ಇವರು ತಮ್ಮ ಮಾತುಗಾರಿಕೆಯಿಂದಲೇ ಕರ್ನಾಟಕದ ಜನರಿಗೆ ಚಿರಪರಿಚಿತರಾಗಿರುವ ವ್ಯಕ್ತಿ. ಬದುಕಿನಲ್ಲಿ ಹಾಸ್ಯ ಪ್ರಜ್ಞೆಯನ್ನು ಮೈಗೂಡಿಸಿಕೊಂಡಿರುವ ಇವರು, ಹಾಸ್ಯ ಸಂಜೆ ಕಾರ್ಯಕ್ರಮಗಳನ್ನೇ ತಮ್ಮ ಜೀವನಾಧಾರವಾಗಿ ಮಾಡಿಕೊಂಡವರು. ಹೌದು, ಇವರೇ ‘ಅಭಿನವ ಬೀChi’ (*ಬೀChi = ವಿಶಿಷ್ಟ ಹಾಸ್ಯ ಬರಹಗಳಿಗಾಗಿ ಹೆಸರಾಗಿರುವ ರಾಯಸಂ ಭೀಮಸೇನ ರಾವ್) ಎಂದು ಕರೆಯಲ್ಪಡುವ ಪ್ರಾಣೇಶ್ ಅಲಿಯಾಸ್ ಗಂಗಾವತಿ ಪ್ರಾಣೇಶ್.  1960ರ ಸೆಪ್ಟಂಬರ್ 8 ರಂದು ಗಂಗಾವತಿಯಲ್ಲಿ ಜನಿಸಿದ ಪ್ರಾಣೇಶ್ ಅವರ ತಂದೆ ವೆಂಕೋಬಾಚಾರ್, ತಾಯಿ ಸತ್ಯವತಿ. ಬಿ.ಕಾಂ ಪದವೀಧರರಾದ ಪ್ರಾಣೇಶ್, ಬಾಲ್ಯದಲ್ಲೇ ಸಾಹಿತ್ಯಾಸಕ್ತಿ ಬೆಳೆಸಿಕೊಂಡಿದ್ದರು. ಶಿವರಾಮ ಕಾರಂತರು ಮತ್ತು ಎಸ್.ಎಲ್. ಭೈರಪ್ಪನವರ ಕಾದಂಬರಿಗಳ ಜೊತೆಗೆ, ‘ಬೀchi’ ಅವರ ಬರಹಗಳಿಂದ ಪ್ರಭಾವಿತರಾದವರು. ಸಾಹಿತ್ಯ ಮತ್ತು ಹಾಸ್ಯ ಪ್ರಜ್ಞೆಯನ್ನು ಮೈಗೂಡಿಸಿಕೊಂಡ ಪ್ರಾಣೇಶ್, ಅದನ್ನೇ ತಮ್ಮ ಬದುಕಾಗಿಸಿಕೊಂಡರು.

ಕಲಬುರ್ಗಿ ಆಕಾಶವಾಣಿಯ ಮೂಲಕ, ಉತ್ತರ ಕರ್ನಾಟಕ ಭಾಗದ ಜನರ ಮನಸ್ಸನ್ನು ರಂಜಿಸಲು ಆರಂಭಿಸಿದ ಪ್ರಾಣೇಶ್, ನಂತರದ ದಿನಗಳಲ್ಲಿ ನೂರಾರು ಊರುಗಳು, ಪಟ್ಟಣಗಳು ಮತ್ತು ನಗರಗಳಲ್ಲಿ ಹಾಸ್ಯ ಸಂಜೆ ಕಾರ್ಯಕ್ರಮಗಳನ್ನು ನೀಡಿ ಹೆಸರಾಗಿದ್ದಾರೆ. ಖಾಸಗಿ ಟಿ.ವಿ ಚಾನಲ್ ಗಳಲ್ಲಿ ಇವರ ಕಾರ್ಯಕ್ರಮಗಳು ಪ್ರಸಾರವಾಗಲು ಆರಂಭಿಸಿದ ಮೇಲಂತೂ ಇವರ ಮಾತುಗಾರಿಕೆಯ ಖ್ಯಾತಿ ವಿದೇಶಗಳಿಗೂ ತಲುಪಿತ್ತು. ಆ ಬಳಿಕ, ಹಲವಾರು ದೇಶಗಳಿಗೆ ಭೇಟಿ ಕೊಟ್ಟಿರುವ ಪ್ರಾಣೇಶ್, ಅಲ್ಲಿ ನೆಲೆಸಿರುವ ಕನ್ನಡಿಗರನ್ನು ತಮ್ಮ ಮಾತುಗಳಿಂದ ರಂಜಿಸಿದ್ದಾರೆ.

ಉತ್ತರ ಕರ್ನಾಟಕ ಶೈಲಿಯಲ್ಲಿ ‘ಅರಳು ಹುರಿದಂತೆ’ ಮಾತನಾಡುವ ಪ್ರಾಣೇಶ್, ದಿನ ನಿತ್ಯದ ಬದುಕಿನ ಘಟನೆಗಳನ್ನೇ ತಿಳಿ ಹಾಸ್ಯವಾಗಿಸುತ್ತಾ ಹೋಗುತ್ತಾರೆ. ತಬಲಾ ವಾದನ ಮತ್ತು ಕೊಳಲು ನುಡಿಸುವುದನ್ನೂ ಬಲ್ಲ ಪ್ರಾಣೇಶ್, ಲೇಖಕರೂ ಹೌದು. ‘ನಗಿಸುವವನ ನೋವುಗಳು’ ‘ನಗ್ತಾ ನಲಿ ಅಳ್ತಾ ಕಲಿ’, ‘ಪಂಚ್ ಪಕ್ವಾನ್ನ’ ‘ಪ್ರಾಣೇಶ್ ಪ್ರಪಂಚ’, ‘ನಕ್ಕಾಂವ ಗೆದ್ದಾಂವ’, ಇತ್ಯಾದಿ ಪುಸ್ತಕಗಳನ್ನೂ ಬರೆದಿರುವ ಪ್ರಾಣೇಶ್, ಹಲವಾರು ಕ್ಯಾಸೆಟ್ ಮತ್ತು CDಗಳನ್ನೂ ಹೊರತಂದಿದ್ದಾರೆ. YouTubeನಲ್ಲೂ ಸಾಕಷ್ಟು ಜನಪ್ರಿಯರಾಗಿದ್ದಾರೆ. ಶಿವರಾತ್ರಿ ಜಾಗರಣೆ ಕಾರ್ಯಕ್ರಮಗಳು, ಗಣೇಶೋತ್ಸವಗಳೂ ಸೇರಿದಂತೆ ವಿವಿಧ ಸಾಂಸ್ಕೃತಿಕ ವೇದಿಕೆಗಳಲ್ಲಿ ಇವರ ಪ್ರಸ್ತುತಿ ಜನಪ್ರಿಯ. ಹಾಸ್ಯದ ಮೂಲಕ ಜನರನ್ನು ಖುಷಿ ಪಡಿಸುತ್ತಲೇ ಅರಿವು ಮೂಡಿಸುವ ಪ್ರಯತ್ನವನ್ನೂ ಮಾಡುತ್ತಿರುವ ಪ್ರಾಣೇಶ್ ಅವರಿಗೆ ‘ಮಾಧ್ಯಮ ಅನೇಕ’ದ ವತಿಯಿಂದ ಜನ್ಮ ದಿನದ ಶುಭ ಹಾರೈಕೆಗಳು.