ಮತ್ತೆ ಬಾಗಿಲು ತೆರೆದ ಚಿತ್ರಮಂದಿರಗಳು

ಕೊರೋನಾ ಮಹಾಮಾರಿಯ ಹಾವಳಿಯಿಂದ ದೇಶಾದ್ಯಂತ ಸುಮಾರು 7 ತಿಂಗಳ ಕಾಲ ಚಿತ್ರಮಂದಿರಗಳು ಬಾಗಿಲು ಮುಚ್ಚಿದ್ದವು. ಆ ಬಳಿಕ ಅಕ್ಟೋಬರ್ 1 ರಂದು Unlock 5.0 ಮಾರ್ಗಸೂಚಿ ಬಿಡುಗಡೆ ಮಾಡಿದ ಕೇಂದ್ರ ಸರ್ಕಾರ ಅಕ್ಟೋಬರ್ 15 ರಿಂದ ಚಿತ್ರಮಂದಿರಗಳು ಮತ್ತು Multiplexಗಳನ್ನು ತೆರೆಯಲು ಅನುಮತಿ ನೀಡಿತ್ತು. ಕಟ್ಟುನಿಟ್ಟಿನ ಸುರಕ್ಷತಾ ಕ್ರಮಗಳು ಮತ್ತು ಸೀಟಿಂಗ್ ಸಾಮರ್ಥ್ಯದ ಶೇಕಡ 50 ರಷ್ಟು ವೀಕ್ಷಕರಿಗೆ ಮಾತ್ರ ಅವಕಾಶ ನೀಡುವ ನಿಯಮ ಅನುಸರಿಸಿ ಪ್ರದರ್ಶನಗಳನ್ನು ಆರಂಭಿಸಬಹುದು ಎಂದು ಸಿನೆಮಾ ಮಂದಿರಗಳಿಗೆ ಸೂಚಿಸಿತ್ತು.

ಇದು, ತಮ್ಮ ಸಿನೆಮಾಗಳು ತೆರೆಕಾಣಲು ಸಿದ್ಧವಾಗಿದ್ದರೂ ಬಿಡುಗಡೆ ಮಾಡಲು ಅವಕಾಶವಿಲ್ಲದೆ ತವಕ ಪಡುತ್ತಿದ್ದ ಸಿನೆಮಾ ನಿರ್ಮಾಪಕರು ಮತ್ತು Lockdown ಕಾರಣದಿಂದ ತಿಂಗಳುಗಟ್ಟಲೆ ಬಾಗಿಲು ಮುಚ್ಚಿದ್ದ ಚಿತ್ರಮಂದಿರಗಳು ಮತ್ತು Multiplexಗಳ ಮಾಲೀಕರಿಗಂತೂ ತುಂಬಾ ಒಳ್ಳೆಯ ಸುದ್ದಿಯಾಗಿತ್ತು.

ಚಿತ್ರಮಂದಿರಗಳಲ್ಲಿ ಹೊಸ ಸಿನೆಮಾಗಳ ಬಿಡುಗಡೆ

Act1978

ಇದೇ ಅವಕಾಶವನ್ನು ಬಳಸಿಕೊಂಡ Act-1978 ಚಿತ್ರ ತಂಡದವರು ತಮ್ಮ ಸಿನೆಮಾವನ್ನು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಿ ಅದೃಷ್ಟ ಪರೀಕ್ಷೆಗೆ ನಿಂತರು.  ಕೊರೋನಾ Lockdown ಬಳಿಕ ಥಿಯೇಟರ್ ಗಳಲ್ಲಿ ಬಿಡುಗಡೆಯಾಗುತ್ತಿರುವ ಮೊದಲ ಕನ್ನಡ ಸಿನೆಮಾ ಎಂದು Facebook, Instagram, Twitter ಇತ್ಯಾದಿ Social Mediaಗಳು ಮತ್ತು ಇತರೆ ಮಾಧ್ಯಮಗಳಲ್ಲಿ ಸಾಕಷ್ಟು ಪ್ರಚಾರ ಪಡೆದ Act-1978 ಸಿನೆಮಾ ನವೆಂಬರ್ 20 ರಂದು ರಿಲೀಸ್ ಆಯಿತು. ತೆರೆ ಕಂಡ ಮೊದಲ ದಿನದಿಂದಲೇ Houseful ಪ್ರದರ್ಶನಗಳನ್ನು ಕಂಡ ಈ ಸಿನೆಮಾ ತನಗೆ ಸಿಕ್ಕಿದ ಪ್ರಚಾರ ಮತ್ತು ನಿರೀಕ್ಷೆಗಳನ್ನು ಹುಸಿಗೊಳಿಸಲಿಲ್ಲ. ಹಿರಿಯ ಸಂಗೀತ ನಿರ್ದೇಶಕ  ಹಂಸಲೇಖ ಅವರಿಂದ ಹಿಡಿದು, ಸಿನೆಮಾ ನೋಡಿದ ಎಲ್ಲ ವರ್ಗದ ಜನರಿಂದ ಪ್ರಶಂಸೆ ಪಡೆದ ಮಂಸೋರೆ ನಿರ್ದೇಶನದ Act-1978 ಸಿನೆಮಾ ಕನ್ನಡ ಚಿತ್ರರಂಗದಲ್ಲಿ ಮತ್ತೊಮ್ಮೆ ಹೊಸ ಬೆಳಕು ಮೂಡುವಂತೆ ಮಾಡಿದೆ. ಸದ್ಯಕ್ಕೆ ಚಂದನವನದ ತುಂಬಾ ಈ ಸಿನೆಮಾ ಬಗ್ಗೆಯೇ ಮಾತುಗಳು ಕೇಳಿ ಬರುತ್ತಿವೆ.

ಸರ್ಕಾರಿ ಕಚೇರಿಗಳಲ್ಲಿ ನಡೆಯುವ ಭ್ರಷ್ಟಾಚಾರ ಮತ್ತು ಲಂಚಾವತಾರಗಳ ಪಿಡುಗು ಇವತ್ತು ನೆನ್ನೆಯದೇನೂ ಅಲ್ಲ ಮತ್ತು ಭ್ರಷ್ಟ ವ್ಯವಸ್ಥೆಯ ವಿರುದ್ಧ ಜನಸಾಮಾನ್ಯರು ಹೋರಾಡಿ ಗೆಲ್ಲುವುದೂ ಕೂಡ ಸುಲಭ ಸಾಧ್ಯವಲ್ಲ. ಹೀಗಿದ್ದರೂ ಕೂಡ ತನಗೆ ಸಿಗಬೇಕಾದ ಭತ್ಯೆ ಪಡೆಯುವುದಕ್ಕಾಗಿ ದಿನಗಟ್ಟಲೆ ಅಲೆದಾಡಿದ ಗರ್ಭಿಣಿಯೊಬ್ಬಳು ಅಂತಿಮವಾಗಿ ಉಗ್ರ ಸ್ವರೂಪವನ್ನು ತಾಳುವ ಕಥೆ ಹೊಂದಿರುವ Act-1978 ಸಿನೆಮಾ ವೀಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ. ಈ ಹಿಂದೆ ಹರಿವು ಮತ್ತು ನಾತಿಚರಾಮಿ ಸಿನೆಮಾಗಳನ್ನು ಮಾಡಿ ಹೆಸರುಗಳಿಸಿದ್ದ ಮಂಸೋರೆ, ಮತ್ತೊಮ್ಮೆ ಇಲ್ಲೂ ತಮ್ಮ ಛಾಪು ಮೂಡಿಸಿದ್ದಾರೆ. ಆರ್.ದೇವರಾಜ್ ನಿರ್ಮಿಸಿರುವ ಈ ಚಿತ್ರದಲ್ಲಿ ಸತ್ಯಹೆಗಡೆ ಛಾಯಾಗ್ರಹಣದ ಹೊಣೆ ನಿಭಾಯಿಸಿದ್ದಾರೆ. ಯಜ್ಞಾ ಶೆಟ್ಟಿ, ಬಿ.ಸುರೇಶ, ಅವಿನಾಶ್, ಅಚ್ಯುತ್ ಕುಮಾರ್, ದತ್ತಣ್ಣ, ಸುಧಾ ಬೆಳವಾಡಿ, ಪ್ರಮೋದ್ ಶೆಟ್ಟಿ, ಕಿರಣ್ ಮುಂತಾದವರು ಪಾತ್ರವರ್ಗದಲ್ಲಿದ್ದಾರೆ.

ಅರಿಷಡ್ವರ್ಗ

ಕೋರೋನಾ Unlock ಪ್ರಕ್ರಿಯೆ ಆರಂಭವಾದ ಬಳಿಕ ತೆರೆ ಕಂಡ ಎರಡನೆ ಸಿನೆಮಾ ಅರಿಷಡ್ವರ್ಗ. ಅಪರಾಧ ಮತ್ತು Suspense Thriller ಆಗಿರುವ ಈ ಸಿನೆಮಾದಲ್ಲಿ ಕಾಮ, ಕ್ರೋಧ, ಲೋಭ, ಮೋಹ, ಮದ, ಮಾತ್ಸರ್ಯಗಳೆಂಬ ಮನುಷ್ಯನ ಆರು ಶತ್ರುಗಳು ವಿವಿಧ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತವೆ. ಅರವಿಂದ್ ಕಾಮತ್ ನಿರ್ದೇಶನ ಮತ್ತು ಬಾಲಾಜಿ ಮನೋಹರ್ ಛಾಯಾಗ್ರಹಣವಿರುವ ಅರಿಷಡ್ವರ್ಗ ಚಿತ್ರದಲ್ಲಿ ಅವಿನಾಶ್, ಅಂಜು ಆಳ್ವ, ನಂದಗೋಪಾಲ್, ಸಂಯುಕ್ತಾ ಹೊರನಾಡು ಇತ್ಯಾದಿ ಕಲಾವಿದರು ಅಭಿನಯಿಸಿದ್ದಾರೆ. ಈ ಸಿನೆಮಾ ಕೂಡ ಸಾಕಷ್ಟು ಸುದ್ದಿ ಮಾಡುತ್ತಿದೆ.

ಸದ್ಯದಲ್ಲೇ ತೆರೆ ಕಾಣಲಿರುವ ಹೊಸ ಸಿನೆಮಾಗಳು

Lockdown ತೆರವಿನ ಬಳಿಕ ಹಲವಾರು ಸಿನೆಮಾಗಳು ಚಿತ್ರಮಂದಿರಗಳಲ್ಲಿ ಬಿಡುಗಡೆ ಭಾಗ್ಯ ಕಾಣುತ್ತಿವೆ. ಎಂ.ಸಿ ಮಹೇಶ್ ಅವರು ಕಥೆ, ಚಿತ್ರಕಥೆ ಮತ್ತು ಸಂಭಾಷಣೆಯನ್ನೂ ಬರೆದು ನಿರ್ದೇಶಿಸಿರುವ “ಆರ್‌.ಎಚ್‌. 100” ಎಂಬ ಸಿನೆಮಾ ಕೂಡ ಸದ್ಯದಲ್ಲೇ ರಿಲೀಸ್ ಆಗಲಿದೆ. ಇದಾದ  ಬಳಿಕ ಶಿವಕುಮಾರ್ ಕಡೂರು ಅವರು ನಿರ್ದೇಶಿಸಿರುವ “ಮುಖವಾಡ ಇಲ್ಲದವನು 84” ಎಂಬ ವಿಚಿತ್ರವೆನ್ನಿಸುವ ಶೀರ್ಷಿಕೆಯ ಸಿನೆಮಾ ಕೂಡ ಡಿಸೆಂಬರ್ ತಿಂಗಳಲ್ಲೇ ತೆರೆ ಕಾಣುವ ಸಾಧ್ಯತೆ ಇದೆ.

OTT ಮೂಲಕ ಹೊಸ ಸಿನೆಮಾ ಬಿಡುಗಡೆ ಮುಂದುವರಿಕೆ

ಇದೇವೇಳೆ ಕೊರೋನಾ Lockdown ವೇಳೆ ಹೆಚ್ಚು ಸುದ್ದಿಮಾಡಿದ್ದ Digital Release ಪ್ರಕ್ರಿಯೆ ಮುಂದುವರಿದಿದ್ದು ಸಾಕಷ್ಟು ಹೊಸ ಸಿನೆಮಾಗಳು OTT Platformಗಳ ಮೂಲಕ ನೇರವಾಗಿ ವೀಕ್ಷಕರನ್ನು ತಲುಪುತ್ತಿವೆ.

