Teachers Day Sep 5, 2020

ಮಹಾ ಗುರು ಡಾ. ಎಸ್. ರಾಧಾಕೃಷ್ಣನ್

ಭಾರತೀಯರು ಗುರು ಅನ್ನುವ ವ್ಯಕ್ತಿತ್ವವನ್ನು ದೇವರಿಗೆ ಸಮವಾಗಿಸಿ ಗೌರವಿಸುತ್ತಾರೆ. ನಮ್ಮ ದೇಶದ ಗುರು-ಶಿಷ್ಯ ಪರಂಪರೆಗೆ ಸಾವಿರಾರು ವರ್ಷಗಳ ಭವ್ಯ ಇತಿಹಾಸವಿದೆ.

‘ನ ಗುರೋರ್ ಅಧಿಕಮ್’ ಅಂದರೆ ಗುರುವಿಗಿಂತ ಮಹತ್ತರವಾದದ್ದು ಯಾವುದೂ ಇಲ್ಲ ಅನ್ನುವುದು ಭಾರತೀಯರ ನಂಬಿಕೆ. ಇಂಥ ಗುರು ಅಥವ ಶಿಕ್ಷಕರನ್ನು ಪ್ರತಿದಿನ, ಪ್ರತಿಕ್ಷಣವೂ ನೆನೆಯಲಾಗುತ್ತದೆ.

ಇದರೊಂದಿಗೆ, ನಾವು ಕಳೆದ 58 ವರ್ಷಗಳಿಂದಲೂ ಪ್ರತಿ ವರ್ಷ ಸೆಪ್ಟಂಬರ್ 5 ನೇ ದಿನಾಂಕವನ್ನು ಶಿಕ್ಷಕರ ದಿನವೆಂದು ಆಚರಿಸುತ್ತೇವೆ. ಇದಕ್ಕೆ ಕಾರಣರಾದವರು ಮಹಾನ್ ಶಿಕ್ಷಕ ಡಾ. ಸರ್ವೆಪಲ್ಲಿ ರಾಧಾಕೃಷ್ಣನ್. ಈ ಮಹಾನುಭಾವರ ಜನ್ಮದಿನದಂದು, ಅವರ ಬದುಕು ಮತ್ತು ಸಾಧನೆಗಳ ಬಗ್ಗೆ ಪರಿಚಯ ಮಾಡಿಕೊಡುತ್ತಿರುವ ಮಾಧ್ಯಮ ಅನೇಕ ಸಂಸ್ಥೆ, ಈ ಮೂಲಕ ಅವರಿಗೆ ನಮನಗಳನ್ನು ಸಲ್ಲಿಸುತ್ತಿದೆ.

ಬಾಲ್ಯ ಮತ್ತು ವಿದ್ಯಾಭ್ಯಾಸ

ರಾಧಾಕೃಷ್ಣನ್ ಅವರು, ಈಗಿನ ತಮಿಳುನಾಡು ರಾಜ್ಯದ ತಿರುತ್ತಣಿ ಎಂಬ ಗ್ರಾಮದಲ್ಲಿ ವೀರಾಸ್ವಾಮಿ ಮತ್ತು ಸೀತಮ್ಮ ದಂಪತಿಯ ಮಗನಾಗಿ 1888ರ ಸೆಪ್ಟಂಬರ್ 5 ರಂದು ಜನಿಸಿದರು. ರಾಧಾಕೃಷ್ಣನ್ ಅವರದ್ದು ತೆಲುಗು ಭಾಷಿಕ ಕುಟುಂಬವಾಗಿದ್ದು, ತಂದೆ ವೀರಾಸ್ವಾಮಿ ತಹಸೀಲ್ದಾರ್ ಕಚೇರಿಯಲ್ಲಿ ಸಹಾಯಕರಾಗಿ ಕೆಲಸ ಮಾಡುತ್ತಿದ್ದರು. ರಾಧಾಕೃಷ್ಣನ್ ಅವರಿಗೆ ನಾಲ್ವರು ಸೋದರರು ಮತ್ತು ಒಬ್ಬ ಸೋದರಿ ಇದ್ದರು. ತಮ್ಮ ಮಗ ಪುರೋಹಿತನಾಗಬೇಕು ಅನ್ನುವುದು ಅವರ ತಂದೆಯ ಅಪೇಕ್ಷೆಯಾಗಿತ್ತಂತೆ.

