ಹುಬ್ಬಳ್ಳಿ ಮತ್ತು ಧಾರವಾಡ ಅವಳಿ ನಗರಗಳು ಶಿಕ್ಷಣ, ಸಾಹಿತ್ಯ ಹಾಗೂ ಸಂಗೀತ ಕ್ಷೇತ್ರಗಳಲ್ಲಿನ ಸಾಧಕರಿಂದಾಗಿ ಇಡೀ ದೇಶದಲ್ಲೇ ಹೆಸರಾಗಿವೆ. ಇಲ್ಲಿನ ಮಣ್ಣು, ನೀರು ಮತ್ತು ಗಾಳಿಯಲ್ಲೇ ಇವೆಲ್ಲದರ ಗಂಧವಿದೆ. ವರಕವಿ ದ.ರಾ.ಬೇಂದ್ರೆ, ಭಾರತ ರತ್ನ ಭೀಮಸೇನ್ ಜೋಷಿ, ಮಲ್ಲಿಕಾರ್ಜುನ ಮನ್ಸೂರ್, ಬಸವರಾಜ ರಾಜಗುರು, ಗಂಗೂಬಾಯಿ ಹಾನಗಲ್ ಅವರಂಥ ಮಹಾನ್ ತಾರೆಗಳು ಈ ನೆಲದಲ್ಲಿ ಉದಯಿಸಿ ಭಾರತವನ್ನು ಬೆಳಗಿದ್ದಾರೆ. ಈ ದಿಗ್ಗಜರು ಜನಿಸಿದ ನಾಡಿನ ಮತ್ತೊಂದು ಮಹಾನ್ ಪ್ರತಿಭೆ ಸಂಗೀತಾ ಕಟ್ಟಿ ಕುಲಕರ್ಣಿ. “ಆಡು ಮುಟ್ಟದ ಸೊಪ್ಪಿಲ್ಲ” ಎಂಬಂತೆ ಶಾಸ್ತ್ರೀಯ ಸಂಗೀತ, ಸುಗಮ ಸಂಗೀತ, ಜನಪದ ಗೀತೆ ಹಾಗೂ ಚಿತ್ರಗೀತೆಗಳೂ ಸೇರಿದಂತೆ ಎಲ್ಲ ಪ್ರಕಾರಗಳಲ್ಲೂ ಹಾಡಿ ಮನೆಮಾತಾಗಿರುವ ಸಂಗೀತಾ ಕಟ್ಟಿ ಅವರ ಜನ್ಮದಿನದ ಸಂದರ್ಭದಲ್ಲಿ ಅವರ ಬದುಕು ಮತ್ತು ಸಾಧನೆಗಳ ಬಗ್ಗೆ “ಮಾಧ್ಯಮ ಅನೇಕ ” ಸಂಸ್ಥೆಯಿಂದ ಒಂದು ಪಕ್ಷಿ ನೋಟ.

ಸಂಗೀತಾ ಅವರು 1970ನೇ ಇಸವಿ ಅಕ್ಟೋಬರ್ 7 ರಂದು  ರಾಜ್ಯದ ಸಾಂಸ್ಕೃತಿಕ ರಾಜಧಾನಿ ಎಂದೇ ಕರೆಯಲ್ಪಡುವ ಧಾರವಾಡದಲ್ಲಿ ಜನಿಸಿದರು. ಇವರ ತಂದೆ ಡಾ.ಹೆಚ್.ಎ.ಕಟ್ಟಿ, ತಾಯಿ ಭಾರತಿ.  ಇವರು ಹುಟ್ಟಿದ್ದು ದಸರೆಯ ಸರಸ್ವತಿ ಪೂಜೆಯ ದಿನ. ಸಂಗೀತ ಪ್ರೇಮಿಗಳಾಗಿದ್ದ ತಂದೆ-ತಾಯಿ ಮನೆಯಲ್ಲಿ ರೇಡಿಯೋ ಮತ್ತು ಗ್ರಾಮಫೋನ್ ಮೂಲಕ ಹಾಡುಗಳನ್ನು ಕೇಳುತ್ತಿದ್ದರು. ಇವೆಲ್ಲವನ್ನೂ ತಾನೂ ಕೇಳಿಸಿಕೊಳ್ಳುತ್ತಿದ್ದ ಪುಟ್ಟಮಗು ಸಂಗೀತಾಳ ಬಾಯಿಂದ ಬರುವ ಮಾತೆಲ್ಲವೂ ಹಾಡೇ ಆಗಿತ್ತು. ಸಂಗೀತ ಸರಿಗಮಪದದ ಆರಂಭಿಕ ಪಾಠಗಳನ್ನು ತಂದೆಯಿಂದಲೇ ಕಲಿತ ಸಂಗೀತಾ, ಹಾಡು ಅನ್ನುವುದನ್ನೇ ತಮ್ಮ ಭಾಷೆ ಮಾಡಿಕೊಂಡಿದ್ದರು.

