ಕನ್ನಡದ ಪ್ರಮುಖ ಲೇಖಕರಲ್ಲಿ ಒಬ್ಬರಾದ ಇವರು, ಸ್ವಂತಿಕೆ ಮತ್ತು ಸರಳತೆಯಲ್ಲಿ ನಾಡಿನ ಸುಪ್ರಸಿದ್ಧ ಸಾಹಿತಿಯಾಗಿದ್ದ ತಂದೆಯನ್ನೂ ಮೀರಿಸಿದವರು. ಯಾವುದೇ ಪ್ರಚಾರ ಮತ್ತು ಸ್ಥಾನಕ್ಕಾಗಿ ಆಸೆ ಪಡದ ಇವರು, ತಮ್ಮ ಆದರ್ಶಗಳಿಗೆ ಬದ್ಧರಾಗಿ ಬದುಕಿದವರು.  ಹೌದು, ನಾವು ಕನ್ನಡದ ಪ್ರಮುಖ ಲೇಖಕ ಮತ್ತು ಚಿಂತಕರಲ್ಲಿ ಒಬ್ಬರಾದ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರನ್ನು ಸ್ಮರಿಸುತ್ತಿದ್ದೇವೆ. ಇದಕ್ಕೆ ಕಾರಣ, ಇಂದು – ಸೆಪ್ಟೆಂಬರ್  8 – ತೇಜಸ್ವಿಯವರ ಜನ್ಮ ದಿನ. ಈ ಸಂದರ್ಭದಲ್ಲಿ “ಮಾಧ್ಯಮ ಅನೇಕ”, ಪೂರ್ಣಚಂದ್ರ ತೇಜಸ್ವಿ ಅವರನ್ನು ಪ್ರೀತಿ ಮತ್ತು ಗೌರವದಿಂದ ನೆನಪು ಮಾಡಿಕೊಳ್ಳುತ್ತಿದೆ.

ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಲೋಕಕ್ಕೆ ಮಹತ್ವದ ಕೊಡುಗೆ ನೀಡಿದ ಕತೆಗಾರ, ಕಾದಂಬರಿಕಾರ, ಅಂಕಣಕಾರ, ಕೃಷಿಕ ಮತ್ತು ವಿಶಿಷ್ಟ ಚಿಂತಕ ಶ್ರೀ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರ ಬದುಕು, ಬರಹ ಮತ್ತು ಚಿಂತನೆಗಳ ಒಂದು ಪರಿಚಯ ನಿಮಗೆಲ್ಲರಿಗಾಗಿ.

ತೇಜಸ್ವಿಗಾಗಿ ತಂದೆಯ ಹಂಬಲ

ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರು, ಭಾರತ ದೇಶದ ಸಾಹಿತ್ಯ ಲೋಕದ ದಿಗ್ಗಜರಲ್ಲಿ ಒಬ್ಬರಾಗಿರುವ ಕುವೆಂಪು ಅವರ ಹಿರಿಯ ಮಗನಾಗಿ 1938ರ ಸೆಪ್ಟಂಬರ್ ತಿಂಗಳ 8 ರಂದು ತಾಯಿ ಹೇಮಾವತಿ ತವರು ಮನೆ, ಶಿವಮೊಗ್ಗದಲ್ಲಿರುವ ದೇವಂಗಿ ರಾಮಣ್ಣಗೌಡರ ಮನೆಯಲ್ಲಿ ಜನಿಸಿದರು. ತಮ್ಮ ಪತ್ನಿ ಹೇಮಾವತಿ ಅವರು ಗರ್ಭಿಣಿಯಾಗಿದ್ದಾಗಲೇ ಅಪಾರ ಸಂತಸ ಅನುಭವಿಸಿದ ಕುವೆಂಪು ಅವರು, ಗರ್ಭಗುಡಿ ಎಂಬ ಕವಿತೆ ಬರೆಯುತ್ತಾರೆ. ‘ಬೆಳೆಯುತಿರೆ ದಿವ್ಯಾರ್ಭಕಂ ಗರ್ಭಗುಡಿಯಲ್ಲಿ ನಿನ್ನ ಮೈ, ಗರ್ಭಿಣಿಯೆ, ದೇವಾಲಯಂ’ ಎಂದು ಬಣ್ಣಿಸುತ್ತಾರೆ. ಅದೇ ಕವಿತೆಯ ಕಡೆಯ ಸಾಲಿನಲ್ಲಿ, ‘ಪೂರ್ಣಾಂಗಿ, ತೇಜಸ್ವಿ ಪೂರ್ಣಚಂದ್ರ ಶರೀರೆ, ಶಿವಕೃತಿ ಕಲಾರಂಗಮೆನಗೆ ನೀನ್, ಓ ನೀರೆ!’ ಅನ್ನುವ ಕುವೆಂಪು ಅವರು, ಪತ್ನಿಯನ್ನು “ಅರ್ಧಾಂಗಿ” ಎಂದು ಕರೆಯುವುದರ ಬದಲು “ಪೂರ್ಣಾಂಗಿ” ಅನ್ನುತ್ತಾರೆ.  

