‘ಭೈರಪ್ಪ ಅಂದ್ರೆ ಸುಮ್ನೆ ಅಲ್ಲಪ್ಪ!’
ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ 20ನೇ ಶತಮಾನವನ್ನು ಕಾದಂಬರಿಗಳ ಯುಗ ಎಂದು ಕರೆಯಲಾಗುತ್ತದೆ. ಈ ರೀತಿ ಕರೆಯಲು ಕಾರಣರಾದ ಇತರೇ ಮಹಾನುಭಾವರ ಜೊತೆಗೆ, ಇವರ ಹೆಸರೂ ಸೇರಿದೆ. ಕನ್ನಡ ಸಾಹಿತ್ಯ ಲೋಕದ ದಿಗ್ಗಜರಲ್ಲಿ ಒಬ್ಬರಾಗಿರುವ ಇವರ ಖ್ಯಾತಿ ರಾಜ್ಯಕ್ಕಷ್ಟೇ ಸೀಮಿತವಾಗಿಲ್ಲ. ಇವರ ಕೃತಿಗಳು ಭಾರತದ ಇತರೆ ಪ್ರಮುಖ ಭಾಷೆಗಳಿಗೂ ಅನುವಾದವಾಗಿದ್ದು, ಇಡೀ ದೇಶದ ಸಾಹಿತ್ಯ ವಲಯದಲ್ಲಿ ಇವರನ್ನು ಸುಪ್ರಸಿದ್ಧರಾಗಿಸಿವೆ. ಇಷ್ಟೇ ಅಲ್ಲದೆ, ಇಂಗ್ಲಿಷ್ ಭಾಷೆಗೂ ಅನುವಾದವಾಗಿರುವ ಇವರ ಕಾದಂಬರಿಗಳು, ಇವರನ್ನು ಜಾಗತಿಕ ಮಟ್ಟಕ್ಕೂ ಕೊಂಡೊಯ್ದಿವೆ. ಯಾರಿವರು ಅನ್ನುವುದು ಈಗಾಗಲೇ ನಿಮ್ಮ ಅರಿವಿಗೆ ಬಂದಿರಬಹುದು. ಹೌದು, ಇವರೇ ಎಸ್.ಎಲ್. ಭೈರಪ್ಪನವರು.
ಇಂತಹ ಮಹಾನ್ ಕಾದಂಬರಿಕಾರ, ಶಿಕ್ಷಣತಜ್ಞ ಹಾಗೂ ಚಿಂತಕ ಎಸ್.ಎಲ್. ಭೈರಪ್ಪನವರ ಜೀವನ ಮತ್ತು ಸಾಧನೆಯ ಬಗ್ಗೆ ಮಾಧ್ಯಮ ಅನೇಕ ಸಂಸ್ಥೆ ಪ್ರಸ್ತುತ ಪಡಿಸುತ್ತಿರುವ ಒಂದು ಸಂಕ್ಷಿಪ್ತ ಚಿತ್ರಣ ಇಲ್ಲಿದೆ.
ಎಸ್.ಎಲ್.ಭೈರಪ್ಪನವರು ಹುಟ್ಟಿದ್ದು ಹಾಸನ ಜಿಲ್ಲೆಯ ಚನ್ನರಾಯ ಪಟ್ಟಣ ತಾಲ್ಲೂಕಿನ ಸಂತೇಶಿವರ ಗ್ರಾಮದಲ್ಲಿ. 1934ನೇ ಇಸವಿಯ ಜುಲೈ 26 ಭೈರಪ್ಪನವರ ಜನ್ಮ ದಿನ. ಭೈರಪ್ಪನವರ ತಂದೆ ಲಿಂಗಣ್ಣಯ್ಯ, ತಾಯಿ ಗೌರಮ್ಮ. ಬಡತನವನ್ನೇ ಹೊದ್ದಂತಿದ್ದ ಕುಟುಂಬದಲ್ಲಿ ಜನಿಸಿದ ಭೈರಪ್ಪ, ಬಾಲ್ಯದ ವಿದ್ಯಾಭ್ಯಾಸವನ್ನು ತಮ್ಮ ಹಳ್ಳಿ ಮತ್ತು ಹತ್ತಿರದ ಊರಿನಲ್ಲಿಯೇ ಮುಗಿಸಿದರು.