ಸಂಗೀತಾ ಕೇವಲ ನಾಲ್ಕುವರ್ಷದ ಬಾಲಕಿಯಾಗಿದ್ದಾಗ ಸಿನಿಮಾ ಹಿನ್ನೆಲೆ ಗಾಯನ ಕ್ಷೇತ್ರದಲ್ಲಿ ಹೆಸರಾಗಿದ್ದ ಸಂಗೀತಗಾರ ನೌಷದ್ ಅಲಿಯವರ ಎದುರು ಹಾಡುವ ಅವಕಾಶ ಸಿಕ್ಕಿತ್ತು. ಕಾರ್ಯಕ್ರಮವೊಂದಕ್ಕಾಗಿ ಧಾರವಾಡದ ಕರ್ನಾಟಕ ವಿ.ವಿಗೆ ಭೇಟಿ ನೀಡಿದ್ದ ನೌಷದ್ ಅಲಿಯವರು, ಕಟ್ಟಿ ಅವರ ಮನೆಗೆ ಬಂದಿದ್ದರು. ಪ್ರಸಿದ್ಧ ಗಾಯಕಿ ನೂರ್ ಜಹಾನ್ ಅವರು ಹಾಡಿದ್ದ   “Avaaz de kahaan hai” ಗೀತೆಯನ್ನು ಬಾಲಕಿ ಸಂಗೀತಾಳ ಕಂಠದಿಂದ ಕೇಳಿ ಖುಷಿ ಪಟ್ಟ ನೌಷದ್ ಅಲಿ ಅವರು “Desh ki bahut badi gaayika banegi yeh ladki ” ಎಂದು ಹರಸಿ, “ಈ ಮಗುವನ್ನು ಒಳ್ಳೆಯ ಗುರುಗಳ ಬಳಿ ಪಾಠಕ್ಕೆ ಸೇರಿಸಿ” ಎಂದು ಸಂಗೀತಾ ಅವರ ತಂದೆಯವರಿಗೆ ಹೇಳಿದ್ದರು.

ಆ ಬಳಿಕ ಧಾರವಾಡದ ಮಂಗಳವಾರಪೇಟೆಯ ಧರ್ಮಾರ್ಥ ಸಂಗೀತ ಪಾಠ ಶಾಲೆಯಲ್ಲಿ ಗುರುಗಳಾಗಿದ್ದ ಪಂಡಿತ್ ಶೇಷಗಿರಿ ದಂಡಾಪುರ್ ಅವರ ಬಳಿ ಸೇರಿದ ಸಂಗೀತ, ಸಾಂಪ್ರದಾಯಕವಾಗಿ ಸಂಗೀತಾಭ್ಯಾಸ ಆರಂಭಿಸಿದರು. ಕೆಲವರ್ಷಗಳ ಬಳಿಕ, ಪಂಡಿತ್ ಚಂದ್ರಶೇಖರ ಪುರಾಣಿಕ ಮಠ ಅವರಲ್ಲಿ ಹಿಂದೂಸ್ತಾನಿ ಖ್ಯಾಲ್ ಸಂಗೀತಾಭ್ಯಾಸ ಮಾಡಿದರು. ಮತ್ತೊಬ್ಬ ಗುರು ಅನಂತಾಚಾರ್ ಕಟಿಗೆ ಅವರಿಂದಲೂ ಸಾಕಷ್ಟು ಹಾಡುಗಳನ್ನು ಕಲಿತರು. ಸಂಗೀತದ ಜೊತೆ ಜೊತೆಗೆ ಶಾಲಾ ಶಿಕ್ಷಣವನ್ನೂ ಮುಂದುವರೆಸಿದರು. ಈ ನಡುವೆ ಧಾರವಾಡ ಆಕಾಶವಾಣಿಯ “ಗಿಳಿವಿಂಡು” ಇತ್ಯಾದಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಅತ್ಯುತ್ತಮವಾಗಿ ಹಾಡಿ, ಕೇಳುಗರನ್ನು ರಂಜಿಸುವ ಮೂಲಕ ಬಾಲ ಪ್ರತಿಭೆಯಾಗಿ ಬೆಳಕಿಗೆ ಬಂದರು. ಅಂಥದ್ದೇ ಒಂದು ಸಂದರ್ಭದಲ್ಲಿ  ಸಂಗೀತಾ ಕಟ್ಟಿ ಹಾಡುವುದನ್ನು ಮತ್ತು ಹಾಡಿನ ರಾಗ, ತಾಳಗಳ ಬಗ್ಗೆ ಖಚಿತವಾಗಿ ಉತ್ತರಿಸುವುದನ್ನು ಕೇಳಿದ್ದ ಪ್ರಖ್ಯಾತ ಗಾಯಕಿ ಗಂಗೂಬಾಯಿ ಹಾನಗಲ್ ಅವರೂ ಕೂಡ ಬಾಲಕಿ ಸಂಗೀತಾಳನ್ನು ಪ್ರಶಂಸೆ ಮಾಡಿದ್ದರು.

