಿ, ಕಿಲಾಡಿ ಕಿಟ್ಟು, ಕಿಲಾಡಿ ಜೋಡಿ, ಸಿಂಗಾಪುರ್ ನಲ್ಲಿ ರಾಜಾ ಕುಳ್ಳ ಇತ್ಯಾದಿ ಸಿನೆಮಾಗಳಲ್ಲಿ ನಟಿಸಿದ ವಿಷ್ಣು ಜನರ ಮನದಲ್ಲಿ ಭದ್ರವಾಗಿ ನೆಲೆಯೂರಿದರು.

ತಮಿಳು ಭಾಷೆಯ ಅಲೈಗಳ್(1973), ಶ್ರೀ ರಾಘವೇಂದ್ರ(1985), ತೆಲುಗಿನ ಒಕ್ಕಡು ಚಾಲು(1996), ಸರ್ದಾರ್ ಧರ್ಮಣ್ಣ(1987), ಮಲಯಾಳಂ ಭಾಷೆಯ ಆದಿಮ ಚಂಗಲ(1981), ಕೌರವರ್(1992) ಜೊತೆಗೆ ಹಿಂದಿ ಭಾಷೆಯ ಏಕ್ ನಯಾ ಇತಿಹಾಸ್ (1984) ಇತ್ಯಾದಿ ಸಿನೆಮಾಗಳಲ್ಲೂ ನಟಿಸಿ ಆ ಭಾಷೆಗಳಲ್ಲೂ ಅಭಿಮಾನಿಗಳನ್ನು ಪಡೆದುಕೊಂಡರು.

ಹಲವಾರು ಸಿನೆಮಾಗಳಲ್ಲಿ ಡಬಲ್ ರೋಲ್ ನಲ್ಲಿ ನಟಿಸಿದ ವಿಷ್ಣುವರ್ಧನ್, ತಮ್ಮ ನಟನಾ ಸಾಮರ್ಥ್ಯದ ವ್ಯಾಪಕತೆಯನ್ನು ಅನಾವರಣಗೊಳಿಸಿದರು. ಭಾರ್ಗವ, ರಾಜೇಂದ್ರ ಸಿಂಗ್ ಬಾಬು, ಜೋ ಸೈಮನ್, ಟಿ.ಎಸ್.ನಾಗಾಭರಣ, ಕೆ.ಎಸ್.ಎಲ್.ಸ್ವಾಮಿ, ಗೀತಪ್ರಿಯ, ದ್ವಾರಕೀಶ್, ದಿನೇಶ್ ಬಾಬು, ಎಸ್.ನಾರಾಯಣ್, ಸುನಿಲ್ ಕುಮಾರ್ ದೇಸಾಯಿ ಮೊದಲಾದ ಪ್ರತಿಭಾವಂತ ನಿರ್ದೇಶಕರ ಸಿನೆಮಾಗಳಲ್ಲಿ ನಟಿಸಿದರು.

ಬಂಧನ, ನೀ ಬರೆದ ಕಾದಂಬರಿ, ಮಲಯ ಮಾರುತ, ಸುಪ್ರಭಾತ, ಮುತ್ತಿನ ಹಾರ, ಯಜಮಾನ, ಕೋಟಿಗೊಬ್ಬ, ಸಿಂಹಾದ್ರಿಯ ಸಿಂಹ, ಆಪ್ತ ಮಿತ್ರ ಇತ್ಯಾದಿ ಚಿತ್ರಗಳಲ್ಲಿನ ತಮ್ಮ ಅಮೋಘ ನಟನೆಯಿಂದ ಅವುಗಳ ಯಶಸ್ಸಿಗೆ ಕಾರಣರಾದರು. 2010ರಲ್ಲಿ ಬಿಡುಗಡೆಯಾದ ಆಪ್ತ ರಕ್ಷಕ, ವಿಷ್ಣುವರ್ಧನ್ ಅಭಿನಯದ ಕಡೆಯ ಚಿತ್ರ. ಈ ಸಿನೆಮಾ ರಿಲೀಸ್ ಆಗುವ ಮುನ್ನವೇ ವಿಷ್ಣುವರ್ಧನ್ ಅವರು ಇದ್ದಕ್ಕಿದ್ದಂತೆ ನಿಧನರಾದರು.