ಭೈರಪ್ಪ, ಕೇವಲ ಹನ್ನೊಂದು ವರ್ಷದ ಬಾಲಕನಾಗಿದ್ದಾಗ, ಅವರ ತಾಯಿ ಪ್ಲೇಗ್ ಕಾಯಿಲೆಗೆ ತುತ್ತಾಗಿ ಕೊನೆಯುಸಿರಿಳೆದರು. ಬಡತನದ ಬೇಗೆಯ ಜೊತೆಗೆ ತಾಯಿಯ ಅಗಲಿಕೆ, ಬಾಲಕ ಭೈರಪ್ಪನನ್ನು ಅಪಾರ ಸಂಕಷ್ಟಕ್ಕೀಡುಮಾಡಿತು. ಹೀಗಿದ್ದರೂ ಧೃತಿಗೆಡದ ಭೈರಪ್ಪ, ವಿದ್ಯಾಭ್ಯಾಸ ಮುಂದುವರಿಸುವುದಕ್ಕಾಗಿ ಮೈಸೂರಿಗೆ ಬಂದು, ಶಾರದಾ ವಿಲಾಸ ಪ್ರೌಢಶಾಲೆ ಸೇರಿದರು. ಮೈಸೂರಿಗೆ ಬರುವುದಕ್ಕೆ ಮುಂಚೆಯೇ ಸ್ವಾತಂತ್ರ್ಯ ಚಳವಳಿಗೆ ಧುಮುಕಿದ್ದ ಬಾಲಕ ಭೈರಪ್ಪ, ಗಾಂಧಿ ಚಿಂತನೆಗಳಿಂದ ಪ್ರೇರೇಪಿತರಾಗಿದ್ದರು. ಆ ಹೊತ್ತಿನಲ್ಲಿ, ಹಳ್ಳಿಗಳಿಗೆ ಹೆಂಡ ಪೂರೈಸುತ್ತಿದ್ದ ಲಾರಿಗಳಿಗೆ ಅಡ್ಡ ನಿಂತಿದ್ದರು, ಬ್ರಿಟಿಷ್ ವಿರೋಧಿ ಭಾಷಣವನ್ನೂ ಮಾಡಿದ್ದ ಬಾಲಕ ಭೈರಪ್ಪನನ್ನು ಪೊಲೀಸ್ ಠಾಣೆಗೂ ಕರೆದೊಯ್ಯಲಾಗಿತ್ತು.
ಹೀಗಾಗಿ, ಹಳ್ಳಿಯಲ್ಲಿದ್ದಾಗಲೇ ಒಂದು ರೀತಿಯ ಹೋರಾಟ ಆರಂಭಿಸಿದ್ದ ಭೈರಪ್ಪ, ಮೈಸೂರಿನಲ್ಲಿ ವಿದ್ಯಾಭ್ಯಾಸ ಮುಂದುವರಿಸಿದರು. ವಸತಿಗಾಗಿ ವಿದ್ಯಾರ್ಥಿನಿಲಯ ಮತ್ತು ಊಟಕ್ಕಾಗಿ ವಾರಾನ್ನವನ್ನು ಅವಲಂಬಿಸಿದ್ದರೂ ಕೂಡ, ಭೈರಪ್ಪನವರಲ್ಲಿ ಓದಬೇಕು ಎಂಬ ಛಲ ಹೆಚ್ಚಾಗಿತ್ತು. 1957ರಲ್ಲಿ ಮಹಾರಾಜ ಕಾಲೇಜಿನಿಂದ ಬಿ.ಎ ಆನರ್ಸ್ ಪದವಿ ಪಡೆದರು. ಅಷ್ಟಕ್ಕೆ ತೃಪ್ತರಾಗದೆ 1958ರಲ್ಲಿ ಮೈಸೂರು ವಿ.ವಿಯಲ್ಲಿ ಎಂ.ಎ ಪದವಿಗೆ ಸೇರಿಕೊಂಡರು. ಎಂ.ಎ ನಲ್ಲಿ ಎರಡು ಚಿನ್ನದ ಪದಕಗಳೊಂದಿಗೆ ಪ್ರಥಮ Rank ಗಳಿಸಿ, ವಿದ್ಯಾರ್ಥಿ ಬದುಕಿನ ಅತ್ಯುತ್ತಮ ಸಾಧನೆ ಮಾಡಿದರು.