ಅಷ್ಟು ಹೊತ್ತಿಗಾಗಲೇ ವೇದಿಕೆಯಲ್ಲೂ ಹಾಡುತ್ತಿದ್ದ ಸಂಗೀತಾಗೆ ಧಾರವಾಡದಲ್ಲಿ ನಡೆದ ಒಂದು ಸಾರ್ವಜನಿಕ ಕಾರ್ಯಕ್ರಮದಲ್ಲಿ ವರಕವಿ ದ.ರಾ.ಬೇಂದ್ರೆ ಅವರ ಎದುರು ಹಾಡುವ ಅವಕಾಶ ದೊರಕಿತ್ತು. ಅಲ್ಲಿ, ಬೇಂದ್ರೆಯವರ “ಯಾಕೋ ಕಾಣೆ ರುದ್ರ ವೀಣೆ ಮಿಡಿಯುತಿರುವುದು” ಕವನ ಹಾಡಿದ 8 ವರ್ಷದ ಬಾಲಕಿ ಸಂಗೀತಾಳನ್ನು ಕರೆದು ತಮ್ಮ ತೊಡೆಯ ಮೇಲೆ ಕೂರಿಸಿಕೊಂಡ ಬೇಂದ್ರೆ ಅಜ್ಜ, “ನೀ ಬಹಳ ಚಲೋ ಹಾಡ್ದಿ, ಇಷ್ಟೇ ಅನ್ಕೋಬೇಡ, ಇನ್ನೂ ಬಹಳ ಹಾಡು ಬರೆದಿದ್ದೀನಿ ನಾನು,  ಕೊಡ್ತೀನಿ ನಿನಗ, ನೀನು ಅದನ್ನೆಲ್ಲಾ ಕಲಿತು ಎಲ್ಲ ಕಡೆ ಹಾಡಬೇಕು” ಅಂತ ಹೇಳಿ ಆಶೀರ್ವದಿಸಿದ್ದರು. ಅದರಂತೆ ಕಲಿಯುತ್ತಾ ಹೋದ ಸಂಗೀತಾ ಕಟ್ಟಿ, ತಮ್ಮ 13ನೇ ವಯಸ್ಸಿನಲ್ಲೇ “ದಾಸಮಂಜರಿ” ಎಂಬ ಭಕ್ತಿ ಸಂಗೀತದ ಕ್ಯಾಸೆಟ್ ಹೊರತಂದಿದ್ದರು.

