-ಡಾ‌. ಎಚ್.ಎಸ್. ಸತ್ಯನಾರಾಯಣ

ಭಾರತೀಯ ಸಾಹಿತ್ಯ ನಿರ್ಮಾತೃಗಳಲ್ಲಿ ವೈದೇಹಿಯವರಿಗೆ ಗಣ್ಯ ಸ್ಥಾನವಿದೆ. ಸಣ್ಣಕಥೆ ಇವರ ಮುಖ್ಯ ಅಭಿವ್ಯಕ್ತಿ ಮಾಧ್ಯಮವಾದರೂ ಕಾದಂಬರಿ, ಲಲಿತ ಪ್ರಬಂಧ, ಮಕ್ಕಳ ಸಾಹಿತ್ಯ, ನಾಟಕಗಳು, ಕಾವ್ಯ, ನೆನಪುಗಳ ಸಂಗ್ರಹ ಮುಂತಾದ ಪ್ರಕಾರಗಳಲ್ಲಿ ಕೃಷಿ ಮಾಡಿರುವ ಗಟ್ಟಿ ಹಾಗೂ ದಿಟ್ಟ ದನಿಯ ಲೇಖಕಿ ಇವರಾಗಿದ್ದಾರೆ. ವಿದ್ಯಾರ್ಥಿ ದಿಸೆಯಲ್ಲಿಯೇ ಕಥೆ ಬರೆಯುವ ಸದಭಿರುಚಿಗೆ ತೆರೆದುಕೊಂಡ ವೈದೇಹಿಯವರ ಲೇಖನಿಯು ಕಳೆದ ಐದು ದಶಕಗಳ ಅವಧಿಯಲ್ಲಿ ಕನ್ನಡ ಸಾರಸ್ವತ ಲೋಕಕ್ಕೆ ಅಮೂಲ್ಯವಾದ ಕೊಡುಗೆಯನ್ನು ನೀಡಿದೆ.

   ವೈದೇಹಿಯವರು ಸೃಷ್ಟಿಸಿರುವ ಸಾಹಿತ್ಯಲೋಕ ವಿಶಿಷ್ಟವಾದುದಯ. ಕೌಟುಂಬಿಕ ಜಗತ್ತಿನ ನಾಲ್ಕು ಗೋಡೆಗಳೊಳಗೆ ಹೆಣ್ಣು ಅನುಭವಿಸುವ ಬವಣೆ, ಕ್ರೌರ್ಯ, ತಮ್ಮೊಳಗೇ ಒಬ್ಬರೊಬ್ಬರಿಗೆ ತೋರುವ ಹಿಂಸೆಗಳ ಒಳ ಹೊರಗುಗಳನ್ನು ವೈದೇಹಿ ಚಿತ್ರಿಸಿದ್ದಾರೆ. ಈ ಸ್ತ್ರೀ ಲೋಕದ ಅನುಭವದ ಮೂಲಕವೇ ಬದುಕಿನ ಅರ್ಥಗಳನ್ನು ಶೋಧಿಸಲು ಯತ್ನಿಸಿದ್ದಾರೆ. ಹೀಗಾಗಿ ಹೆಣ್ಣುಮಕ್ಕಳ ಸಾಮಾಜಿಕ ಸ್ಥಿತಿಯಿಂದ ಅವರು ಹೇಗೆ ಬದುಕನ್ನಪ್ಪಿದ್ದಾರೆಂಬುದನ್ನು ಬರವಣಿಗೆಯಲ್ಲಿ ಕಂಡು-ಕಾಣಿಸಿಕೊಡುವ ಸಾಕ್ಷಿಪ್ರಜ್ಞೆಯಂತೆ ವೈದೇಹಿಯವರ ಬರಹಗಳಿವೆ. “ಬದುಕನ್ನು ಇಡಿಯಾಗಿ ಹಿಡಿಯಬೇಕು, ಎಲ್ಲ ನಿಜಗಳನ್ನು ಕಹಿಗೊಳ್ಳದೆಯೇ ಹೇಳಬೇಕು,ವಜಗತ್ತಿಗೆಲ್ಲ ಅವಶ್ಯವಾಗಿರುವ ಪ್ರೀತಿಯನ್ನು ಉಳಿಸಿಕೊಳ್ಳುವಂತಹ ಬಲ, ಆತ್ಮಶಕ್ತಿಗಳನ್ನು ಬಲಗೊಳಿಸುವತ್ತ ಬರಹ ತುಡಿಯಬೇಕೆಂಬ” ಸಂಕಲ್ಪದಿಂದ ಬರೆಯುವ ವೈದೇಹಿ ನಮ್ಮ ಕಾಲದ ಬಹುಮುಖ್ಯ ಲೇಖಕಿ ಎಂಬುದರಲ್ಲಿ ಎರಡು ಮಾತಿಲ್ಲ.