ಆ ಬಳಿಕ, 1958 ರಿಂದ 60ರವರೆಗೆ ಹುಬ್ಬಳ್ಳಿಯ ಕಾಡಸಿದ್ದೇಶ್ವರ ಕಾಲೇಜಿನಲ್ಲಿ ಮನಃಶಾಸ್ತ್ರ ಮತ್ತು ತತ್ವಶಾಸ್ತ್ರದ ಅಧ್ಯಾಪಕರಾದರು. 1960 ರಿಂದ 66ರ ವರೆಗೆ ಗುಜರಾತಿನ ಸರ್ದಾರ್ ಪಟೇಲ್ ವಿಶ್ವವಿದ್ಯಾಲಯದಲ್ಲಿ ಉಪನ್ಯಾಸಕರಾದರು. ಇದೇ ವೇಳೆ “Truth and Beauty (ಸತ್ಯ ಮತ್ತು ಸೌಂದರ್ಯ) ಎಂಬ ಮಹಾ ಪ್ರಬಂಧ ರಚಿಸಿದ ಎಸ್.ಎಲ್.ಭೈರಪ್ಪ, ಬರೋಡಾದ ಸಯ್ಯಾಜಿ ರಾವ್ ವಿ.ವಿಯಿಂದ ಡಾಕ್ಟರೇಟ್ ಪದವಿ ಪಡೆದರು. 1967ರಿಂದ 1971ರವರೆಗೆ ದೆಹಲಿಯಲ್ಲಿರುವ ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಸಂಸ್ಥೆ (NCERT)ಯಲ್ಲಿ ಪ್ರಾಧ್ಯಾಪಕರಾಗಿದ್ದ ಎಸ್.ಎಲ್.ಭೈರಪ್ಪ, ಆ ನಂತರ, ಅದೇ ಸಂಸ್ಥೆಯ ಅಂಗವಾಗಿರುವ ಮೈಸೂರಿನ ಪ್ರಾದೇಶಿಕ ಶಿಕ್ಷಣ ಸಂಸ್ಥೆ (RIE – Regional Institute of Education)ಯಲ್ಲಿ ಸೇವೆ ಸಲ್ಲಿಸಿ 1991ರಲ್ಲಿ ನಿವೃತ್ತಿ ಹೊಂದಿದರು.
ಎಷ್ಟೇ ಬಡತನವಿದ್ದರೂ ಶಿಸ್ತುಬದ್ಧ ವಿದ್ಯಾರ್ಥಿಯಾಗಿ ಕಷ್ಟಪಟ್ಟು ಓದಿ, ಬದುಕನ್ನು ಕಟ್ಟಿಕೊಂಡ ಎಸ್.ಎಲ್. ಭೈರಪ್ಪನವರು, ಇಂಟರ್ ಮೀಡಿಯಟ್ ನಲ್ಲಿ ಓದುತ್ತಿರುವಾಗಲೇ ಬರವಣಿಗೆ ಆರಂಭಿಸಿದ್ದರು. ‘ಗತಜನ್ಮ’ ಎಂಬ ನೀಳ್ಗತೆ, ‘ಭೀಮಕಾಯ’ ಮತ್ತು ‘ಬೆಳಕು ಮೂಡಿತು’ ಎಂಬ ಕಾದಂಬರಿಗಳನ್ನು ರಚಿಸಿದ್ದರು. ಆದರೆ, ಆರಂಭಿಕ ರಚನೆಗಳಾದ ಇವುಗಳ ಮೇಲೆ, ಅದಾಗಲೇ ಕಾದಂಬರಿ ಸಾರ್ವಭೌಮ ಎಂದು ಹೆಸರಾಗಿದ್ದ ಅನಕೃ ಅವರ ಪ್ರಭಾವವಿತ್ತಂತೆ.
ಹೀಗಾಗಿಯೋ ಏನೋ, ಈ ಕೃತಿಗಳ ಬಗ್ಗೆ ಹೆಚ್ಚು ಚರ್ಚೆ ಆಗಿಲ್ಲ. 1961ರಲ್ಲಿ ಪ್ರಕಟವಾದ “ಧರ್ಮಶ್ರೀ” ಕಾದಂಬರಿಯನ್ನೇ ಭೈರಪ್ಪನವರ ಮೊದಲ ಕಾದಂಬರಿಯಾಗಿ ಪರಿಗಣಿಸಲಾಗುತ್ತದೆ.
ಆ ಬಳಿಕ, 1962ರಲ್ಲಿ ‘ದೂರಸರಿದರು’, 1965ರಲ್ಲಿ ‘ಮತದಾನ’ ಮತ್ತು ‘ವಂಶವೃಕ್ಷ’ ಕಾದಂಬರಿಗಳು, 1967ರಲ್ಲಿ ‘ಜಲಪಾತ’, 1968ರಲ್ಲಿ ‘ನಾಯಿ ನೆರಳು’ ಮತ್ತು ‘ತಬ್ಬಲಿಯು ನೀನಾದೆ ಮಗನೆ’, ಗೃಹಭಂಗ (1970), ನಿರಾಕರಣ (1971), ಗ್ರಹಣ(1972), ದಾಟು(1973), ಅನ್ವೇಷಣ(1976), ಪರ್ವ(1979), ನೆಲೆ (1983), ಸಾಕ್ಷಿ(1986), ಅಂಚು(1990), ಸಾರ್ಥ (1998), ಮಂದ್ರ(2002), ಆವರಣ(2007), ಕವಲು(2010), ಯಾನ(2014), ಉತ್ತರಕಾಂಡ(2017) ಸೇರಿದಂತೆ ಈವರೆಗೆ 24 ಕಾದಂಬರಿಗಳನ್ನು ಬರೆದಿದ್ದಾರೆ.
ಇಷ್ಟು ಮಾತ್ರವಲ್ಲದೆ, ತಮ್ಮ ಸಂಶೋಧನಾ ಪ್ರಬಂಧದ ಕನ್ನಡ ರೂಪ, ‘ಸತ್ಯ ಮತ್ತು ಸೌಂದರ್ಯ’(1966), ‘ಸಾಹಿತ್ಯ ಮತ್ತು ಪ್ರತೀಕ’(1967), ‘ಕಥೆ ಮತ್ತು ಕಥಾವಸ್ತು’(1969), ‘ನಾನೇಕೆ ಬರೆಯುತ್ತೇನೆ’(1980) ಎಂಬ ಪುಸ್ತಕಗಳ ಮೂಲಕ ತಮ್ಮ ಚಿಂತನೆಗಳನ್ನು ಪ್ರಕಟಿಸಿದ್ದಾರೆ.
1996ರಲ್ಲಿ ಬರೆದ ‘ಭಿತ್ತಿ’, ಭೈರಪ್ಪನವರ ಆತ್ಮ ಚರಿತ್ರೆ. ಚಿತ್ರ ಮತ್ತು ಶಿಲ್ಪ ಕಲೆಗಳಲ್ಲೂ ಅಭಿರುಚಿ ಹೊಂದಿರುವ ಭೈರಪ್ಪನವರು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಬಗ್ಗೆ ಅಪಾರ ಒಲವನ್ನು ಹೊಂದಿದ್ದಾರೆ. ‘ಗಂಗೂ ಬಾಯಿ ಹಾನಗಲ್’ ಪುಸ್ತಕದ ಸಂಪಾದಕರಾಗಿಯೂ ಕೆಲಸ ಮಾಡಿದ್ದಾರೆ. ಇಂಗ್ಲಿಷ್ ಭಾಷೆಯಲ್ಲೂ ಪ್ರೌಢಿಮೆ ಹೊಂದಿರುವ ಭೈರಪ್ಪನವರು, “Values in Modern Indian Educational Thought” ಮುಂತಾದ ಪ್ರಕಟಣೆಗಳನ್ನು ಹೊರತಂದಿದ್ದಾರೆ.
ಎಸ್.ಎಲ್.ಭೈರಪ್ಪನವರ ಈವರೆಗಿನ ಹಲವಾರು ಕೃತಿಗಳು ನಾಟಕಗಳಾಗಿ, ಟಿವಿ ಧಾರಾವಾಹಿ ಮತ್ತು ಸಿನೆಮಾಗಳಾಗಿ ಜನಪ್ರಿಯವಾಗಿವೆ. ಕನ್ನಡ ಮತ್ತು ಹಿಂದಿಯಲ್ಲಿ ನಾಟಕವಾಗಿ ಪ್ರದರ್ಶನಗೊಂಡ ‘ವಂಶವೃಕ್ಷ’ ಕಾದಂಬರಿಯ ಕನ್ನಡ ರಂಗರೂಪವನ್ನು, ಸಿಂಧುವಳ್ಳಿ ಅನಂತಮೂರ್ತಿ ಹಾಗೂ ಹಿಂದಿ ರಂಗರೂಪವನ್ನು ಪ್ರತಿಭಾ ಪ್ರಹ್ಲಾದ್ ಸಿದ್ಧಪಡಿಸಿದ್ದರು. ‘ಮಂದ್ರ’ ವನ್ನು ಡಾ. ಬಿ.ವಿ.ರಾಜಾರಾಮ್ ಮತ್ತು ರಾಮನಾಥ್ ಅವರು ಪ್ರತ್ಯೇಕವಾಗಿ ರಂಗಕ್ಕೆ ಅಳವಡಿಸಿದ್ದರು. ಪ್ರಖ್ಯಾತ ನೃತ್ಯ ಕಲಾವಿದೆ ತುಳಸಿ ರಾಮಚಂದ್ರ ಅವರು, ‘ಸಾರ್ಥ’ ಕಾದಂಬರಿಯನ್ನು ನೃತ್ಯ ರೂಪಕವಾಗಿ ಪ್ರಸ್ತುತಪಡಿಸಿದ್ದರು.