ನಟನೆ ಮಾತ್ರವಲ್ಲದೆ ಉತ್ತಮ ಗಾಯಕರೂ ಆಗಿದ್ದ ವಿಷ್ಣುವರ್ಧನ್, ಕಿಲಾಡಿ ಕಿಟ್ಟು, ನಾಗ ಕಾಳ ಭೈರವ, ಇತ್ಯಾದಿ ಸಿನೆಮಾಗಳಲ್ಲಿ ಹಾಡಿದ್ದಾರೆ. ‘ಜಿಮ್ಮಿಗಲ್ಲು’ ಚಿತ್ರದಲ್ಲಿ ವಿಷ್ಣುವರ್ಧನ್ ಹಾಡಿರುವ ‘ತುತ್ತು ಅನ್ನ ತಿನ್ನೋಕೆ ಬೊಗಸೆ ನೀರು ಕುಡಿಯೋಕೆ’ ಎಂಬ ಹಾಡನ್ನು ಕೇಳದೇ ಇರುವವರೇ ಇಲ್ಲ ಅನ್ನಬಹುದು.

ದಿವಂಗತ ಶಂಕರ್ ನಾಗ್ ನಿರ್ದೇಶನದ ಜನಪ್ರಿಯ ಧಾರಾವಾಹಿ ಮಾಲ್ಗುಡಿ ಡೇಸ್ ನಲ್ಲೂ ವಿಷ್ಣುವರ್ಧನ್ ನಟಿಸಿದ್ದರು. ಕನ್ನಡ ಚಿತ್ರರಂಗದಲ್ಲಿ ಹೊಸ ಇತಿಹಾಸ ಸೃಷ್ಟಿಸಿದ್ದ ರವಿಚಂದ್ರನ್ ಅವರ ‘ಪ್ರೇಮ ಲೋಕ’ ಸಿನೆಮಾದಲ್ಲೂ ಅತಿಥಿ ನಟನ ಪಾತ್ರದಲ್ಲಿ ನಟಿಸಿ, ಆ ಚಿತ್ರದ ಭಾರಿ ಯಶಸ್ಸಿನಲ್ಲಿ ಪಾಲುಪಡೆದಿದ್ದರು.  

ಕನ್ನಡ ಸಿನೆಮಾ ರಂಗದಲ್ಲಿ ಸುಮಾರು 15ಕ್ಕೂ ಹೆಚ್ಚು ಸಿನೆಮಾಗಳಲ್ಲಿ ದ್ವಿಪಾತ್ರದಲ್ಲಿ ನಟಿಸಿರುವವರು ಬಹುಶಃ ವಿಷ್ಣುವರ್ಧನ್ ಅವರೊಬ್ಬರೇ ಅನ್ನಿಸುತ್ತದೆ. ವಿಷ್ಣುವರ್ಧನ್-ಆರತಿ, ವಿಷ್ಣುವರ್ಧನ್-ಮಾಧವಿ, ವಿಷ್ಣು-ಸುಹಾಸಿನಿ ಜೋಡಿಗಳು ಕನ್ನಡ ಚಿತ್ರ ರಸಿಕರಿಗೆ ಮೋಡಿ ಮಾಡಿದ್ದವು.

ಹಿರಿಯ ನಟ, ನಿರ್ಮಾಪಕ ದ್ವಾರಕೀಶ್ ಹಾಗೂ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಅವರೊಂದಿಗೆ ವಿಷ್ಣುವರ್ಧನ್ ಅವರ ಗೆಳೆತನ ಸಾಕಷ್ಟು ಏರಿಳಿತಗಳನ್ನು ಕಂಡಿತ್ತು. ಆದರೆ, ನಾಗರಹಾವು ಸಿನೆಮಾದಲ್ಲಿ ತಮ್ಮ ಜೊತೆಗೆ ಖಳನಾಯಕನಾಗಿ ಸಿನೆಮಾ ರಂಗಕ್ಕೆ ಕಾಲಿಟ್ಟ ಅಂಬರೀಶ್ ಮತ್ತು ವಿಷ್ಣುವರ್ಧನ್ ಜೀವನಪರ್ಯಂತ ಅತ್ಯಂತ ಆಪ್ತ ಸ್ನೇಹಿತರಾಗಿದ್ದರು.

ಬರಹಗಾರ-ಚಿಂತಕ ಬನ್ನಂಜೆ ಗೋವಿಂದಾಚಾರ್ಯರನ್ನು ತಮ್ಮ ಅಧ್ಯಾತ್ಮಿಕ ಗುರುವೆಂದು ಭಾವಿಸಿದ್ದ ವಿಷ್ಣುವರ್ಧನ್, ತಮ್ಮ ಜೀವನದ ಕಡೆಯ ಹಂತದಲ್ಲಿ ತತ್ವಜ್ಞಾನಿಯಂತೆ ಮಾತನಾಡುತ್ತಿದ್ದರು.