    ಶ್ರೀಮತಿ ವೈದೇಹಿಯವರ ನಿಜನಾಮ ಜಾನಕಿ ಹೆಬ್ಬಾರ್ ಎಂದು, ಮದುವೆಯ ಬಳಿಕ ಜಾನಕಿ ಶ್ರೀನಿವಾಸಮೂರ್ತಿಯಾದರು. ಸುಧಾ ವಾರಪತ್ರಿಕೆಗೆ  ಕತೆಯೊಂದನ್ನು ಜಾನಕಿಯವರು ಕಳಿಸಿದ್ದರು. ಆ ಕತೆಯು ನಡೆದ ಘಟನೆಯನ್ನಾಧರಿಸಿ ರಚಿತವಾಗಿತ್ತಾದ್ದರಿಂದ ಅದನ್ನು ಪ್ರಕಟಿಸುವುದು ಬೇಡವೆಂಬ ವಿನಂತಿ ಪತ್ರವನ್ನೂ ಜಾನಕಿಯವರೇ ಸುಧಾ ವಾರಪತ್ರಿಕೆಯ ಸಂಪಾದಕರಿಗೆ ಬರೆದರು! ಆದರೆ ಸಂಪಾದಕರು ಕತೆಯನ್ನು ಪ್ರಕಟಿಸಿ, ಲೇಖಕಿಯ ಹೆಸರನ್ನು ‘ಜಾನಕಿ’ಯ ಬದಲಿಗೆ ‘ವೈದೇಹಿ’ ಎಂದು ಮರುನಾಮಕರಣ ಮಾಡಿ ಪ್ರಕಟಿಸಿಯೇ ಬಿಟ್ಟರು. ಇದು ಜಾನಕಿ ವೈದೇಹಿಯಾದ ಕತೆಯ ಹಿನ್ನೆಲೆ. ಈಗಲೂ ಕನ್ನಡದ ಓದುಗರಿಗೆ ಜಾನಕಿ ಶ್ರೀನಿವಾಸಮೂರ್ತಿ ಅಪರಿಚಿತೆ, ವೈದೇಹಿ ಚಿರಪರಿಚಿತೆ!

       ಈಗ ಉಡುಪಿ ಜಿಲ್ಲೆಯಲ್ಲಿರುವ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಕುಂದಾಪುರದಲ್ಲಿ 1945ರ ಫೆಬ್ರವರಿ 12ರಂದು ವೈದೇಹಿಯವರು ಜನಿಸಿದರು. ವಕೀಲರಾಗಿದ್ದ ಶ್ರೀ ಎ.ವಿ.ಎನ್. ಹೆಬ್ಬಾರ್ ವೈದೇಹಿಯವರ ತಂದೆ. ಶ್ರೀಮತಿ ಮಹಾಲಕ್ಷ್ಮಿಯಮ್ಮನವರು ಇವರ ತಾಯಿ. ಕುಂದಾಪುರದ ಬಿ.ಆರ್. ರಾಯರ ಹಿಂದೂ ಎಲಿಮನೆಂಟರಿ ಶಾಲೆ, ಬೋರ್ಡ್ ಹೈಸ್ಕೂಲುಗಳಲ್ಲಿ ವೈದೇಹಿಯವರ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣಗಳು ಜರುಗಿದವು. ಅದೇ ಊರಿನ ಭಂಡಾರ್‌ಕರ್ಸ್ ಕಾಲೇಜಿನಲ್ಲಿ ಬಿ.ಕಾಂ ಪದವಿ ಪಡೆದರು. ಮಾರ್ಚ್ 8, 1968ರಲ್ಲಿ ಶ್ರೀಯುತ ಕೆ.ಎಲ್. ಶ್ರೀನಿವಾಸಮೂರ್ತಿಯವರನ್ನು ಮದುವೆಯಾಗಿ ಶಿವಮೊಗ್ಗಕ್ಕೆ ಬಂದ ವೈದೇಹಿಯವರು ನಯನಾ ಮತ್ತು ಪಲ್ಲವಿ ಎಂಬ ಮುದ್ದಾದ ಮಕ್ಕಳನ್ನು ಪಡೆದರು. ಈಗ ಗೌರಿ ಮತ್ತು ಅಖಿಲ್ ಎಂಬ ಮೊಮ್ಮಕ್ಕಳೂ ಇದ್ದಾರೆ. ಈಗ ಮಣಿಪಾಲದ ಅನಂತನಗರದಲ್ಲಿರುವ ‘ಇರುವಂತಿಗೆ’ ಎಂಬ ಸ್ವಗೃಹದಲ್ಲಿ ಪತಿ ಶ್ರೀನಿವಾಸಮೂರ್ತಿಯವರೊಂದಿಗೆ ವೈದೇಹಿಯವರು ನೆಲೆಸಿದ್ದಾರೆ.