ಸ್ಥಳೀಯ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ರಾಧಾಕೃಷ್ಣನ್, ಆ ಬಳಿಕ ತಿರುಪತಿಯ Lutheran Mission High School ಸೇರಿದರು. ರಾಧಾಕೃಷ್ಣನ್ ಅವರ 15ನೇ ವಯಸ್ಸಿನಲ್ಲಿಯೇ 10 ವರ್ಷದ ಶಿವಕಾಮು ಅಮ್ಮನವರ ಜೊತೆ ವಿವಾಹ ಆಯಿತು. ತಿರುಪತಿಯಲ್ಲಿನ ಕ್ರೈಸ್ತ ಮಿಷನರಿಗಳ ಶಾಲೆಯಲ್ಲಿ ಓದಿದ್ದು, ರಾಧಾಕೃಷ್ಣನ್ ಅವರಿಗೆ ಇತರೆ ಧರ್ಮಗಳ ಬಗ್ಗೆ ತಿಳಿದುಕೊಳ್ಳಲು ಅವಕಾಶ ಮಾಡಿಕೊಟ್ಚಿತು. ತಿರುಪತಿಯಿಂದ ವೆಲ್ಲೂರಿನ Voorhees College ಗೆ ಬಂದ ರಾಧಾಕೃಷ್ಣನ್ 1900 ರಿಂದ 1904ರ ವರೆಗೆ ಅಲ್ಲಿ ವಿದ್ಯಾಭ್ಯಾಸ ಮಾಡಿದರು. ಅಲ್ಲೂ ಕೂಡ ಓದಿನ ಜೊತೆಗೆ ಕ್ರೈಸ್ತ ಧರ್ಮದ ತತ್ವಗಳ ಪ್ರಭಾವ ಆಯಿತು.

ಮದ್ರಾಸ್ ನಲ್ಲಿ ವಿದ್ಯಾಭ್ಯಾಸ

ಆ ಬಳಿಕ, Madras Christian College ಸೇರಿದ ರಾಧಾಕೃಷ್ಣನ್, ತತ್ವಶಾಸ್ತ್ರವನ್ನು ಪ್ರಮುಖ ಅಧ್ಯಯನದ ವಿಚಾರವಾಗಿ ಆಯ್ಕೆ ಮಾಡಿಕೊಂಡು ಬಿ.ಎ ಮತ್ತು ಎಂ.ಎ ಪದವಿ ಪಡೆದರು. ಹಿಂದೂ ಧರ್ಮದ ಬಗ್ಗೆ ಕ್ರೈಸ್ತರು ವ್ಯಕ್ತ ಪಡಿಸುತ್ತಿದ್ದ ಅಭಿಪ್ರಾಯಗಳು ಮತ್ತು ಟೀಕೆಗಳು ರಾಧಾಕೃಷ್ಣನ್ ಅವರನ್ನು ಚಿಂತನೆಗೆ ಹಚ್ಚಿದವು. ಸ್ವಾಮಿ ವಿವೇಕಾನಂದ ಮತ್ತು ಗುರುದೇವ ರವೀಂದ್ರನಾಥ ಟಾಗೋರರ ಚಿಂತನೆಗಳಿಂದ ಪ್ರಭಾವಿತರಾಗಿದ್ದ ರಾಧಾಕೃಷ್ಣನ್, ‘ನಾನು ಹಿಂದೂ ಧರ್ಮವನ್ನು ಆಳವಾಗಿ ಅಧ್ಯಯನ ಮಾಡಿ ಟೀಕಾರಕಾರರಿಗೆ ಸೂಕ್ತವಾದ ಉತ್ತರ ಕೊಡಬೇಕು’ ಎಂದು ನಿರ್ಧರಿಸಿ, ವೇದಾಂತದ ನೈತಿಕ ಮೌಲ್ಯಗಳ ಬಗ್ಗೆ ಮಹಾ ಪ್ರಬಂಧ ಬರೆದರು.

