ಕಾಯಕ ನಿಷ್ಠೆ, ಪ್ರಾಮಾಣಿಕತೆ ಮತ್ತು ದಕ್ಷತೆಗೆ ಹೆಸರಾಗಿದ್ದ ಸರ್ ಎಂ.ವಿಶ್ವೇಶ್ವರಯ್ಯ ನವರು ಅತ್ಯಂತ ಚಾಣಾಕ್ಷ ಮತಿ ಇಂಜಿನಿಯರ್ ಆಗಿಯೂ ಜಗತ್ ಪ್ರಸಿದ್ಧರು. ಬಹುಶಃ ಇವತ್ತಿಗೂ ಯಾರದ್ದಾದರೂ ಮೆದುಳು ಅಥವ ಬುದ್ಧಿಶಕ್ತಿ ಬಗ್ಗೆ ಜನ ಮಾತಾಡೋದಾದ್ರೆ ಒಬ್ಬರು ಮಹಾವಿಜ್ಞಾನಿ Albert Einstein ಮತ್ತೊಬ್ಬರು ವಿಶ್ವೇಶ್ವರಯ್ಯನವರೇ ಆಗಿರ್ತಾರೆ. ಇವತ್ತು ಮಹಾನ್ ವ್ಯಕ್ತಿ, ಭಾರತ ರತ್ನ ಸರ್ ಎಂ.ವಿಶ್ವೇಶ್ವರಯ್ಯ ನವರ ಜನ್ಮದಿನ.

1860ನೇ ಇಸವಿಯ ಸೆಪ್ಟಂಬರ್ 15ರಂದು ಆಗಿನ ಕೋಲಾರ ಜಿಲ್ಲೆಯ ಚಿಕ್ಕಬಳ್ಳಾಪುರ ಬಳಿಯ ಮುದ್ದೇನಹಳ್ಳಿಯಲ್ಲಿ ಜನಿಸಿದ ವಿಶ್ವೇಶ್ವರಯ್ಯನವರು ನೂರು ವರ್ಷಕ್ಕೂ ಹೆಚ್ಚುಕಾಲ ಬದುಕಿ ತಮ್ಮ ಸಾಧನೆಯ ವಿಶ್ವರೂಪವನ್ನು ಜಗತ್ತಿಗೆ ಪರಿಚಯಿಸಿದವರು. ಒಬ್ಬ ಮಹಾನ್ ಇಂಜಿನಿಯರ್ ಆಗಿದ್ದ ವಿಶ್ವೇಶ್ವರಯ್ಯನವರು ಹುಟ್ಟಿದ ಈ ದಿನವನ್ನು ‘ಇಂಜಿನಿಯರ್ಸ್ ಡೇ’ ಎಂದು ಆಚರಿಸಲಾಗುತ್ತದೆ. ಈ ಮೂಲಕ ಸರ್ ಎಂ.ವಿ. ಅವರಿಗೆ ಮತ್ತು ದೇಶದ ನಿರ್ಮಾಣಕ್ಕಾಗಿ, ನಾಗರಿಕ ಸೌಕರ್ಯ, ಸೌಲಭ್ಯಗಳ ಸೃಷ್ಟಿಗಾಗಿ ತಮ್ಮದೇ ಆದ ರೀತಿಯಲ್ಲಿ ಕೊಡುಗೆ ನೀಡುವ ಇಂಜಿನಿಯರ್ ಗಳ ಸಮುದಾಯಕ್ಕೂ ಗೌರವ ಸಲ್ಲಿಸಲಾಗುತ್ತಿದೆ.   

ವಿಶ್ವೇಶ್ವರಯ್ಯನವರ ತಂದೆ ಶ್ರೀನಿವಾಸ ಶಾಸ್ತ್ರಿ-ತಾಯಿ ವೆಂಕಟಮ್ಮ. ಇವರ ಪೂರ್ವೀಕರು ಆಂಧ್ರಪ್ರದೇಶದ ಮೋಕ್ಷಗುಂಡಂ ಮೂಲದವರಾಗಿದ್ದರಿಂದ ಇವರನ್ನೂ ಮೋಕ್ಷಗುಂಡಂ ವಿಶ್ವೇಶ್ವರಯ್ಯ ಎಂದೇ ಕರೆಯಲಾಗುತ್ತದೆ. ತಮ್ಮ ಪ್ರಾಥಮಿಕ ಶಿಕ್ಷಣವನ್ನು ಚಿಕ್ಕಬಳ್ಳಾಪುರದಲ್ಲಿ ಮುಗಿಸಿದ ವಿಶ್ವೇಶ್ವರಯ್ಯನವರು 1875ರಲ್ಲಿ ಬೆಂಗಳೂರಿಗೆ ಬಂದು ವೆಸ್ಲಿಯನ್ ಮಿಷನ್ ಪ್ರೌಢಶಾಲೆಗೆ ಸೇರುತ್ತಾರೆ. ಇಂಟರ್ ಮೀಡಿಯಟ್ ಬಳಿಕ ಬೆಂಗಳೂರಿನ ಸೆಂಟ್ರಲ್ ಕಾಲೇಜು ಸೇರಿ ಉನ್ನತ ದರ್ಜೆಯಲ್ಲಿ ಬಿ.ಎ ಪದವಿ ಪಡೆಯುತ್ತಾರೆ. ಆ ನಂತರ ಅಂದಿನ ಮೈಸೂರು ಸಂಸ್ಥಾನದ ನೆರವು ಪಡೆದು ಪುಣೆಯ ಸೈನ್ಸ್ ಕಾಲೇಜು ಸೇರಿ, ಪ್ರಥಮ Rank ನೊಂದಿಗೆ ಇಂಜಿನಿಯರಿಂಗ್ ಪದವಿ ಪಡೆಯುತ್ತಾರೆ.