ಇದರ ಜೊತೆಗೆ, ಮುಂದೆ ಹುಟ್ಟಲಿರುವ ಮಗುವಿನ ಲಿಂಗ ಮತ್ತು ಹೆಸರನ್ನೂ ಅವರು ಅದಾಗಲೇ ನಿರ್ಧರಿಸಿದಂತೆ ಕಾಣುತ್ತದೆ. ತಂತ್ರಜ್ಞಾನದ ನೆರವಿನಿಂದ ಹುಟ್ಟಲಿರುವ ಮಗು ಹೆಣ್ಣೋ ಗಂಡೋ ಅನ್ನುವುದನ್ನು ತಿಳಿಯುವ ಅನುಕೂಲ ಆಗಂತೂ ಇರಲಿಲ್ಲ. ಹೀಗಾಗಿ, ನಿಜವಾಗಿಯೂ ಇದು ಅಚ್ಚರಿಗಿಂತಲೂ ಹೆಚ್ಚಿನದಾದ ಒಂದು ಸಂಗತಿ ಅನ್ನಿಸುತ್ತದೆ.

ಇಷ್ಟು ಮಾತ್ರವಲ್ಲ, ‘ಬಿನ್ನಯ್ಸಿದಳು ತಾಯಪ್ಪಳಿಂತು’ ಎಂಬ ಮತ್ತೊಂದು ಕವಿತೆಯಲ್ಲಿ, ‘ಕಳುಹಿಸು ಯೋಗ್ಯನನು, ಹೇ ಗುರುವೇ, ಕಳುಹಿಸು ಭಾಗ್ಯನನು, ಶ್ರೀ ಗುರುವೇ’ ಎಂದು ಆರಂಭಿಸಿ ‘ಕಳುಹು ಕಲಾರಸ ಭಕ್ತನನು, ಕಾವ್ಯಾಸಕ್ತನನು; ಕನ್ನಡ ಸೇವಾ ಶಕ್ತನನು, ನಿನ್ನಡಿ ಯುಕ್ತನನು, ಕಳುಹು ನಿರಂಕುಶ ಮುಕ್ತನನು, ಮೌಢ್ಯ ವಿರಕ್ತನನು; ಕಳುಹು ಮನೋ ಸ್ವಾತಂತ್ರ್ಯನನು, ಶಿವ ಪರ ತಂತ್ರನನು’ ಎಂದೆಲ್ಲ ಪ್ರಾರ್ಥಿಸುತ್ತಾರೆ. ಮಹಾಕವಿಯ ಈ ಬಯಕೆಯನ್ನು ಸಂಪೂರ್ಣವಾಗಿ ಈಡೇರಿಸಿದ ಕಂದನಾಗಿ ಪೂರ್ಣಚಂದ್ರ ತೇಜಸ್ವಿ ಹುಟ್ಟಿದ್ದು ಮತ್ತು ಬಾಳಿದ ರೀತಿಯೇ ನಿಜಕ್ಕೂ ಒಂದು ವಿಸ್ಮಯ.

ತೇಜಸ್ವಿ ವಿದ್ಯಾಭ್ಯಾಸ

ಮೈಸೂರಿನ ‘ಉದಯರವಿ’ ಮನೆಯಲ್ಲೇ ಅಪ್ಪ-ಅಮ್ಮನಿಂದ ಅ ಆ ಇ ಈ ಕಲಿತ ತೇಜಸ್ವಿ, ಮೈಸೂರಿನ ಒಂಟಿಕೊಪ್ಪಲು ಸರ್ಕಾರಿ ಶಾಲೆಗೆ ಸೇರಿದರು. ಆದರೆ, ಆ ಶಾಲೆಯ ವಾತಾವಾರಣಕ್ಕೆ ಬೆದರಿ, ಶಾಲೆಗೆ ಸೇರಿದ ದಿನವೇ ಸ್ಕೂಲಿನಿಂದ ಪರಾರಿಯಾಗಿ ಮನೆ ಸೇರಿದ್ದರಂತೆ. ಹೀಗಾಗಿ, ಸ್ವಲ್ಪ ದಿನ ನಂಜುಂಡಯ್ಯ ಎಂಬ ಮೇಷ್ಟ್ರನ್ನು ನೇಮಿಸಿ ಮನೆಯಲ್ಲಿಯೇ ಪಾಠ ಹೇಳಿಸಿದ್ದರಂತೆ.