ಸುಮಾರು ಒಂದು ವರ್ಷಕ್ಕೂ ಹಿಂದೆಯೇ ನಿರ್ಮಾಣ ಪೂರ್ಣಗೊಂಡಿದ್ದ ಕಾರ್ತಿಕ್ ಸರಗೂರ್ ನಿರ್ದೇಶನದ “ಭೀಮಸೇನ ನಳ ಮಹಾರಾಜ” ಚಿತ್ರ ಮತ್ತು ವಿ.ವಿ.ಕತಿರೆಸನ್ ನಿರ್ದೇಶನದ “ಮನೆ ನಂಬರ್ 13” ಶೀರ್ಷಿಕೆಯ ಸಿನೆಮಾಗಳು Amazon Prime Video ಮೂಲಕ ಬಿಡುಗಡೆಯಾಗಿವೆ.

ಭೀಮಸೇನ ನಳ ಮಹಾರಾಜ ಚಿತ್ರದಲ್ಲಿ ಅರವಿಂದ್ ಅಯ್ಯರ್, ಆರೋಹಿ, ಪ್ರಿಯಾಂಕ ಮತ್ತಿತರರು ನಟಿಸಿದ್ದಾರೆ. ರಮಣ, ಸಂಜೀವ್, ಚೇತನ್ ಗಂಧರ್ವ, ಐಶ್ವರ್ಯ ಮುಂತಾದವರು “ಮನೆ ನಂಬರ್ 13” ರಲ್ಲಿ ಪಾತ್ರ ಮಾಡಿದ್ದಾರೆ.

ಇದಲ್ಲದೆ ಬಾಲಿವುಡ್ ಮತ್ತು ದಕ್ಷಿಣ ಭಾರತದ ಇತರೆ ಚಿತ್ರರಂಗಗಳಲ್ಲೂ ಹಲವಾರು ಹೊಸ ಸಿನೆಮಾಗಳು OTT ಮೂಲಕವೇ ಬಿಡುಗಡೆಯಾಗುತ್ತಿವೆ. ರಾಜ್‌ಕುಮಾರ್ ರಾವ್ ಅಭಿನಯದ Chhalaang ಮತ್ತು ಆನಂದ್ ದೇವರಕೊಂಡ ಅಭಿನಯದ ತೆಲುಗು ಚಿತ್ರ  Middle Class Melodies ಈಗಾಗಲೇ Amazon Prime Video ಮೂಲಕ ಬಿಡುಗಡೆ ಆಗಿವೆ.

ವರುಣ್ ಧವನ್, ಪರೇಶ್ ರಾವಲ್ ಮತ್ತು ಸಾರಾ ಅಲಿ ಖಾನ್ ಅಭಿನಯದ Coolie No. 1, ಭೂಮಿ ಪೆಡ್ನೇಕರ್, ಅರ್ಷದ್ ವಾರ್ಸಿ ನಟಿಸಿರುವ Durgamati ಮತ್ತು ಆರ್. ಮಾಧವನ್, ಶ್ರದ್ಧಾ ಶ್ರೀನಾಥ್ ಅಭಿನಯದ ತಮಿಳು ಸಿನೆಮಾ Maara ಸದ್ಯದಲ್ಲೇ Amazon Prime ಮೂಲಕವೇ ವೀಕ್ಷಕರನ್ನು ತಲುಪಲಿವೆ.

13ನೇ ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವ

ಇದೆಲ್ಲದರ ನಡುವೆ ಎಲ್ಲ ಸಿನೆಮಾ ಪ್ರೇಮಿಗಳು ಖುಷಿ ಪಡುವ ಮತ್ತೊಂದು ಸುದ್ದಿಯೂ ಬಂದಿದೆ. 2021ರ ಫೆಬ್ರವರಿ ಮೂರನೇ ವಾರ ಅಥವ ನಾಲ್ಕನೇ ವಾರದಲ್ಲಿ 13ನೇ ಬೆಂಗಳೂರು ಅಂತರರಾಷ್ಟ್ರೀಯ ಸಿನಿಮೋತ್ಸವವನ್ನು ಆಯೋಜಿಸುವ ವಿಚಾರದಲ್ಲಿ ರಾಜ್ಯಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿದೆ. ಈ ಸಂಬಂಧ ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನಿಲ್ ಪುರಾಣಿಕ್ ನೇತೃತ್ವದ ನಿಯೋಗ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದೆ.