ಚಿತ್ರರಂಗಕ್ಕೆ ಮತ್ತು ಸಮಾಜಕ್ಕೆ ವಿಷ್ಣುವರ್ಧನ್ ಅವರು ನೀಡಿರುವ ಕಾಣಿಕೆಯನ್ನು ಪರಿಗಣಿಸಿ 2005ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ನೀಡಿತ್ತು.

ಮೈಸೂರಿನಲ್ಲಿದ್ದ ಸಮಯದಲ್ಲಿ ತೀವ್ರ ಹೃದಯಾಘಾತಕ್ಕೊಳಗಾದ ವಿಷ್ಣುವರ್ಧನ್ ಅವರು 2009ರ ಡಿಸೆಂಬರ್ 30 ರಂದು ತಮ್ಮ 59ನೇ ವಯಸ್ಸಿನಲ್ಲಿ ನಿಧನರಾದರು. ಕನ್ನಡ ಚಿತ್ರರಂಗಕ್ಕೆ ಅವರ ಮಾರ್ಗದರ್ಶನ, ನಾಯಕತ್ವ ಬೇಕಿದ್ದ ಸನ್ನಿವೇಶದಲ್ಲೇ ಅವರು ಇಲ್ಲವಾಗಿದ್ದರು. ವಿಷ್ಣುವರ್ಧನ್ ಅವರನ್ನು ಒಬ್ಬ ಪರಿಪಕ್ವ ಕಲಾವಿದನಾಗಿ, ಅನುಭವದಿಂದ ಮಾಗಿದ ಮನುಷ್ಯನಾಗಿ ನೋಡುವ ಭಾಗ್ಯದಿಂದ ಕನ್ನಡದ ಜನತೆ ವಂಚಿತರಾದರು.

ವಿಷ್ಣುವರ್ಧನ್ ಅವರು ನಿಧನರಾದ 10 ವರ್ಷಗಳ ಕಾಲ ಹಲವಾರು ಅಡೆತಡೆಗಳನ್ನು ಎದುರಿಸಿದ್ದ ವಿಷ್ಣು ಸ್ಮಾರಕಕ್ಕೆ ಕಳೆದ ವಾರ ಶಂಖು ಸ್ಥಾಪನೆಯ ಭಾಗ್ಯ ದೊರೆತಿದೆ. ಮೈಸೂರಿನ ಹೆಚ್.ಡಿ.ಕೋಟೆ ರಸ್ತೆಯ ಉದ್ಬೂರು ಗೇಟ್ ಬಳಿಯ ಹಾಲಾಳು ಗ್ರಾಮದಲ್ಲಿ 11 ಕೋಟಿ ರೂಪಾಯಿ ವೆಚ್ಚದಲ್ಲಿ ವಿಷ್ಣುವರ್ಧನ್ ಸ್ಮಾರಕ ನಿರ್ಮಾಣಗೊಳ್ಳಲಿದೆ. ಅಲ್ಲಿ ಪುಣೆಯ ಪ್ರತಿಷ್ಠಿತ Film and Television ಸಂಸ್ಥೆಯ ಶಾಖೆಯನ್ನೂ ಆರಂಭಿಸಲಾಗುತ್ತದೆ ಎಂದು ಹೇಳಲಾಗಿದೆ.

ಒಂದು ಕಾಲದಲ್ಲಿ ಪ್ರಸಿದ್ಧ ನಿರ್ದೇಶಕ ಶ್ಯಾಮ್ ಬೆನಗಲ್ ಅವರಿಂದ ಅತ್ಯಂತ ಸ್ಫುರದ್ರೂಪಿ ನಟ ಎಂದು ಕರೆಸಿಕೊಂಡಿದ್ದ ವಿಷ್ಣುವರ್ಧನ್, ಇಂದಿಗೂ ಕನ್ನಡದ ಜನರ ಮನಸ್ಸಿನಲ್ಲಿ ಹಸಿರಾಗುಳಿದಿದ್ದಾರೆ. ವಿಷ್ಣುವರ್ಧನ್ ಅವರ ಜನ್ಮದಿನದ ಸಂದರ್ಭದಲ್ಲಿ ಮಾಧ್ಯಮ ಅನೇಕ ಸಂಸ್ಥೆಯಿಂದ ಕನ್ನಡದ ಎಲ್ಲ ಚಿತ್ರ ರಸಿಕರಿಗೆ ಶುಭ ಹಾರೈಕೆಗಳು.