ಪ್ರೆಸಿಡೆನ್ಸಿ ಕಾಲೇಜಿನಲ್ಲಿ ತತ್ವಶಾಸ್ತ್ರದ ಶಿಕ್ಷಕ

ಆ ಬಳಿಕ 1909ರಲ್ಲಿ ಮದ್ರಾಸಿನ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ತತ್ವಶಾಸ್ತ್ರದ ಶಿಕ್ಷಕನಾಗಿ ವೃತ್ತಿ ಜೀವನ ಆರಂಭಿಸಿದರು. ಅದೇ ವೇಳೆ ಉಪನಿಷತ್ತು, ಭಗವದ್ಗೀತೆ ಮತ್ತು ಪಾಶ್ಚಾತ್ಯ ಚಿಂತಕರ ಪುಸ್ತಕಗಳನ್ನೂ ಅಧ್ಯಯನ ಮಾಡತೊಡಗಿದರು. ರಾಧಾಕೃಷ್ಣನ್ ಅವರ ಅಪಾರ ಅಧ್ಯಯನದ ಫಲವಾಗಿ ಹೊರಹೊಮ್ಮಿದ ಚಿಂತನೆಗಳು, ದೇಶ ಮತ್ತು ವಿದೇಶಗಳ ಪ್ರತಿಷ್ಠಿತ ಪತ್ರಿಕೆಗಳಲ್ಲಿ ಪ್ರಕಟಗೊಂಡವು. ಆ ಬಳಿಕ ರಾಧಾಕೃಷ್ಣನ್ ಅವರು, ಜಾಗತಿಕ ಮಟ್ಟದಲ್ಲಿ ತತ್ವಜ್ಞಾನಿಯೆಂದು ಗುರುತಿಸಲ್ಪಟ್ಟರು.

ಮೈಸೂರು ವಿ.ವಿಯಲ್ಲಿ ಪ್ರಾಧ್ಯಾಪಕ

1918ರಲ್ಲಿ, ರಾಧಾಕೃಷ್ಣನ್ ಅವರು ಮೈಸೂರು ವಿಶ್ವ ವಿದ್ಯಾಲಯದ ತತ್ವಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾಗಿ ನೇಮಕಗೊಂಡರು. ಮಹಾರಾಜ ಕಾಲೇಜಿನಲ್ಲಿ ಪಾಠ ಹೇಳುತ್ತಿದ್ದ ರಾಧಾಕೃಷ್ಣನ್, ಮೈಸೂರಿನ ಸರಸ್ವತೀಪುರಂ ಬಡಾವಣೆಯ ಪ್ರಾಧ್ಯಾಪಕರ ಬಂಗಲೆಯಲ್ಲಿ ವಾಸವಿದ್ದರು. ರಾಧಾಕೃಷ್ಣನ್ ಅವರ ಅಪಾರ ಜ್ಞಾನ, ಬೋಧನಾ ಶೈಲಿ ಮತ್ತು ಆಕರ್ಷಕ ವ್ಯಕ್ತಿತ್ವದಿಂದ ವಿದ್ಯಾರ್ಥಿಗಳು ಪ್ರಭಾವಿತರಾಗಿದ್ದರು. ಕನ್ನಡದ ಪ್ರಸಿದ್ಧ ಲೇಖಕ ಎ.ಎನ್.ಮೂರ್ತಿರಾಯರೂ ಕೂಡ ಡಾ.ರಾಧಾಕೃಷ್ಣನ್ ಅವರ ವಿದ್ಯಾರ್ಥಿಯಾಗಿದ್ದರು.