ಆ ಮುಂದಿನ ದಿನಗಳಲ್ಲಿ ಪ್ರಸಿದ್ಧ ಗಾಯಕ ಪದ್ಮಭೂಷಣ, “ಸಾವಿರ ಚೀಸ್ ಗಳ ಸರದಾರ” ಎಂಬ ಹೆಗ್ಗಳಿಕೆಯ ಪಂಡಿತ್ ಬಸವರಾಜ ರಾಜಗುರು ಅವರ ಬಳಿ ಸೇರಿಕೊಂಡ ಸಂಗೀತಾ ಕಟ್ಟಿ, ಸುಮಾರು 12 ವರ್ಷಗಳ ಕಾಲ ಅವರ ಶಿಷ್ಯರಾಗಿ ಸಂಗೀತಾಭ್ಯಾಸ ಮಾಡಿದರು. ಆದರೆ, ದುರದೃಷ್ಟವಶಾತ್ ಪಂಡಿತ್ ಬಸವರಾಜ ರಾಜಗುರು ಅವರು 1991ರಲ್ಲಿ ಹೃದಯಾಘಾತದಿಂದ ನಿಧನರಾಗುತ್ತಾರೆ. ಆ ಮುಂದಿನ ದಿನಗಳಲ್ಲಿ ಕಲಿಕೆ ಮುಂದುವರಿಸಲು ಗುರುವಿಗಾಗಿ ಹುಡುಕುತ್ತಾ ಹೋದ ಸಂಗೀತಾಗೆ ಗುರುವಾಗಿ ದೊರಕಿದ್ದು ಹಿಂದೂಸ್ತಾನಿ ಸಂಗೀತದ ಮಹಾನ್ ಕಲಾವಿದೆ, ಗಾನ ಸರಸ್ವತಿ ಕಿಶೋರಿ ಅಮೋನ್ಕರ್. ಅಲ್ಲಿಂದ ಮುಂದಿನ ಐದುವರ್ಷಗಳ ಕಾಲ ಕಿಶೋರಿ ತಾಯಿ ಅವರ ಮುಂಬೈ ಮನೆಯಲ್ಲೇ ಇದ್ದ ಸಂಗೀತಾ, ಗುರುವಿನ ಮಾರ್ಗದರ್ಶನದಲ್ಲಿ ಸಾಣೆ ಹಿಡಿದ ವಜ್ರದಂತಾದರು.

ಗುರುವಿನ ಕಣ್ಣೆದುರು ಕುಳಿತು ಸಂಗೀತ ಕಲಿಯುವುದರ ಜೊತೆಗೆ, ಸಂಗೀತಕ್ಕೆ ಸಂಬಂಧಿಸಿದ ಎಲ್ಲ ಅಧಿಕೃತ ಪರೀಕ್ಷೆಗಳನ್ನು ಕಟ್ಟುತ್ತಾ ಹೋದ ಸಂಗೀತಾ ಕಟ್ಟಿ, ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಶಿಕ್ಷಣದ ಜೂನಿಯರ್, ಸೀನಿಯರ್ ಮತ್ತು ವಿದ್ವತ್ ಪರೀಕ್ಷೆಗಳಲ್ಲಿ ರಾಜ್ಯಕ್ಕೆ ಮೊದಲ Rank ಗಳಿಸುವ ಮೂಲಕ ಸಾಧನೆ ಮಾಡಿದರು.

1987ರಲ್ಲಿ ನಾಗಪುರದಲ್ಲಿ ನಡೆದ ರಾಷ್ಟ್ರೀಯ ಸಂಗೀತೋತ್ಸವದಲ್ಲಿ  ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸುವ ಅವಕಾಶ ಸಂಗೀತಾ ಕಟ್ಟಿ ಅವರಿಗೆ ದೊರಕಿತ್ತು. ಆ ನಂತರದ ದಿನಗಳಲ್ಲಿ ಹಿಂದೂಸ್ತಾನಿ ಶಾಸ್ತ್ರೀಯ ಮತ್ತು ಸುಗಮ ಸಂಗೀತದ ವಿಭಾಗದಲ್ಲಿ ಆಕಾಶವಾಣಿಯ ವಾರ್ಷಿಕ ಪ್ರಶಸ್ತಿಗಳೂ ಸಂಗೀತಾ ಕಟ್ಟಿ ಅವರ ಪಾಲಾಗಿದ್ದವು. ಆದರೆ ಸಂಗೀತ ಕಲಿಕೆ, ಸಂಗೀತ ಶಿಕ್ಷಣದ ಜೊತೆಗೆ, ಕಾಲೇಜು ಶಿಕ್ಷಣವನ್ನೂ ಮುಂದುವರೆಸಿದ್ದ ಸಂಗೀತಾ ಕಟ್ಟಿ Distinctionನೊಂದಿಗೆ B.Sc ಪದವಿ ಪಡೆದು ತಾವು ಎಂತಹ ಅದ್ಭುತ All-rounder ಅನ್ನುವುದನ್ನು ತೋರಿಸಿಕೊಟ್ಟಿದ್ದರು. ಇದು ಒಂದುರೀತಿಯಲ್ಲಿ “ಋಷಿವಾಕ್ಯದೊಡನೆ ವಿಜ್ಞಾನ ಕಲೆ ಮೇಳವಿಸೆ, ಜಸವು ಜನ ಜೀವನಕೆ ಮಂಕುತಿಮ್ಮ” ಎಂಬ ಡಿವಿಜಿಯವರ ಕಗ್ಗದ ಉಕ್ತಿಗೆ ಉದಾಹರಣೆಯಾಗಿತ್ತು. ಬದುಕಿನ ಎಲ್ಲ ಕ್ಷೇತ್ರಗಳಲ್ಲೂ ಸಾಧನೆ ಮಾಡಬೇಕು ಎಂಬ ಹಂಬಲ ಹೊಂದಿದ್ದ ಸಂಗೀತಾ ಕಟ್ಟಿ, ಸ್ಪರ್ಧಾತ್ಮಕ ಪರೀಕ್ಷೆ ಬರೆದು IAS ಅಧಿಕಾರಿಯಾಗಿ ಸಮಾಜ ಸೇವೆ ಮಾಡಬೇಕು ಎಂಬ ಆಕಾಂಕ್ಷೆಯನ್ನೂ ಹೊಂದಿದ್ದರಂತೆ.