        ವೈದೇಹಿಯವರಿಗೆ ಬಾಲ್ಯದಿಂದಲೇ ಕತೆಯೊಡನೆ ಒಡನಾಟ ಬೆಳೆಯಿತು. ಕತೆಗಳನ್ನು ಓದುತ್ತಾ,, ಕೇಳುತ್ತಾ ಅವರೊಳಗಿನ ಲೇಖಕಿ ಜಾಗೃತಗೊಂಡಳು. ಮನಸ್ಸಿನ ಒಳತೋಟಿಗೆ, ದುಗುಡಕ್ಕೆ ಉಪಶಮನ ಪಡೆಯುವ ಹಂಬಲದಿಂದ ಬರವಣಿಗೆಯತ್ತ ವೈದೇಹಿ ಹೊರಳಿದರು. ಶಿವರಾಮ ಕಾರಂತ,  ಯು.ಆರ್. ಅನಂತಮೂರ್ತಿ, ಪಿ. ಲಂಕೇಶ, ಕೆ.ವಿ.ಸುಬ್ಬಣ್ಣ, ಗೋಪಾಲಕೃಷ್ಣ ಅಡಿಗ ಮುಂತಾದವರ ಒಡನಾಟ ಮತ್ತು ಬರಹಗಳು ವೈದೇಹಿಯವರನ್ನು ಗಾಢವಾಗಿ ಪ್ರಭಾವಿಸಿದವು. 1979ರಲ್ಲಿ ಇವರ ಮೊದಲ ಕಥಾ ಸಂಕಲನ ‘ಮರ ಗಿಡ ಬಳ್ಳಿ’ ಪ್ರಕಟವಾಗುವ ಕಾಲಕ್ಕೆ ಬಿಡಿ ಬಿಡಿ ಕಥೆಗಳ ಮೂಲಕ ವೈದೇಹಿ ಕನ್ನಡದ ಓದುಗರ ಗಮನ ಸೆಳೆದಿದ್ದರು. ಅಂತರಂಗದ ಪುಟಗಳು(1984), ಗೋಲ(1986), ಸಮಾಜಶಾಸ್ತ್ರಜ್ಞೆಯ ಟಿಪ್ಪಣಿಗೆ(1991), ಅಮ್ಮಚ್ಚಿ ಎಂಬ ನೆನಪು(2000), ಕ್ರೌಂಚ ಪಕ್ಷಿಗಳು(2005) ಕತೆ ಕತೆ ಕಾರಣ (2016)-ಇವು ವೈದೇಹಿಯವರ ಕಥಾ ಸಂಕಲನಗಳು. ಇವರ ಸಮಗ್ರ ಕಥೆಗಳ ಸಂಕಲನವನ್ನು ಹೆಗ್ಗೋಡಿನ ಅಕ್ಷರ ಪ್ರಕಾಶನ ಹೊರ ತಂದಿದೆ. ಕವಯಿತ್ರಿಯಾಗಿ ಬಿಂದು ಬಿಂದಿಗೆ (1990), ಪಾರಿಜಾತ(1999), ಹೂವ ಕಟ್ಟುವ ಕಾಯಕ(2011) ಎಂಬ ಮೂರು ಅಮೂಲ್ಯ ಸಂಕಲನಗಳನ್ನೂ, ‘ಅಸ್ಪೃಶ್ಯರು’ ಎಂಬ ಕಾದಂಬರಿಯನ್ನೂ ‘ಮಲ್ಲಿನಾಥನ ಧ್ಯಾನ’ ‘ಮೇಜು ಮತ್ತು ಬಡಗಿ’ ‘ಹರಿವ ನೀರು’ಎಂಬ ಲಲಿತ ಪ್ರಬಂಧಗಳ ಸಂಕಲನವನ್ನೂ ಹತ್ತು ಮಕ್ಕಳ ನಾಟಕಗಳನ್ನೂ, ಕೋ.ಲ. ಕಾರಂತ, ಬಿ.