ಮೈಸೂರಿನಿಂದ ಕೊಲ್ಕತ್ತಕ್ಕೆ ಪ್ರಯಾಣ

ರಾಧಾಕೃಷ್ಣನ್ ಅವರು 1921ರಲ್ಲಿ ಕೊಲ್ಕತ್ತ ವಿ.ವಿಯ ಐದನೇ ಜಾರ್ಜ್ ತತ್ವಜ್ಞಾನ ಅಧ್ಯಯನ ಪೀಠಕ್ಕೆ(George V, Chair of philosophy) ಪ್ರಾಧ್ಯಾಪಕರಾಗಿ ನೇಮಕಗೊಂಡರು. ಮೈಸೂರಿನಿಂದ ರಾಧಾಕೃಷ್ಣನ್ ಅವರು ಕೊಲ್ಕತ್ತಕ್ಕೆ ಹೊರಡುವ ಸಂದರ್ಭದಲ್ಲಿ, ವಿದ್ಯಾರ್ಥಿಗಳು ತಮ್ಮ ಗುರುಗಳನ್ನು ಹೂಗಳಿಂದ ಅಲಂಕರಿಸಿದ್ದ ತೆರೆದ ಸಾರೋಟು ಗಾಡಿಯಲ್ಲಿ ಕೂರಿಸಿಕೊಂಡು ಆದನ್ನು ಕೈಯ್ಯಿಂದಲೇ ಎಳೆಯುತ್ತಾ ರೈಲು ನಿಲ್ದಾಣಕ್ಕೆ ಕರೆತಂದು ಬೀಳ್ಕೊಟ್ಟಿದ್ದರು.

ಹುಡುಕಿ ಬಂದ ಸ್ಥಾನ-ಮಾನಗಳು

ರಾಧಾಕೃಷ್ಣನ್ ಅವರ ಜ್ಞಾನ, ಚಿಂತನೆ ಮತ್ತು ಮತ್ತು ಘನತೆಗಳು ಬದುಕಿನಲ್ಲಿ ಅವರಿಗೆ ಹಲವಾರು ಅತ್ಯುನ್ನತ ಸ್ಥಾನ ಮಾನಗಳನ್ನು ತಂದುಕೊಡುತ್ತಾ ಹೋದವು. 1931ರಲ್ಲಿ ಅಂದಿನ ಬ್ರಿಟಿಷ್ ಸರ್ಕಾರ ರಾಧಾಕೃಷ್ಣನ್ ಅವರಿಗೆ knighthood ಅಂದರೆ ‘ಸರ್’ ಎಂಬ ಬಿರುದಿತ್ತು ಗೌರವಿಸಿತ್ತು. 1931ರಿಂದ 1936 ಅವಧಿಯಲ್ಲಿ ಆಂಧ್ರ ವಿ.ವಿಯ ಉಪಕುಲಪತಿಯಾಗಿ ಸೇವೆ ಸಲ್ಲಿಸಿದ ಡಾ.ರಾಧಾಕೃಷ್ಣನ್ ಅವರನ್ನು, 1936ರಲ್ಲಿ ಇಂಗ್ಲೆಂಡಿನ ಪ್ರತಿಷ್ಠಿತ Oxford ವಿ.ವಿಯ ಪ್ರಾಧ್ಯಾಪಕರಾಗಿ ನೇಮಿಸಲಾಯಿತು. ಪ್ರತಿ ವರ್ಷದಲ್ಲಿ ಅರ್ಧ ಸಮಯವನ್ನು ಅಲ್ಲಿ ಪಾಠಮಾಡುವುದರಲ್ಲಿ ಮತ್ತರ್ಧ ಸಮಯವನ್ನು ಭಾರತದಲ್ಲಿ ಕಳೆಯಲು ಅವಕಾಶ ನೀಡಲಾಗಿತ್ತು, 1952ರ ವರೆಗೂ ಇದು ಹೀಗೇ ಮುಂದುವರೆದಿತ್ತು. ಇದೇ ವೇಳೆ ಡಾ.ರಾಧಾಕೃಷ್ಣನ್ ಅವರು 1939ರಿಂದ 1948ರ ಅವಧಿಯಲ್ಲಿ ಬನಾರಸ್ ಹಿಂದೂ ವಿ.ವಿಯ ಉಪಕುಲಪತಿಯಾಗಿಯೂ ಕರ್ತವ್ಯ ನಿರ್ವಹಿಸಿದರು.