1975 ನೇ ಇಸವಿಯಿಂದ ಹಾಡಲು ಪ್ರಾರಂಭಿಸಿದ ಸಂಗೀತಾ ಕಟ್ಟಿ ಅಲ್ಲಿಂದ ಇಲ್ಲಿಯವರೆಗಿನ ಸಂಗೀತ ಪ್ರಯಾಣದಲ್ಲಿ ಅಪಾರ ಸಾಧನೆ ಮಾಡಿ, ಹಿಂದೂಸ್ತಾನಿ ಸಂಗೀತ ಕ್ಷೇತ್ರದ ಹೊಸ ಪೀಳಿಗೆಯ ದಿಗ್ಗಜರಲ್ಲಿ ಒಬ್ಬರಾಗಿದ್ದಾರೆ. ಆಕಾಶವಾಣಿ ಮತ್ತು ದೂರದರ್ಶನದ “A Grade” ಕಲಾವಿದೆಯಾಗಿ ಮಾನ್ಯತೆ ಪಡೆದಿರುವ ಸಂಗೀತಾ ಕಟ್ಟಿ ಅವರು, ಶಾಸ್ತ್ರೀಯ ಸಂಗೀತ, ವಚನ, ದಾಸರ ಪದ, ಜಾನಪದ ಗೀತೆ, ಭಾವ ಗೀತೆ, ಚಿತ್ರ ಗೀತೆ ಸೇರಿದಂತೆ ಎಲ್ಲ ಪ್ರಕಾರಗಳಲ್ಲೂ ಹಾಡಿ ಕೇಳುಗರ ಮನಸ್ಸನ್ನು ಗೆದ್ದಿದ್ದಾರೆ.

“ಕಿತ್ತೂರಿನ ಹುಲಿ” ಸಿನೆಮಾದಿಂದ ಆರಂಭಿಸಿ ಹಲವಾರು ಸಿನೆಮಾ ಹಾಡುಗಳ ಹಿನ್ನೆಲೆ ಗಾಯಕಿಯಾಗಿರುವ ಸಂಗೀತಾ ಕಟ್ಟಿ, ಹೆಸರಾಂತ ಸಂಗೀತ ನಿರ್ದೇಶಕರಾದ ಉಪೇಂದ್ರಕುಮಾರ್, ವಿಜಯಭಾಸ್ಕರ್, ರಾಜನ್-ನಾಗೇಂದ್ರ, ಸಿ.ಅಶ್ವಥ್ ಮೊದಲಾದವರ ಜೊತೆ ಕೆಲಸ ಮಾಡಿದ್ದಾರೆ. ಶಾಸ್ತ್ರೀಯ ಸಂಗೀತದ ದಿಗ್ಗಜರಾದ ಡಾ.ಎಂ. ಬಾಲಮುರಳಿ ಕೃಷ್ಣ, ಪ್ರಸಿದ್ಧ ಹಿನ್ನೆಲೆ ಗಾಯಕರಾದ ಡಾ.ಕೆ.ಜೆ.ಏಸುದಾಸ್ ಮತ್ತು ದಿ.ಡಾ.ಎಸ್.ಪಿ.ಬಾಲಸುಬ್ರಹ್ಮಣ್ಯಮ್ ಅವರೊಂದಿಗೂ ಹಾಡಿದ್ದಾರೆ.