ವಿ. ಕಾರಂತ, ಸೇಡಿಯಾಪು ಕೃಷ್ಣಭಟ್ಟ, ಸರಸ್ವತಿಬಾಯಿ ರಾಜವಾಡೆಯವರ ನೆನಪಿನ ಚಿತ್ತಗಳನ್ನೂ ಸಂಗ್ರಹಿಸಿ ಕೊಟ್ಟಿದ್ದಾರೆ. ಸುಮಾರು ಏಳು ಕೃತಿಗಳನ್ನು ಇಂಗ್ಲಿಷ್ ಹಿಂದಿ ಮುಂತಾದ ಭಾಷೆಗಳಿಂದ ಭಾಷಾಂತರ ಮಾಡಿದ್ದಾರೆ. ಹೀಗೆ ವಿವಿಧ ಕ್ಷೇತ್ರಗಳಲ್ಲಿ ವೈದೇಹಿಯವರು ಬೆಲೆಯುಳ್ಳ ಕಾಣಿಕೆಗಳನ್ನು ಕನ್ನಡಕ್ಕೆ ನೀಡಿದ್ದಾರೆ.

        ತಮ್ಮ ಸಣ್ಣಕಥೆಗಳಿಗಾಗಿ ಎರಡು ಬಾರಿ “ರಾಷ್ಟ್ರೀಯ ಕಥಾ ಪುರಸ್ಕಾರ” ಪಡೆದ ಹೆಗ್ಗಳಿಕೆ ವೈದೇಹಿಯವರದು.  ಇವರು ಬರೆದ ‘ಗುಲಾಬಿ ಟಾಕೀಸು ಮತ್ತು ಹೊಸ ಅಲೆಗಳು’ ಎಂಬ ಕಥೆಯನ್ನಾಧರಿಸಿ ಗಿರೀಶ್ ಕಾಸರವಳ್ಳಿಯವರು ನಿರ್ಮಿಸಿದ ಚಲನಚಿತ್ರಕ್ಕೆ ರಾಷ್ಟ್ರಪತಿಗಳ ಸ್ವರ್ಣಕಮಲ ಪ್ರಶಸ್ತಿ ಲಭಿಸಿದೆ. 2009ರಲ್ಲಿ ಇವರ ‘ಕ್ರೌಂಚ ಪಕ್ಷಿಗಳು’ ಕಥಾಸಂಕಲನಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಪುರಸ್ಕಾರ ಲಭಿಸಿತು. ಈ ಎತ್ತರಕ್ಕೇರಿದ ಎರಡನೆಯ ಲೇಖಕಿ ಇವರಾಗಿದ್ದಾರೆ. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಸರ್ಕಾರದ ದಾನಾ ಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ, ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ, ಅನುಪಮಾ ನಿರಂಜನ ಪ್ರಶಸ್ತಿ, ಮಾಸ್ತಿ ಪ್ರಶಸ್ತಿ, ಸತ್ಯಕಾಮ ಪ್ರಶಸ್ತಿ, ಬೆಟಗೇರಿ ಕೃಷ್ಣಶರ್ಮ ಕಥಾ ಪ್ರಶಸ್ತಿ, ವರ್ಧಮಾನ ಪ್ರಶಸ್ತಿ, ಗಳಗನಾಥ ಪ್ರಶಸ್ತಿ ಮುಂತಾದ ಪುರಸ್ಕಾರಗಳಿಗೆ ಭಾಜನರಾಗಿರುವ ವೈದೇಹಿಯವರಿಗೆ ಕರ್ನಾಟಕ ವಿಶ್ವವಿದ್ಯಾಲಯವು ಗೌರವ ಡಾಕ್ಟರೇಟ್‌ ಪದವಿ ನೀಡಿ ಸನ್ಮಾನಿಸಿದೆ. ‘ಇರುವಂತಿಗೆ’ ಎಂಬ ಗೌರವಗ್ರಂಥವನ್ನು ನಾಡು ಇವರಿಗೆ ಸಮರ್ಪಿಸಿದೆ.