ರಷ್ಯಾದ ರಾಯಭಾರಿಯಾಗಿ ಸೇವೆ

ಈ ನಡುವೆ 1946ರಲ್ಲಿ ರಾಧಾಕೃಷ್ಣನ್ ಅವರನ್ನು Constituent Assembly ಸಭೆಯ ಸದಸ್ಯರನ್ನಾಗಿ ಆಯ್ಕೆ ಮಾಡಲಾಗಿತ್ತು ಮತ್ತು UNESCOದಲ್ಲಿ ಭಾರತದ ರಾಯಭಾರಿಯಾಗಿ ನೇಮಿಸಲಾಗಿತ್ತು. 1948ರಲ್ಲಿ ಕೇಂದ್ರ ಶಿಕ್ಷಣ ಆಯೋಗದ ಅಧ್ಯಕ್ಷರಾಗಿದ್ದ ರಾಧಾಕೃಷ್ಣನ್ ಅವರು, ಭಾರತದ ಶೈಕ್ಷಣಿಕ ಪದ್ಧತಿಯಲ್ಲಿ ಹಲವಾರು ಸುಧಾರಣೆಗಳನ್ನು ಜಾರಿಗೆ ತಂದರು. ಆ ನಂತರ  1949ರಲ್ಲಿ ರಷ್ಯಾ ದೇಶದಲ್ಲಿ ಭಾರತದ ರಾಯಭಾರಿ ಆಗಿ ನೇಮಕಗೊಂಡ ರಾಧಾಕೃಷ್ಣನ್, ಭಾರತ-ರಷ್ಯಾ ಸಂಬಂಧಗಳ ವೃದ್ಧಿಗೆ ಅಪಾರ ಕೊಡುಗೆ ನೀಡಿದರು.

ಉಪರಾಷ್ಟ್ರಪತಿ ಹುದ್ದೆ

1952ರಲ್ಲಿ ರಾಧಾಕೃಷ್ಣನ್ ಅವರನ್ನು ಭಾರತಕ್ಕೆ ವಾಪಸ್ ಕರೆಸಿಕೊಂಡ ಅಂದಿನ ಪ್ರಧಾನಿ ನೆಹರು, ದೇಶದ ಉಪರಾಷ್ಟ್ರಪತಿ ಆಗಿ ನೇಮಕ ಮಾಡಿದರು. 1952ರಿಂದ 1962ರ ವರೆಗೆ ಹತ್ತು ವರ್ಷಗಳ ಕಾಲ ಉಪರಾಷ್ಟ್ರಪತಿ ಹುದ್ದೆಯಲ್ಲಿದ್ದ ರಾಧಾಕೃಷ್ಣನ್, ರಾಜ್ಯಸಭೆಯ ಸಭಾಪತಿಯಾಗಿ ಅತ್ಯುತ್ತಮವಾಗಿ ಸದನವನ್ನು ನಿರ್ವಹಿಸುತ್ತಿದ್ದರು. ಯಾವುದಾದರೂ ಕಾರಣಕ್ಕೆ ಸಂಸದರು ಗದ್ದಲವೆಬ್ಬಿಸಿದರೆ, ಸಂಸ್ಕೃತ ಸುಭಾಷಿತಗಳು ಅಥವ ಬೈಬಲ್ ನಲ್ಲಿನ ಉಕ್ತಿಗಳನ್ನು ಹೇಳುವ ಮೂಲಕ ಅವರು ಶಾಂತರಾಗುವಂತೆ ಮಾಡುತ್ತಿದ್ದರು.