ಮುಂಬೈ ಸರ್ಕಾರ, 1884ರಲ್ಲಿ ವಿಶ್ವೇಶ್ವರಯ್ಯನವರನ್ನು ಅಸಿಸ್ಟೆಂಟ್ ಇಂಜಿನಿಯರ್ ಆಗಿ ನೇಮಕ ಮಾಡಿಕೊಂಡು ನಾಸಿಕ್ ನಗರದಲ್ಲಿ ಸೇವೆಗೆ ನಿಯೋಜಿಸುತ್ತದೆ. ಅಲ್ಲಿಯ ಸೇವೆ ವೇಳೆ ಸವಾಲಿನಿಂದ ಕೂಡಿದ್ದ ಹಲವು ಯೋಜನೆಗಳನ್ನು ಪೂರೈಸುವ ಮೂಲಕ ತಮ್ಮ ಬುದ್ಧಿಶಕ್ತಿಯ ಪರಿಚಯ ಮಾಡಿಕೊಟ್ಟು ಉನ್ನತ ಸ್ಥಾನಕ್ಕೇರುತ್ತಾರೆ. ಸುಮಾರು 24 ವರ್ಷಗಳ ಕಾಲ ಮುಂಬೈ ಸರ್ಕಾರಕ್ಕಾಗಿ ಕೆಲಸ ಮಾಡಿದ ವಿಶ್ವೇಶ್ವರಯ್ಯನವರು ಸೇವೆಯಿಂದ ನಿವೃತ್ತಿ ಪಡೆಯುತ್ತಾರೆ.

ಆ ಬಳಿಕ 1909ರಲ್ಲಿ ವಿಶ್ವೇಶ್ವರಯ್ಯನವರನ್ನು, ಹೈದರಾಬಾದ್ ಸರ್ಕಾರ ಮುಖ್ಯ ಇಂಜಿನಿಯರ್ ಆಗಿ ನೇಮಕ ಮಾಡಿಕೊಳ್ಳುತ್ತದೆ. ಅಲ್ಲಿ ಕೆಲಸ ಮಾಡುತ್ತಿದ್ದಾಗಲೇ ಮೈಸೂರು ಸಂಸ್ಥಾನದ ಮುಖ್ಯ ಇಂಜಿನಿಯರ್ ಆಗಿ ಜವಾಬ್ದಾರಿ ಒಪ್ಪಿಕೊಳ್ಳಲು ಮಹಾರಾಜರ ಕಡೆಯಿಂದ ಒತ್ತಾಯ ಬರುತ್ತದೆ. ಮೊದಲಿಗೆ ಅದನ್ನು ನಿರಾಕರಿಸಿದರೂ ಕೂಡ, 1909ರ ನವೆಂಬರ್ ನಲ್ಲಿ ಆ ಹೊಣೆಗಾರಿಕೆ ಒಪ್ಪಿಕೊಳ್ಳುತ್ತಾರೆ. ಆ ಬಳಿಕ ಕಾವೇರಿ ನದಿಗೆ ಅಡ್ಡಲಾಗಿ ಅಣೆಕಟ್ಟೆ ಕಟ್ಟಲು ಯೋಜನೆ ರೂಪಿಸಿ, ಅದು ಕೃಷ್ಣರಾಜ ಸಾಗರದ ರೂಪದಲ್ಲಿ ಸಾಕಾರಗೊಳ್ಳಲು ಶ್ರಮಿಸುತ್ತಾರೆ.