ಹಲವಾರು ಟಿ.ವಿ ಧಾರಾವಾಹಿಗಳ ಶೀರ್ಷಿಕೆ ಗೀತೆಗಳನ್ನೂ ಹಾಡಿ ಸೈ ಅನ್ನಿಸಿಕೊಂಡಿರುವ ಸಂಗೀತಾ ಕಟ್ಟಿ ಅವರು, ಮೂಡಲ ಮನೆ ಧಾರಾವಾಹಿಗಾಗಿ ಹಾಡಿರುವ ಡಾ.ಚಂದ್ರಶೇಖರ ಕಂಬಾರರ ರಚನೆ “ರೆಂಬೆ ಕೊಂಬೆ ಮ್ಯಾಗ ಗೂಡ ಕಟ್ಟಿದಾವ ರೆಕ್ಕೆ ಬಲಿತ ಹಕ್ಕಿ, ಗೂಡಿನ್ಯಾಗ ಮಲಗ್ಯಾವ ಮರಿ ಹಕ್ಕಿ” ಗೀತೆ ಇಂದಿಗೂ ಜನರ ನಾಲಿಗೆಯ ಮೇಲೆ ನಲಿದಾಡುತ್ತಿದೆ.

“ಹೇಳು ಹೇಳೆನ್ನ ಮರಿಯೇ ”, “ಕಂಬದ ಮ್ಯಾಲಿನ ಗೊಂಬೆಯೇ ”, “ಅಳುವ ಕಡಲೊಳು ತೇಲಿ ಬರುತಲಿದೆ ನಗೆಯ ಹಾಯಿದೋಣಿ ”, “ಮುಗಿಲ ಮಾರಿಗೆ ರಾಗ ರತಿಯ ನಂಜ ಏರಿತ್ತ”, ಇತ್ಯಾದಿ ಗೀತೆಗಳನ್ನು ಸಂಗೀತಾ ಅವರ ಬಾಯಿಂದ ಕೇಳುವುದು ಕಿವಿಗಳಿಗೆ ಹಬ್ಬ ಅನ್ನಬಹುದು.

“ಸಂಗೀತಕ್ಕೆ ಭಾಷೆಯ ಹಂಗಿಲ್ಲ” ಎಂಬ ಮಾತಿನಂತೆ, ಕನ್ನಡದ ಜೊತೆಗೆ ಹಿಂದಿ ಮತ್ತು ಮರಾಠಿ ಭಾಷೆಯಲ್ಲೂ ಹಾಡಬಲ್ಲ ಸಂಗೀತಾ ಕಟ್ಟಿ, ಭಾರತೀಯ ಸಂಗೀತದ ಎಲ್ಲ ಪ್ರಕಾರಗಳ ಜೊತೆಗೆ, Jazz ಮತ್ತು Arabic music ಅನ್ನೂ ಆಸ್ವಾದಿಸುತ್ತಾರೆ, ಸೂಫಿ ಗೀತೆಯನ್ನೂ ಹಾಡಿ ಆನಂದಿಸುತ್ತಾರೆ. ಭಾರತ ಮತ್ತು ವಿದೇಶಗಳಲ್ಲಿ ಸುಮಾರು 3 ಸಾವಿರಕ್ಕೂ ಹೆಚ್ಚು ಕಚೇರಿಗಳನ್ನು ನೀಡಿರುವ ಸಂಗೀತಾ ಕಟ್ಟಿ, 500ಕ್ಕೂ ಹೆಚ್ಚು Albumಗಳನ್ನು ಹೊರತಂದಿದ್ದಾರೆ. ಸಂಗೀತ ಸರಿತಾ, ನಿನಾದ, ಬೇಂದ್ರೆ ಗೀತ ಯಾತ್ರೆ ಇತ್ಯಾದಿ ಕಾರ್ಯಕ್ರಮಗಳ ಮೂಲಕ ನಾಡಿನಾದ್ಯಂತ ಸಂಗೀತ ಪ್ರಸಾರದಲ್ಲಿ ತೊಡಗಿದ್ದಾರೆ.