      ತಮ್ಮ ಕಥೆ, ಕವನಗಳಿಂದ ಎಲ್ಲ ವಿಮರ್ಶಕರ ಗಮನ ಸೆಳೆದ ವೈದೇಹಿಯವರದು ಅನನುಕರಣೀಯವಾದ ಗದ್ಯ ಶೈಲಿ. ಅನುಭವಗಳನ್ನು, ಮಾನವ ಸಂಬಂಧಗಳನ್ನು, ಮನುಷ್ಯರ ಅಂತರಂಗವನ್ನು ಎಲ್ಲ ಆಯಾಮಗಳಲ್ಲಿ, ರೂಪಗಳಲ್ಲಿ ಗಮನಿಸುತ್ತ, ಅವನ್ನು ಭಾಷೆಯಲ್ಲಿ ಹಿಡಿದಿಡಲು ಪ್ರಯತ್ನಿಸುವ ಅಪರೂಪದ ಬರಹಗಾರ್ತಿ ಇವರಾಗಿದ್ದಾರೆ. ಅವರು ಸೃಷ್ಟಿಸಿದ ಹೆಣ್ಣಿನ ಜಗತ್ತು, ಕುಂದಾಪುರ ಪರಿಸರದ ಸುಂದರವಾದ ನುಡಿಗಟ್ಟು, ಮೆಲುದನಿಯಲ್ಲೇ ದಾಖಲಿಸುವ ಪ್ರತಿಭಟನೆ,  ಪ್ರತಿರೋಧವನ್ನು ಹೊಟ್ಟೆಯಲ್ಲಿ ಮುಚ್ಚಿಟ್ಟುಕೊಂಡು ತಣ್ಣಗೆ ಮಾತಾಡುವ ಕಲೆಗಾರಿಕೆ ಅದ್ಭುತವಾದುವು. ಅವರು ಸೃಷ್ಟಿಸಿರುವ ಅಕ್ಕು, ಗುಂಡಮತ್ತೆ, ಚಂದಲೆ, ಸೌಗಂಧಿ ಗುಲಾಬಿಯಂತಹ ಚಿರ ಪಾತ್ರಗಳು ಕನ್ನಡ ಸಾಹಿತ್ಯದ ಎತ್ತರದ ವ್ಯಕ್ತಿತ್ವಗಳಾಗಿ ಅಮರವಾಗಿವೆ. ಇವರ ಅಡುಗೆ ಮನೆ ಹುಡುಗಿಯನ್ನು, ಜಂಬದ ಚೀಲದೊಳಗೆ ಲೋಕವನ್ನೇ ಮುಚ್ಚಿಟ್ಟುಕೊಂಡ ಸ್ತ್ರೀತ್ವದ ಸತ್ವವನ್ನು ನಾಡು ಎಂದಿಗಾದರೂ ಮರೆಯುವುದುಂಟೆ? ವೈದೇಹಿಯವರಿಗೀಗ ಎಂಬತ್ತು! ಹೂ ಮನದ ಈ ಲೇಖಕಿ ಜಗದ ಜಂಜಡಗಳನ್ನು ಎಚ್ಚರದ ಕಣ್ಣಿನಿಂದ ಗಮನಿಸುತ್ತಾ ನೂರಾರು ವರುಷ ನಮ್ಮೊಂದಿಗಿರಲೆಂಬುದು ಅವರ ಹುಟ್ಟುಹಬ್ಬಕ್ಕೆ ನಮ್ಮ ಹಾರೈಕೆ.