1972ರಲ್ಲಿ ‘ವಂಶವೃಕ್ಷ’, ಗಿರೀಶ್ ಕಾರ್ನಾಡ್ ಮತ್ತು ಬಿ.ವಿ.ಕಾರಂತ ಅವರ ನಿರ್ದೇಶನದಲ್ಲಿ ಸಿನೆಮಾ ಆಗಿತ್ತು. 1975ರಲ್ಲಿ ವಂಶವೃಕ್ಷ ‘ತಬ್ಬಲಿಯು ನೀನಾದೆ ಮಗನೆ’ ಕಾದಂಬರಿ, ಮತ್ತೆ ಗಿರೀಶ್ ಕಾರ್ನಾಡ್ ಮತ್ತು ಬಿ.ವಿ.ಕಾರಂತರ ನಿರ್ದೇಶನದಲ್ಲಿ ತೆರೆಗೆ ಬಂದಿತ್ತು. ಮತದಾನ (2000, ಟಿ.ಎನ್.ಸೀತಾರಾಮ್), ನಾಯಿ ನೆರಳು(2006, ಗಿರೀಶ್ ಕಾಸರವಳ್ಳಿ ನಿರ್ದೇಶನ) ಸಿನೆಮಾ ಆಗಿ ಜನಪ್ರಿಯವಾಗಿದ್ದವು.
ಭೈರಪ್ಪನವರ ‘ಗೃಹಭಂಗ’ ಕಾದಂಬರಿ, ಗಿರೀಶ್ ಕಾಸರವಳ್ಳಿ ನಿರ್ದೇಶನದಲ್ಲಿ ಧಾರಾವಾಹಿಯಾಗಿ ಪ್ರಸಾರವಾಗಿ ಅತ್ಯಂತ ಜನಪ್ರಿಯವಾಗಿತ್ತು. ಮತ್ತೊಂದು ಕಾದಂಬರಿ ‘ದಾಟು’, ಬಸು ಚಟರ್ಜಿ ನಿರ್ದೇಶನದಲ್ಲಿ ‘ಉಲ್ಲಂಘನ್’ ಎಂಬ ಹೆಸರಿನಲ್ಲಿ ಹಿಂದಿ ಧಾರಾವಾಹಿಯಾಗಿ ಪ್ರಸಾರವಾಗಿತ್ತು.
ಸಾಹಿತ್ಯ ಕ್ಷೇತ್ರದಲ್ಲಿನ ಸಾಧನೆಗಾಗಿ ಭೈರಪ್ಪನವರು ಹಲವಾರು ಅತ್ಯುನ್ನತ ಪ್ರಶಸ್ತಿ ಮತ್ತು ಗೌರವಗಳಿಗೆ ಪಾತ್ರರಾಗಿದ್ದಾರೆ. 1968ರಲ್ಲಿ ‘ವಂಶವೃಕ್ಷ ’ ಮತ್ತು 1974ರಲ್ಲಿ ‘ದಾಟು’ ಕಾದಂಬರಿಗೆ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತಿದೆ. ಇದಲ್ಲದೆ, 2006ರಲ್ಲಿ ರಾಜ್ಯ ಸರ್ಕಾರದಿಂದ ಪಂಪ ಪ್ರಶಸ್ತಿ, 2011ರಲ್ಲಿ ಪ್ರತಿಷ್ಟಿತ ಸರಸ್ವತಿ ಸಮ್ಮಾನ್ ಪ್ರಶಸ್ತಿಗಳು ಭೈರಪ್ಪನವರಿಗೆ ಸಂದಿವೆ. ಭಾರತದ ಹಲವು ವಿಶ್ವವಿದ್ಯಾಲಯಗಳು ಭೈರಪ್ಪನವರಿಗೆ ಗೌರವ ಡಾಕ್ಟರೇಟ್ ನೀಡಿವೆ. ಭೈರಪ್ಪನವರು 1999ರಲ್ಲಿ ಕನಕಪುರದಲ್ಲಿ ನಡೆದ 67ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು. ಭೈರಪ್ಪನವರ ಕಾದಂಬರಿಗಳ ಮೇಲೆ ಅನೇಕರು ಸಂಶೋಧನಾ ಪ್ರಬಂಧಗಳನ್ನು ರಚಿಸಿ M.Phil ಮತ್ತು Doctorate ಪದವಿಗಳನ್ನು ಪಡೆದಿದ್ದಾರೆ. ಭೈರಪ್ಪನವರ ಕಾದಂಬರಿಗಳ ಬಗ್ಗೆ ಅನೇಕ ವಿಮರ್ಶಾ ಗ್ರಂಥಗಳು ರಚಿಸಲ್ಪಟ್ಟಿವೆ.
ಭಾರತ ಸರ್ಕಾರ 2014ರಲ್ಲಿ ಭೈರಪ್ಪನವರನ್ನು National Research Professor ಆಗಿ ನೇಮಕ ಮಾಡಿದೆ. 1949ರಲ್ಲಿ ಆರಂಭಿಸಿದ ಈ ಗೌರವ ಹುದ್ದೆಯನ್ನು, 65 ವರ್ಷ ವಯೋಮಾನ ದಾಟಿದ ಮತ್ತು ತಮ್ಮ ಕ್ಷೇತ್ರಗಳಿಗೆ ಅಸಾಧಾರಣ ಕೊಡುಗೆ ನೀಡಿರುವ ದೇಶದ ಅತ್ಯುನ್ನತ ಶಿಕ್ಷಣತಜ್ಞರು ಹಾಗೂ ವಿದ್ವಾಂಸರನ್ನು ಗೌರವಿಸುವ ಸಲುವಾಗಿ ಸ್ಥಾಪಿಸಲಾಗಿದೆ. ಇದಾದ ಬಳಿಕ, 2016ರಲ್ಲಿ, ಭೈರಪ್ಪನವರಿಗೆ ‘ಪದ್ಮಶ್ರೀ’ ಪುರಸ್ಕಾರವನ್ನು ನೀಡಿ ಗೌರವಿಸಲಾಗಿದೆ.
ಗ್ರಾಮೀಣ ಬದುಕು ಮತ್ತು ಮಹಾನಗರಗಳಲ್ಲಿನ ಜೀವನಗಳೆರಡನ್ನೂ ಸಾಕಷ್ಟು ಕಂಡಿರುವ ಭೈರಪ್ಪನವರು, ಆಳವಾದ ಅಧ್ಯಯನದ ಫಲಗಳನ್ನು ಮತ್ತು ಜೀವನಾನುಭವಗಳ ಸಾರವನ್ನು ತಮ್ಮ ಕಾದಂಬರಿಗಳ ಮೂಲಕ ಕಟ್ಟಿಕೊಡುತ್ತಾರೆ. ಭೈರಪ್ಪನವರು ಕಾದಂಬರಿ ಅನ್ನುವ ಸಾಹಿತ್ಯ ಪ್ರಕಾರವನ್ನು ಸಾಮಾನ್ಯ ಮನರಂಜನೆಯ ಮಟ್ಟದಿಂದ, ಮಹಾ ಕಾವ್ಯದ ಮಟ್ಟಕ್ಕೆ ಏರಿಸಿದವರು ಎಂಬ ಮಾತಿದೆ.
ಸುಮಾರು ಆರು ದಶಕಗಳ ಕಾಲದಿಂದಲೂ ಬರವಣಿಗೆ ಮಾಡುತ್ತಲೇ ಇರುವ ಭೈರಪ್ಪನವರು ‘ಇವತ್ತಿಗೂ ಬರೆಯುವುದು ನನಗೆ ಸಲೀಸಲ್ಲ’ ಅನ್ನುತ್ತಾರೆ. ಭೈರಪ್ಪನವರು, ಪ್ರತಿಯೊಂದು ಕಾದಂಬರಿ ಬರೆಯುವ ಮೊದಲು ಮಾಡುವ ಸಾಕಷ್ಟು ತಯಾರಿ ಮಾಡುತ್ತಾರೆ. ವ್ಯಾಪಕ ಅಧ್ಯಯನ, ತಿರುಗಾಟ ಮತ್ತು ಸಂಶೋಧನೆಗಳನ್ನು ಆಧಾರವಾಗಿರಿಸಿಕೊಂಡು ಕೃತಿ ರಚಿಸುತ್ತಾರೆ. ಭೈರಪ್ಪನವರ ಬಹುತೇಕ ಕಾದಂಬರಿಗಳು ಹತ್ತಾರು ಬಾರಿ ಮರು ಮುದ್ರಣವಾಗಿವೆ, ‘ಭೈರಪ್ಪನವರ ಹೊಸ ಕಾದಂಬರಿ ಬರುತ್ತಿದೆ’ ಅನ್ನುವ ಮಾತೇ ಸಾಹಿತ್ಯ ಲೋಕದಲ್ಲಿ ಸಂಚಲನ ಮೂಡಿಸುತ್ತದೆ. ಭೈರಪ್ಪನವರ ಅಭಿಮಾನಿ ಓದುಗರು, ಪುಸ್ತಕ ಬಿಡುಗಡೆಗೆ ಮುನ್ನವೇ ಹಣ ಕೊಟ್ಟು, ತಮ್ಮ ಪ್ರತಿ ಕಾಯ್ದಿರಿಸುತ್ತಾರೆ.