ಮೈಸೂರು ದಸರಾ ಕಾರ್ಯಕ್ರಮಗಳು, ಪುಣೆಯ ಸವಾಯಿ ಗಂಧರ್ವ ಸಂಗೀತೋತ್ಸವ, ಹಂಪಿ ಉತ್ಸವ, ಸಹ್ಯಾದ್ರಿ ಉತ್ಸವ ಇತ್ಯಾದಿ ಹಲವಾರು ಉತ್ಸವಗಳಲ್ಲಿ ಹಾಡಿರುವ ಸಂಗೀತಾ ಕಟ್ಟಿ ಅವರು, ಅಮೆರಿಕದ ಕನ್ನಡ ಕೂಟ AKKA ಸೇರಿದಂತೆ ಇಂಗ್ಲೆಂಡ್, ಕೆನಡಾ, ಆಸ್ಟ್ರೇಲಿಯ, ನ್ಯೂಜಿಲೆಂಡ್, ಹಾಂಗ್ ಕಾಂಗ್, ಬಹ್ರೇನ್ ಇತ್ಯಾದಿ ದೇಶಗಳಲ್ಲೂ ಸಂಗೀತದ ರಸದೌತಣ ಬಡಿಸಿದ್ದಾರೆ. “ಸಂಗೀತದಲ್ಲಿ ಮಹಿಳೆಯ ಪಾತ್ರ ಮತ್ತು ಭಾರತೀಯ ಸಂಗೀತದ ಪ್ರಾಮುಖ್ಯತೆ” ಕುರಿತು ಅಮೆರಿಕದ Ohio Universityಯಲ್ಲಿ ಪ್ರಬಂಧ ಮಂಡಿಸಿದ್ದಾರೆ.

ಸಂಗೀತಾ ಕಟ್ಟಿ ಅವರು ತಮ್ಮ ಪತಿ ಮನಮೋಹನ್ ಕುಲಕರ್ಣಿ ಮತ್ತು ಮಗಳು ಸಾವನಿ ಹಾಗೂ ಮಗ ನಿನಾದ್ ಜೊತೆಯಲ್ಲಿ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಬೆಂಗಳೂರಿನ ಭಾರತೀಯ ವಿದ್ಯಾಭವನದಲ್ಲಿ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಗಾಯನದ ಗುರುವಾಗಿ ಸಂಗೀತಾಸಕ್ತರಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ. “ಸಂಗೀತ ಭಾರತಿ” ಎಂಬ ಬಿರುದು ಪಡೆದಿರುವ ಸಂಗೀತಾ ಕಟ್ಟಿ ಅವರಿಗೆ 2007ರಲ್ಲಿ ಸುವರ್ಣ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ದೊರೆತಿದೆ. 2012ರಲ್ಲಿ ತಮ್ಮ ಗುರು ಬಸವರಾಜ್ ರಾಜ್ ಗುರು ಹೆಸರಿನಲ್ಲಿ ಸ್ಥಾಪಿತವಾಗಿರುವ ರಾಷ್ಟ್ರೀಯ ಪ್ರಶಸ್ತಿ ಸಂಗೀತಾ ಕಟ್ಟಿ ಅವರಿಗೆ ಸಂದಿದೆ. 2016ರಲ್ಲಿ ರಮಣ ಶ್ರೀ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.

ಸುಮಾರು ಐದು ದಶಕಗಳ ಸಂಗೀತ ಯಾತ್ರೆಯಲ್ಲಿ ಮಹತ್ ಸಾಧನೆ ಮಾಡಿ, ಈಗಾಗಲೇ ಹಲವು ಪ್ರಶಸ್ತಿ ಮತ್ತು ಪುರಸ್ಕಾರಗಳಿಗೆ ಪಾತ್ರರಾಗಿರುವ ಸಂಗೀತಾ ಕಟ್ಟಿ ಅವರಿಗೆ ಮುಂದಿನ ದಿನಗಳಲ್ಲಿ ಮಹತ್ತರವಾದ ಸ್ಥಾನ-ಮಾನಗಳು ದೊರೆಯಲಿ, ಅವರ ಗಾಯನ ಇಡೀ ದೇಶದ ಎಲ್ಲ ಸಂಗೀತ ರಸಿಕರ ಹೃದಯ ಮುಟ್ಟಲಿ ಎಂದು ಆಶಿಸುವ “ಮಾಧ್ಯಮ ಅನೇಕ”, ಸಂಗೀತಾ ಕಟ್ಟಿ ಅವರಿಗೆ ಜನ್ಮದಿನದ ಶುಭ ಹಾರೈಕೆಗಳನ್ನು ಸಲ್ಲಿಸುತ್ತದೆ.