ಭಾರತದ ರಾಷ್ಟ್ರಪತಿಯಾಗಿ ಡಾ.ಎಸ್.ರಾಧಾಕೃಷ್ಣನ್

ಆನಂತರ 1962ರಲ್ಲಿ, ಬಾಬು ರಾಜೇಂದ್ರ ಪ್ರಸಾದ್ ಅವರ ಬಳಿಕ, ಭಾರತದ ಎರಡನೇ ರಾಷ್ಟ್ರಪತಿಯಾಗಿ ದೇಶದ ಅತ್ಯುನ್ನತ ಹುದ್ದೆಯನ್ನು ಅಲಂಕರಿಸಿದ ರಾಧಾಕೃಷ್ಣನ್, 1967ರ ವರೆಗೂ ಆ ಸ್ಥಾನದಲ್ಲಿದ್ದರು. ಭಾರತದ ತತ್ವಜ್ಞಾನಿ ರಾಷ್ಟ್ರಪತಿ ಎಂದೇ ಕರೆಯಲ್ಪಡುತ್ತಿದ್ದ ಡಾ.ರಾಧಾಕೃಷ್ಣನ್, ತಮ್ಮ ಅವಧಿಯಲ್ಲಿ ನೆಹರು, ಗುಲ್ಜಾರಿ ಲಾಲ್ ನಂದ, ಲಾಲ್ ಬಹದ್ದೂರ್ ಶಾಸ್ತ್ರಿ ಮತ್ತು ಇಂದಿರಾ ಗಾಂಧಿಯವರನ್ನು ದೇಶದ ಪ್ರಧಾನಿ ಸ್ಥಾನದಲ್ಲಿ ಕಂಡಿದ್ದರು.

ರಾಧಾಕೃಷ್ಣನ್ ಅವರು ರಾಷ್ಟ್ರಪತಿ ಆಗಿದ್ದಾಗ ಅವರಿಗೆ ತಿಂಗಳಿಗೆ 10 ಸಾವಿರ ರೂಪಾಯಿಗಳ ವೇತನ ನಿಗದಿಯಾಗಿತ್ತು. ಆದರೆ, ರಾಧಾಕೃಷ್ಣನ್ ಎರಡೂವರೆ ಸಾವಿರ ರೂಪಾಯಿಗಳನ್ನು ಮಾತ್ರ ಸಂಬಳವಾಗಿ ಪಡೆದು ಉಳಿದ ಹಣವನ್ನು ಪ್ರಧಾನ ಮಂತ್ರಿಗಳ ಪರಿಹಾರ ನಿಧಿಗೆ ಕಳಿಸುತ್ತಿದ್ದರು. ವಯೋವೃದ್ಧರು ಮತ್ತು ನಿರ್ಗತಿಕರಿಗೆ ನೆರವಾಗುವ Helpage India ಎಂಬ ಸರ್ಕಾರೇತರ ಸಂಸ್ಥೆಯನ್ನೂ ರಾಧಾಕೃಷ್ಣನ್ ಸ್ಥಾಪಿಸಿದ್ದರು

ಶಿಕ್ಷಕರ ದಿನಾಚರಣೆ ಆರಂಭ

ರಾಧಾಕೃಷ್ಣನ್ ಅವರು, ರಾಷ್ಟ್ರಪತಿ ಹುದ್ದೆಗೇರಿದ ಮೇಲೆ ಅವರನ್ನು ಭೇಟಿ ಮಾಡಿದ ಅವರ ಶಿಷ್ಯ ಬಳಗ, ನಾವು ನಿಮ್ಮ ಜನ್ಮ ದಿನಾಚರಣೆ ಮಾಡಲು ಅವಕಾಶ ಕೊಡಿ ಎಂದು ಕೇಳಿಕೊಂಡಿತ್ತು. ಅದಕ್ಕೆ ಸ್ಪಂದಿಸಿದ ರಾಧಾಕೃಷ್ಣನ್, ನನ್ನ ಜನ್ಮದಿನವನ್ನು ಶಿಕ್ಷಕರ ದಿನವನ್ನಾಗಿ ಆಚರಿಸಿದರೆ ನನಗೆ ತುಂಬಾ ಸಂತೋಷ ಎಂದಿದ್ದರು. ಆ ಬಳಿಕ,  ಮಹಾನ್ ಶಿಕ್ಷಕ, ಚಿಂತಕ, ಮತ್ತು ತತ್ವಜ್ಞಾನಿ ಡಾ.ರಾಧಾಕೃಷ್ಣನ್ ಅವರ ಜನ್ಮ ದಿನವಾದ ಸೆಪ್ಟಂಬರ್ 5 ನೇ ದಿನಾಂಕವನ್ನು ದೇಶಾದ್ಯಂತ ಶಿಕ್ಷಕರ ದಿನವಾಗಿ ಆಚರಿಸಿಕೊಂಡು ಬರಲಾಗುತ್ತಿದೆ.