ಭಾರತದ ಪ್ರಜಾತಂತ್ರ ವ್ಯವಸ್ಥೆ ಸಮಾಜವಾದದ ಜೊತೆಗೆ, ಎಡ-ಬಲಪಂಥೀಯ ಚಿಂತಕರನ್ನೂ ಒಳಗೊಂಡಿದೆ. ಹೀಗಾಗಿ, ತಮಗೆ ಸರಿ ಅನ್ನಿಸಿದ್ದನ್ನು ನಿರ್ಭೀತಿಯಿಂದ, ನಿಷ್ಠುರತೆಯಿಂದ ಪ್ರತಿಪಾದಿಸುತ್ತಾ ಬಂದಿರುವ ಭೈರಪ್ಪನವರು, ಹಲವರ ಟೀಕೆಗೂ ಗುರಿಯಾಗಿದ್ದಾರೆ. ಇದರ ಜೊತೆಜೊತೆಗೆ, ಸಾಹಿತ್ಯಕ್ಕಾಗಿ ಭಾರತದಲ್ಲಿ ಕೊಡಮಾಡುವ ಅತ್ಯುನ್ನತವಾದ ‘ಜ್ಞಾನಪೀಠ ’ ಪ್ರಶಸ್ತಿ ಇಷ್ಟುಹೊತ್ತಿಗಾಗಲೇ ಭೈರಪ್ಪನವರಿಗೆ ಸಲ್ಲಬೇಕಿತ್ತು ಎಂಬ ಮಾತುಗಳೂ ಇವೆ. ಆದರೆ, ಭೈರಪ್ಪನವರ ‘ಮಂದ್ರ’ ಕಾದಂಬರಿಗೆ ‘ಜ್ಞಾನಪೀಠ’ಕ್ಕೆ ಸಮಾನ ಎಂದು ಪರಿಗಣಿಸಲಾಗಿರುವ 2010ರ ಸಾಲಿನ ಪ್ರತಿಷ್ಠಿತ ‘ಸರಸ್ವತಿ ಸಮ್ಮಾನ್’ ಪ್ರಶಸ್ತಿ ಲಭಿಸಿರುವುದು, ಎಲ್ಲ ಕನ್ನಡಿಗರಿಗೂ ಹಿರಿಮೆಯ ವಿಚಾರವಾಗಿದೆ.
ಒಟ್ಟಿನಲ್ಲಿ, ಅಪಾರ ಸಂಕಲ್ಪ ಶಕ್ತಿ ಮತ್ತು ರಸಾನುಭೂತಿಯ ದೃಷ್ಟಿಕೋನ ಹೊಂದಿರುವ ಭೈರಪ್ಪನವರು, ಕನ್ನಡದ ಒಬ್ಬ ಧೀಮಂತ ಕಾದಂಬರಿಕಾರ ಅನ್ನುವ ಮಾತನ್ನು ಎಲ್ಲರೂ ಒಪ್ಪುತ್ತಾರೆ.
