ಭಾರತ ಕ್ರಿಕೆಟ್ ರಂಗದಲ್ಲಿ ಕಳೆದ ಒಂದೂವರೆ ದಶಕದಿಂದ ಮಿನುಗುತ್ತಿರುವ ತಾರೆ ಮಹೇಂದ್ರ ಸಿಂಗ್ ಧೋನಿಗೆ ಇಂದು ಜನ್ಮ ದಿನ. ಅಂತಾರಾಷ್ಟ್ರೀಯ ಕ್ರಿಕೆಟ್ ಆಡುವ ಎಲ್ಲ ತಂಡಗಳಿಗೂ ಸಿಂಹ ಸ್ವಪ್ನವಾಗುವ ರೀತಿಯಲ್ಲಿ ಟೀಮ್ ಇಂಡಿಯಾವನ್ನು ಮುನ್ನಡೆಸಿದ ಧೋನಿ ಕ್ಯಾಪ್ಟನ್ ಕೂಲ್ ಅನ್ನಿಸಿಕೊಂಡವರು. ಮೈದಾನದಲ್ಲಿ ತಮ್ಮ ಹಾವ ಭಾವದಿಂದ ಯಾವುದೇ ರೋಷಾವೇಶ ತೋರದೆ, ಕೇವಲ ತಂತ್ರಗಾರಿಕೆಯಿಂದ, ಜಾಣ್ಮೆಯಿಂದ ನಾಯಕತ್ವವನ್ನು ಮತ್ತು ಅದರ ಒತ್ತಡವನ್ನು ನಿಭಾಯಿಸಿದವರು. ಅಗತ್ಯ ಬಿದ್ದಾಗಲೆಲ್ಲ ಆಪದ್ಬಾಂಧವನಾಗಿ ಏಕಾಂಗಿ ಹೋರಾಟ ನಡೆಸಿ ತಂಡವನ್ನು ಗೆಲುವಿನ ದಡಕ್ಕೆ ಸೇರಿಸಿದ ಧೋನಿ, ಈಗಾಗಲೇ ಕ್ರಿಕೆಟ್ ಲೋಕದ Living Legend ಅನ್ನಿಸಿಕೊಂಡಿದ್ದಾರೆ. ICC ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ ಆಯೋಜಿಸುವ ಎಲ್ಲ ಟ್ರೋಫಿಗಳನ್ನೂ ಭಾರತಕ್ಕೆ ತಂದುಕೊಟ್ಟ ಏಕೈಕ ನಾಯಕ ಧೋನಿ. 2007ರ ICC ಟ್ವೆಂಟಿ-20, 2010 ಮತ್ತು 2016ರ ಏಷ್ಯಾ ಕಪ್, 2011ರಲ್ಲಿ ICC ವಿಶ್ವ ಕಪ್ ಹಾಗೂ 2013ರಲ್ಲಿ ICC Champions ಟ್ರೋಫಿಗಳನ್ನು ಟೀಮ್ ಇಂಡಿಯಾದ ಪರವಾಗಿ ಎತ್ತಿ ಹಿಡಿದ ಧೋನಿ, ಭಾರತ ಕಂಡ ಸರ್ವ ಶ್ರೇಷ್ಠ ಕ್ಯಾಪ್ಟನ್ ಗಳಲ್ಲಿ ಒಬ್ಬರು. 39ನೇ ವರ್ಷಕ್ಕೆ ಕಾಲಿಡುತ್ತಿದ್ದರೂ, 18ರ ಹುಡುಗರನ್ನೂ ನಾಚಿಸುವಷ್ಟರ ಮಟ್ಟಿಗೆ Fitness ಕಾಪಾಡಿಕೊಂಡಿರುವ ರಾಂಚಿಯ Rambo ಮಹೇಂದ್ರ ಸಿಂಗ್ ಧೋನಿಗೆ Happy Birthday.