ಬೆಂಗಳೂರು ಸಿನಿಮೋತ್ಸವಕ್ಕೆ ಅಂತರರಾಷ್ಟ್ರೀಯ ಮಾನ್ಯತೆ ದೊರೆಯುವ ಸಾಧ್ಯತೆಗಳೂ ನಿಚ್ಚಳವಾಗಿದ್ದು, ಇದು 46ನೇ ಮಾನ್ಯತೆ ಪಡೆದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ.  

ಕಳೆದ ಒಂದು ದಶಕದ ಅವಧಿಯಲ್ಲಿ ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವ ಅಪಾರ ಜನಪ್ರಿಯತೆ ಗಳಿಸಿದೆ. ಇತ್ತೀಚಿನ ಕೆಲ ವರ್ಷಗಳಿಂದ ರಾಜಾಜಿನಗರದ Orion Mall ನಲ್ಲಿರುವ PVR CINEMAS ನಲ್ಲಿ ಆಯೋಜಿತವಾಗುವ ಬೆಂಗಳೂರು ಸಿನಿಮೋತ್ಸವ ಸಾವಿರಾರು ಸಿನೆಮಾ ಪ್ರೇಮಿಗಳನ್ನು ತನ್ನತ್ತ ಸೆಳೆಯುತ್ತಿದೆ. ರಾಜ್ಯ ಚಲನಚಿತ್ರ ಅಕಾಡೆಮಿ ಮತ್ತು ಎಲ್ಲ ಸಿನೆಮಾ ಪ್ರಿಯರ ಆಸೆಯಂತೆ 2021ರ ಫೆಬ್ರವರಿಯಲ್ಲಿ ಸಿನಿಮೋತ್ಸವ ಆಯೋಜನೆಯಾದಲ್ಲಿ, ಅದೂ ಕೂಡ ಪ್ರೇಕ್ಷಕರನ್ನು ಚಿತ್ರಮಂದಿರಗಳತ್ತ ಸೆಳೆಯಲು ಪೂರಕವಾಗಲಿದೆ.

ಆಶಾದಾಯಕ ಬೆಳವಣಿಗೆಗಳು

ಒಟ್ಟಿನಲ್ಲಿ ಇವೆಲ್ಲವೂ ಚಿತ್ರೋದ್ಯಮದ ಮಟ್ಟಿಗೆ ಆಶಾದಾಯಕವಾದ ಬೆಳವಣಿಗೆಗಳಾಗಿವೆ. ಕೋರೋನಾ ಕಾರಣದಿಂದ ಬಂದ್ ಆಗಿದ್ದ ಚಿತ್ರೋದ್ಯಮ ಇವೆಲ್ಲವುಗಳ ಲಾಭ ಪಡೆದು ಮತ್ತೆ ಚೇತರಿಸಿಕೊಳ್ಳಲಿ. ಚಿತ್ರಮಂದಿರ ಮತ್ತು Multiplexಗಳ ಮಾಲೀಕರು ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವ ಮೂಲಕ‌, ಜನರು ಕೊರೊನಾ ಭಯ ಬಿಟ್ಟು ಧೈರ್ಯವಾಗಿ ಸಿನೆಮಾ ನೋಡಲು ಬರುವಂಥ ಭರವಸೆಯ ವಾತಾವರಣ ಕಲ್ಪಿಸಲಿ. ಚಿತ್ರೋದ್ಯಮವನ್ನೇ ಆಧರಿಸಿರುವ ಕಲಾವಿದರು, ತಂತ್ರಜ್ಞರು, ಹಂಚಿಕೆದಾರರು, ಚಿತ್ರಮಂದಿರ, Multiplexಗಳ ಮಾಲೀಕರು, ಕಾರ್ಮಿಕರೂ ಸೇರಿದಂತೆ ಎಲ್ಲರ ಬದುಕೂ ಕೂಡ ಮತ್ತೆ ಸಹಜ ಸ್ಥಿತಿಗೆ ಬರಲಿ ಅನ್ನುವುದೇ ಎಲ್ಲರ ಆಶಯ.