ಭಾರತ ರತ್ನ ಡಾ.ಎಸ್.ರಾಧಾಕೃಷ್ಣನ್

1954ರಲ್ಲಿ ರಾಧಾಕೃಷ್ಣನ್ ಅವರು ಉಪರಾಷ್ಟ್ರಪತಿಯಾಗಿದ್ದಾಗಲೇ ಅವರಿಗೆ ದೇಶದ ಅತ್ಯುನ್ನತ ‘ಭಾರತ ರತ್ನ’ ಪುರಸ್ಕಾರವನ್ನಿತ್ತು ಗೌರವಿಸಲಾಗಿತ್ತು.  1954ರಲ್ಲೇ ರಾಧಾಕೃಷ್ಣನ್ ಅವರಿಗೆ, ಜರ್ಮನಿಯ “Order pour le Merite for Arts and Science” ಪ್ರಶಸ್ತಿ. 1961ರಲ್ಲಿ Peace Prize of the German Book Trade ಮತ್ತು ‘ಎಲ್ಲ ಜನರಿಗೂ ಪ್ರೀತಿ ಮತ್ತು ವಿವೇಕವನ್ನು ನೀಡುವ ದೇವರು ಎಂಬ ಸಾರ್ವತ್ರಿಕ ಸತ್ಯವನ್ನು ಪ್ರಚುರ ಪಡಿಸುವ ಕೆಲಸದಲ್ಲಿ ತೊಡಗಿದ್ದಕ್ಕಾಗಿ’ 1975ರಲ್ಲಿ Templeton ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ಆ ಸಂದರ್ಭದಲ್ಲಿ ದೊರೆತ ಸಂಪೂರ್ಣ ಬಹುಮಾನದ ಹಣವನ್ನು ರಾಧಾಕೃಷ್ಣನ್ ಅವರು Oxford Universityಗೆ ಕೊಡುಗೆಯಾಗಿ ನೀಡಿದ್ದರು.

ಡಾ. ಎಸ್.ರಾಧಾಕೃಷ್ಣನ್ ಬರಹಗಳು

ಒಂದು ಕಾಲದಲ್ಲಿ ಪಾಶ್ಚಾತ್ಯರಲ್ಲಿ ಹಿಂದೂ ಧರ್ಮದ ಬಗ್ಗೆ ಇದ್ದ ತಪ್ಪು ತಿಳುವಳಿಕೆಗಳನ್ನು, ತಮ್ಮ ಅದ್ಭುತ ಭಾಷಣಗಳು ಹಾಗೂ ಪುಸ್ತಕಗಳ ಮೂಲಕ ದೂರ ಮಾಡಿದ ಗೌರವ ಡಾ.ರಾಧಾಕೃಷ್ಣನ್ ಅವರಿಗೆ ಸಲ್ಲುತ್ತದೆ.  ಡಾ.ರಾಧಾಕೃಷ್ಣನ್ ಹತ್ತಾರು ಪುಸ್ತಕಗಳನ್ನು ಬರೆದಿದ್ದು, ಅವುಗಳಲ್ಲಿ Indian Philosophy, (1923–27) The Philosophy of the Upanishads (1924), The Hindu View of Life, An Idealist View of Life (1932), Eastern Religions and Western Thought (1939), East and West: Some Reflections (1955) ಪುಸ್ತಕಗಳು ಭಾರತ ಮತ್ತು ವಿದೇಶಗಳಲ್ಲೂ ಜನಪ್ರಿಯವಾಗಿವೆ. 16 ಬಾರಿ ಸಾಹಿತ್ಯ ಕ್ಷೇತ್ರದ ನೊಬೆಲ್ ಪಾರಿತೋಷಕಕ್ಕೆ ಮತ್ತು 11 ಬಾರಿ ನೊಬೆಲ್ ಶಾಂತಿ ಪುರಸ್ಕಾರಕ್ಕಾಗಿ ಇವರನ್ನು ನಾಮನಿರ್ದೇಶನ ಮಾಡಲಾಗಿತ್ತು ಅನ್ನುವುದು ಡಾ.ರಾಧಾಕೃಷ್ಣನ್ ಅವರು ಎಷ್ಟರ ಮಟ್ಟಿಗೆ ಜನಪ್ರಿಯರಾಗಿದ್ದರು ಅನ್ನುವುದಕ್ಕೆ ಸಾಕ್ಷಿ.

ತತ್ವಶಾಸ್ತ್ರ ಮತ್ತು ಭಾರತೀಯ ಸಂಸ್ಕೃತಿ ಕೇಂದ್ರ

ಡಾ. ಎಸ್.ರಾಧಾಕೃಷ್ಣನ್ ಅವರು ಮೈಸೂರಿನಲ್ಲಿ ವಾಸವಾಗಿದ್ದ ಬಂಗಲೆಯನ್ನು ಸಂರಕ್ಷಿಸಿರುವ ಮೈಸೂರು ವಿಶ್ವವಿದ್ಯಾಲಯ, ಅದನ್ನು ಅವರ ಹೆಸರಿನಲ್ಲೇ ತತ್ವಶಾಸ್ತ್ರ ಮತ್ತು ಭಾರತೀಯ ಸಂಸ್ಕೃತಿ ಕೇಂದ್ರವಾಗಿಸಿ, ಅವರ ಸುಂದರ ಪ್ರತಿಮೆ ಸ್ಥಾಪಿಸಿದೆ. ಈ ಕೇಂದ್ರ ಗ್ರಂಥಾಲಯವನ್ನೂ ಹೊಂದಿದ್ದು ಸಂಶೋಧನಾ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಸಾರ್ವಜನಿಕರೂ ಕೂಡ ಅದರ ಸದುಪಯೋಗ ಪಡೆಯುತ್ತಿದ್ದಾರೆ.

ಜ್ಞಾನ ಮತ್ತು ಉದಾತ್ತ ಮೌಲ್ಯಗಳ ಸಾಕಾರ ರೂಪ

1975ರ ಏಪ್ರಿಲ್ 17ರಂದು ತಮ್ಮ 86 ನೇ ವಯಸ್ಸಿನಲ್ಲಿ ನಿಧನರಾದ ಡಾ.ರಾಧಾಕೃಷ್ಣನ್, ಅಪಾರ ಜ್ಞಾನ ಮತ್ತು ಉದಾತ್ತ ಮೌಲ್ಯಗಳ ಸಾಕಾರ ರೂಪದಂತಿದ್ದರು. ‘Teachers should be the best minds in the country’ ಎಂದು ಪ್ರತಿಪಾದಿಸುತ್ತಿದ್ದ ಮತ್ತು ಆ ಮಾತಿಗೇ ತಾವೇ ಒಂದು ಅತ್ಯುತ್ತಮ ಉದಾಹರಣೆಯಾಗಿ ಬದುಕಿದ್ದ ಆದರ್ಶ ಗುರು ಡಾ. ರಾಧಾಕೃಷ್ಣನ್ ಅವರ ಜನ್ಮದಿನವನ್ನು ಶಿಕ್ಷಕರ ದಿನವಾಗಿ ಆಚರಿಸುವುದು ನಿಜಕ್ಕೂ ನಮ್ಮೆಲ್ಲರ ಸೌಭಾಗ್ಯ. ಈ ಶುಭ ಸಂದರ್ಭದಲ್ಲಿ ದೇಶದ ಎಲ್ಲ ಶಿಕ್ಷಕ ವೃಂದಕ್ಕೆ ಮಾಧ್ಯಮ ಅನೇಕ ಸಂಸ್ಥೆಯ ಗೌರವ ಪೂರ್ವಕ ಶುಭ ಹಾರೈಕೆಗಳು.