ಇಂಥ ಸಾಧಕರಾದ ಎಸ್.ಎಲ್. ಭೈರಪ್ಪನವರ ಸುಮಾರು 90 ವರ್ಷಗಳ ಬದುಕು ಹಾಗೂ 60 ವರ್ಷಗಳ ಬರವಣಿಗೆಯ ಇಡೀ ಪರ್ವವನ್ನು ಒಂದು ಲೇಖನದಲ್ಲಿ ಹಿಡಿದಿಡುವುದೆಂದರೆ, ಮಗುವೊಂದು ಮಿಂಚು ಹುಳುಗಳನ್ನು ಹಿಡಿದು, ಗಾಜಿನ ಬಾಟಲಿಗೆ ಹಾಕಿ, ‘ನಾನು ಸೂರ್ಯನನ್ನು ಸೃಷ್ಟಿಸುತ್ತೇನೆ’ ಎಂದಂತಾಗುತ್ತದೆ ಅಷ್ಟೇ…
ಲಕ್ಷಾಂತರ ಓದುಗರ ಹೃದಯದಲ್ಲಿ ಸ್ಥಾನ ಪಡೆದಿರುವ ಶ್ರೇಷ್ಠ ಕಾದಂಬರಿಕಾರ ಮತ್ತು ಚಿಂತಕರಾದ ಶ್ರೀ ಎಸ್.ಎಲ್.ಭೈರಪ್ಪನವರಿಗೆ ಮಾಧ್ಯಮ ಅನೇಕ ಸಂಸ್ಥೆ ವತಿಯಿಂದ ಗೌರವ ನಮನಗಳು.
ಭೈರಪ್ಪನವರು 11ನೇ ವಯಸ್ಸಿಗೆ ಲೋಯರ್ ಸೆಕೆಂಡರಿ ಪರೀಕ್ಷೆ ಪಾಸು ಮಾಡಿದ್ದರು. ಆದರೆ, ಅವರು ಸರ್ಕಾರಿ ಉದ್ಯೋಗಕ್ಕೆ ಸೇರಲು 7 ವರ್ಷ ಕಾಯಬೇಕಾಗಿ ಬರುತ್ತಿತ್ತು. ಆದರೆ, ಬೈರಪ್ಪನವರ ಕುಟುಂಬ ಸಂಕಷ್ಟದಲ್ಲಿತ್ತು. ಈ ಕುಟುಂಬಕ್ಕೆ ಸಹಾಯ ಮಾಡಬೇಕು ಎಂದು ಯೋಚಿಸಿದ ಭೈರಪ್ಪನವರ ಮಾವ(ತಾಯಿಯ ಅಣ್ಣ) ಹೇಗೋ ಮಾಡಿ ಶಾಲೆಯ ಮುಖ್ಯೋಪಾದ್ಯಾಯರ ಮನವೊಲಿಸಿ, ಪ್ಲೇಗ್ ಕಾಯಿಲೆಯಿಂದ ಅಷ್ಟು ಹೊತ್ತಿಗಾಗಲೇ ತೀರಿ ಹೋಗಿದ್ದ ಭೈರಪ್ಪನವರ ಅಣ್ಣ ರಾಮಣ್ಣನ ಜನ್ಮದಿನಾಂಕ 20-8-1931 ಮತ್ತು ಭೈರಪ್ಪನವರ ನೈಜ ಜನ್ಮದಿನಾಂಕ 26-7-1934 ಎರಡನ್ನೂ ಅದಲು ಬದಲು ಮಾಡಿಸಿಬಿಟ್ಟರು. ಇದು ಭೈರಪ್ಪನವರಿಗೆ ಗೊತ್ತಾದರೂ ಕೂಡ ಅದನ್ನು ಮತ್ತೆ ಬದಲಿಸಲು ಸಾಧ್ಯವಾಗಲಿಲ್ಲ. ಹೀಗಾಗಿ, ಭೈರಪ್ಪನವರ ನಿಜವಾದ ಜನ್ಮದಿನಾಂಕ ಮತ್ತು ದಾಖಲೆಯಲ್ಲಿನ ಜನ್ಮದಿನಾಂಕ ಬೇರೆಯದ್ದೇ ಆಗಿ ಉಳಿದುಹೋಯಿತು. ಈ ಬಗ್ಗೆ ತಮ್ಮ ಆತ್ಮಕಥೆ ‘ಭಿತ್ತಿ’ಯಲ್ಲಿ ಭೈರಪ್ಪನವರೇ ಉಲ್ಲೇಖಿಸಿದ್ದಾರೆ. ಹೀಗಾಗಿ, ಸರ್ಕಾರಿ ದಾಖಲೆಯ ಪ್ರಕಾರ ಇವತ್ತು ಭೈರಪ್ಪನವರ ಜನ್ಮದಿನ. ಈ ಅವಕಾಶ ಅಥವ ನೆಪವನ್ನು ಬಳಸಿಕೊಂಡು ಮಹಾನ್ ಬರಹಗಾರರಾದ ಭೈರಪ್ಪನವರಿಗೆ ಮತ್ತೊಮ್ಮೆ ಶುಭಾಶಯಗಳನ್ನು ಹೇಳುತ್ತಿದ್ದೇವೆ.