1912ರಲ್ಲಿ ಮೈಸೂರು ಸಂಸ್ಥಾನದ ದಿವಾನರಾಗಿ ನೇಮಕಗೊಂಡು ಪ್ರಾಂತ್ಯದ ಸರ್ವಾಂಗೀಣ ಅಭಿವೃದ್ಧಿಗೆ ಕೊಡುಗೆ ನೀಡುತ್ತಾರೆ. 1914ರಲ್ಲಿ ಬೆಂಗಳೂರಿನಲ್ಲಿ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಆರಂಭಿಸುವಲ್ಲಿ ಮತ್ತು 1916ರಲ್ಲಿ ಮೈಸೂರು ವಿಶ್ವವಿದ್ಯಾಲಯ ಸ್ಥಾಪನೆಯಾಗುವಲ್ಲಿ ಪ್ರಮುಖ ಪಾತ್ರವಹಿಸುತ್ತಾರೆ. ಕನ್ನಡ ಸಾಹಿತ್ಯ ಪರಿಷತ್ತು, ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ಭದ್ರಾವತಿಯಲ್ಲಿ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ, ಬೆಂಗಳೂರಿನಲ್ಲಿ ಮೈಸೂರು ಸ್ಯಾಂಡಲ್  ಸೋಪ್ ಫ್ಯಾಕ್ಟರಿ ಆರಂಭಕ್ಕೂ ಕಾರಣಕರ್ತರಾದ ವಿಶ್ವೇಶ್ವರಯ್ಯನವರು 1918ರಲ್ಲಿ ದಿವಾನ ಹುದ್ದೆಯಿಂದ ಕೆಳಗಿಳಿಯುತ್ತಾರೆ.

ಭದ್ರಾವತಿಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಯ ಮುಖ್ಯಸ್ಥರಾಗಿ ತಾವು ಸಲ್ಲಿಸಿದ್ದ ಸೇವೆಗಾಗಿ ಅಂದಿನ ಸರ್ಕಾರ ಕೊಡಬಯಸಿದ ವೇತನದ ಮೊತ್ತವನ್ನು ಸರ್ಕಾರಕ್ಕೇ ಹಿಂದಿರುಗಿಸಿದ ವಿಶ್ವೇಶ್ವರಯ್ಯನವರು, ಬೆಂಗಳೂರಿನಲ್ಲಿ ಜಯಚಾಮರಾಜೇಂದ್ರ ಪಾಲಿಟೆಕ್ನಿಕ್ ಆರಂಭಿಸಲು ಹೇಳುತ್ತಾರೆ. ಇಳಿ ವಯಸ್ಸಿನಲ್ಲೂ ಚಟುವಟಿಕೆಯಿಂದ ಕೂಡಿದ್ದ ಸರ್ ಎಂ.ವಿ ಅವರು ವಿವಿಧ ರಾಜ್ಯಗಳ ಹಲವಾರು ಯೋಜನೆಗಳಿಗೆ ಸಲಹೆ ಸೂಚನೆ ನೀಡುತ್ತಿದ್ದರು.

1915ರಲ್ಲೇ ಅಂದಿನ ಬ್ರಿಟಿಷ್ ಸರ್ಕಾರದಿಂದ ಸರ್ ಬಿರುದು ಪಡೆದಿದ್ದ ಕಾಯಕ ಯೋಗಿ ವಿಶ್ವೇಶ್ವರಯ್ಯನವರಿಗೆ, 1955ರಲ್ಲಿ ದೇಶದ ಅತ್ಯುನ್ನತ ಭಾರತ ರತ್ನ ಪುರಸ್ಕಾರವನ್ನಿತ್ತು ಗೌರವಿಸಲಾಗುತ್ತದೆ. ಒಂದು ನೂರ ಎರಡು ವರ್ಷಗಳ ಕಾಲದ ಸಾರ್ಥಕ ಜೀವನ ನಡೆಸಿದ ವಿಶ್ವೇಶ್ವರಯ್ಯನವರು 1962ರ ಏಪ್ರಿಲ್ 14ರಂದು ದೈವಾಧೀನರಾಗುತ್ತಾರೆ.

ಕರ್ತವ್ಯ ನಿಷ್ಠೆ ಮತ್ತು ಪ್ರಾಮಾಣಿಕತೆಗೆ ಮತ್ತೊಂದು ಹೆಸರಾಗಿದ್ದ ಸರ್ ಎಂ.ವಿಶ್ವೇಶ್ವರಯ್ಯನವರ ಜನ್ಮ ದಿನದಂದು ಅವರನ್ನು ಸ್ಮರಿಸೋಣ ಹಾಗೂ ಅವರ ಆದರ್ಶಗಳನ್ನು ನಾವುಗಳು ಎಷ್ಟರಮಟ್ಟಿಗೆ ಪಾಲಿಸುತ್ತಿದ್ದೇವೆ ಎಂಬ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳೋಣ.