ಕೃಷಿ ವಿಜ್ಞಾನಿ ಮತ್ತು ಕಾದಂಬರಿಕಾರ ಡಾ. ಕೆ ಎನ್ ಗಣೇಶಯ್ಯನವರನ್ನು ಕನ್ನಡದ ಪ್ರಮುಖ ಸುದ್ದಿವಾಹಿನಿ TV18 ನವರು ಕೊಡ ಮಾಡುವ “ವರ್ಷದ  ಕನ್ನಡಿಗ-2021” ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.  ನಿವೃತ್ತ ನ್ಯಾಯಮೂರ್ತಿ ಹೆಚ್.ಎನ್.ನಾಗಮೋಹನ್ ದಾಸ್, ಸಾಹಿತಿ ದೊಡ್ಡರಂಗೇಗೌಡ ಮತ್ತು ಇತರೆ ಗಣ್ಯರ ಆಯ್ಕೆ ಸಮಿತಿ, ಸಾಹಿತ್ಯ ವಿಭಾಗದಲ್ಲಿನ “ವರ್ಷದ ಕನ್ನಡಿಗ” ಪ್ರಶಸ್ತಿಗೆ ಲೇಖಕ ಡಾ. ಕೆ ಎನ್ ಗಣೇಶಯ್ಯನವರನ್ನು ಆಯ್ಕೆ ಮಾಡಿದೆ. ಇದೇ ಮಾರ್ಚ್ 26ರ ಸಂಜೆ ಬೆಂಗಳೂರಿನಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.

ದೇಶದ ಪ್ರಮುಖ ಮಾಧ್ಯಮ ಸಂಸ್ಥೆಯಾಗಿರುವ Network 18 Groupಗೆ ಸೇರಿದ TV18 ಕನ್ನಡ ಸುದ್ದಿವಾಹಿನಿಯಿಂದ ಪ್ರತಿಷ್ಠಿತ “ವರ್ಷದ ಕನ್ನಡಿಗ-2021” ಪ್ರಶಸ್ತಿಗೆ ಪಾತ್ರರಾಗಿರುವ ಡಾ. ಕೆ ಎನ್ ಗಣೇಶಯ್ಯನವರಿಗೆ “ಮಾಧ್ಯಮ ಅನೇಕ” ಸಂಸ್ಥೆ ತುಂಬು ಹೃದಯದಿಂದ ಅಭಿನಂದನೆಗಳನ್ನು ಸಲ್ಲಿಸುತ್ತಿದೆ. ಸಾಹಿತ್ಯ ಮತ್ತು ಸಂಶೋಧನಾ ಕ್ಷೇತ್ರಗಳಲ್ಲಿ ಡಾ. ಕೆ ಎನ್ ಗಣೇಶಯ್ಯನವರು ಮಾಡಿರುವ ಅತ್ಯುತ್ತಮ ಸಾಧನೆಯನ್ನು ದೇಶದ ಪ್ರಮುಖ ಸುದ್ದಿ ಸಂಸ್ಥೆಯಾಗಿರುವ TV18 ಗುರುತಿಸಿರುವುದು ತುಂಬಾ ಸಂತೋಷ ಮತ್ತು ಹೆಮ್ಮೆಯ ವಿಚಾರವಾಗಿದೆ.

ಇದೇ ವೇಳೆ, ಡಾ. ಕೆ ಎನ್ ಗಣೇಶಯ್ಯನವರು ಸಾಹಿತ್ಯ ಕ್ಷೇತ್ರಕ್ಕೆ ನೀಡಿರುವ ಕೊಡುಗೆಯನ್ನು ಗುರುತಿಸುವಲ್ಲಿ ಮತ್ತು ಅವರಿಗೆ ಸಲ್ಲಬೇಕಾದ ಮನ್ನಣೆಯನ್ನು ನೀಡುವಲ್ಲಿ ಕರ್ನಾಟಕ ಮತ್ತು ದೇಶದ ಇತರೆ ಮಹತ್ವದ ಸಾಹಿತ್ಯ ಸಂಸ್ಥೆಗಳೂ ಕೂಡ ಹಿಂದೆಬೀಳುವುದಿಲ್ಲ ಅನ್ನುವುದು ಮಾಧ್ಯಮ ಅನೇಕದ ಆಶಯ.

ಮೂಲತಃ ಕೃಷಿ ವಿಜ್ಞಾನಿಯಾಗಿರುವ ಡಾ. ಕೆ.ಎನ್. ಗಣೇಶಯ್ಯನವರು ಕನ್ನಡದ ಪ್ರಮುಖ ಲೇಖಕರಲ್ಲೊಬ್ಬರಾಗಿ ಪ್ರಸಿದ್ಧರಾಗಿದ್ದಾರೆ. ಇತಿಹಾಸ ಮತ್ತು ವೈಜ್ಞಾನಿಕ ವಿಚಾರಗಳನ್ನು ಒಳಗೊಂಡ ರೋಚಕ ಕಥೆಗಳನ್ನು ತಮ್ಮದೇ ಆದ ವಿಭಿನ್ನ ಶೈಲಿಯಲ್ಲಿ ಬರೆಯುವ ಡಾ. ಕೆ ಎನ್ ಗಣೇಶಯ್ಯನವರು, ಕನ್ನಡದಲ್ಲಿ ವಿಭಿನ್ನ ಬಗೆಯ ಸಾಹಿತ್ಯ ತಂದವರೆಂದು ಹೆಸರಾಗಿದ್ದಾರೆ. ಹಲವಾರು ವಾಸ್ತವಿಕ ವಿಚಾರಗಳು, ಐತಿಹಾಸಿಕ ಘಟನಾವಳಿಗಳನ್ನು ಆಧಾರವಾಗಿರಿಸಿಕೊಳ್ಳುವ ಗಣೇಶಯ್ಯನವರು ಅದಕ್ಕೆ ಕಲ್ಪನೆಯ ಲೇಪವನ್ನು ಕೊಟ್ಟು ಓದುಗರಲ್ಲಿ ಕುತೂಹಲ ಹುಟ್ಟಿಸುವ ರೀತಿಯಲ್ಲಿ ರೋಚಕ ಕಥೆಗಳನ್ನು ಹೆಣೆಯುತ್ತಾರೆ. ಇತಿಹಾಸ, ವಿಜ್ಞಾನ, ಜೀವವೈವಿಧ್ಯ ಮತ್ತು ಪರಿಸರಕ್ಕೆ ಸಂಬಂಧಿಸಿದ ಅನೇಕ ಪ್ರಮುಖ ಘಟನೆಗಳನ್ನು ಆಧಾರವಾಗಿಟ್ಟುಕೊಂಡು ಇದುವರೆಗೂ ಹಲವು ಕಾದಂಬರಿಗಳು ಮತ್ತು ಕಥಾಸಂಕಲನಗಳನ್ನು ಬರೆದಿದ್ದಾರೆ.

ಪದ್ಮಪಾಣಿ, ನೇಹಲ, ಸಿಗೀರಿಯ, ಕಪಿಲಿಪಿಸಾರ, ಕರಿಸಿರಿಯಾನ, ತಾರುಮಾರು, ಬಳ್ಳಿಕಾಳ ಬೆಳ್ಳಿ, ಪೆರಿನಿ ತಾಂಡವ, ಭಿನ್ನೋಟ, ವಿ-ಚಾರಣ, ಶಾಲಭಂಜಿಕೆ, ಮಿಹಿರಾ ಕುಲ, ಚಿತಾದಂತ, ಕನಕ ಮುಸುಕು, ಮೂಕ ಧಾತು, ಕಲ್ದವಸಿ, ಸಸ್ಯ ಸಗ್ಗ, ಹೊರ ನೋಟ, ಮತ್ತು ಇತ್ತೀಚೆಗೆ ಬಿಡುಗಡೆಯಾದ ಗುಡಿಮಲ್ಲಮ್ ಮತ್ತು ದಿವ್ಯ ಸುಳಿ ಗಣೇಶಯ್ಯನವವರು ಬರೆದಿರುವ ಪ್ರಮುಖ ಕೃತಿಗಳಾಗಿವೆ.

“ವರ್ಷದ ಕನ್ನಡಿಗ-2021” ಪ್ರಶಸ್ತಿಗೆ ಆಯ್ಕೆಯಾಗಿರುವ ಡಾ. ಕೆ.ಎನ್. ಗಣೇಶಯ್ಯನವರಿಗೆ ಮತ್ತೊಮ್ಮೆ ಅಭಿನಂದನೆಗಳು.