ಆ  ಬಳಿಕ, ಮನೆಯ ಹತ್ತಿರವೇ ಇದ್ದ ಶಿಶುವಿಹಾರದಲ್ಲಿ ತೇಜಸ್ವಿ ಅವರ ಪ್ರಾಥಮಿಕ ಹಾಗೂ ಮಾಧ್ಯಮಿಕ ಶಿಕ್ಷಣ ಪಡೆದರು. ನಂತರ ಶಿವಮೊಗ್ಗದಲ್ಲಿ ವಿದ್ಯಾಭ್ಯಾಸ ಮುಂದುವರೆಸಿ, ಸಹ್ಯಾದ್ರಿ ಕಾಲೇಜಿನಲ್ಲಿ ಲೋಯರ್ ಸೆಕೆಂಡರಿ ಮುಗಿಸಿದರು. ಆ ಸಂದರ್ಭದಲ್ಲೇ ಅವರಿಗೆ ಕಡಿದಾಳ್ ಶಾಮಣ್ಣ, ಕೋಣಂದೂರು ಲಿಂಗಪ್ಪರಂಥ ಗೆಳೆಯರು ಸಿಕ್ಕಿದ್ದು. ಆಕಾಶವಾಣಿಯ ಹಾಡುಗಾರ್ತಿಯಾಗಿ ಹೆಸರಾದ ಶಾಂತಾ ಜಯತೀರ್ಥ ಮತ್ತು ಐ.ಎ.ಎಸ್ ಅಧಿಕಾರಿಯಾಗಿದ್ದ ಕೊಡಗು ಮೂಲದ ಮುತ್ತಣ್ಣ ಅವರು ಕೂಡ ತೇಜಸ್ವಿ ಅವರ ಸಹಪಾಠಿಗಳಾಗಿದ್ದರು.

ಆ ಬಳಿಕ, ಮೈಸೂರಿನ ಯುವರಾಜ ಕಾಲೇಜಿನಲ್ಲಿ ಬಿ.ಎ ಆನರ್ಸ್ ಪದವಿ ಪಡೆದ ತೇಜಸ್ವಿ, ಮೈಸೂರು ವಿ.ವಿಯಿಂದ ಕನ್ನಡ ಸಾಹಿತ್ಯದಲ್ಲಿ ಎಂ.ಎ ಪದವಿ ಪಡೆದರು. ಕುವೆಂಪು ಅವರ ಶಿಷ್ಯರೂ ಮತ್ತು ಆತ್ಮೀಯರೂ ಆದ ಡಾ.ಪ್ರಭುಶಂಕರ ಮತ್ತು ಡಾ.ಜಿ.ಎಸ್.ಶಿವರುದ್ರಪ್ಪನವರು ತೇಜಸ್ವಿ ಅವರ ಗುರುಗಳಾಗಿದ್ದರು.

ತಮ್ಮ ಶಾಲಾ ಕಾಲೇಜು ಶಿಕ್ಷಣದ ಪರೀಕ್ಷೆಗಳಲ್ಲಿ ಸಾಕಷ್ಟು ಬಾರಿ ಫೇಲ್ ಆಗಿದ್ದ ತೇಜಸ್ವಿ, ಎಂದಿಗೂ ಬ್ರಿಲಿಯಂಟ್ ಎಂದು ಕರೆಯಬಹುದಾದ ವಿದ್ಯಾರ್ಥಿಯಾಗಿರಲಿಲ್ಲ. ಅದರಲ್ಲೂ, ಗಣಿತ ಮತ್ತು ಇಂಗ್ಲಿಷ್ ಪರೀಕ್ಷೆಗಳನ್ನು ಪಾಸು ಮಾಡಿಕೊಳ್ಳಲು ಅವರು ಪಟ್ಟಿರುವ ಕಷ್ಟ ಅಷ್ಟಿಷ್ಟಲ್ಲ. ತೇಜಸ್ವಿ ಅವರಿಗೆ ಇಂಗ್ಲಿಷ್ ಕಲಿಸಲು ತಂದೆ ಕುವೆಂಪು ಅವರೇ ಸಾಕಷ್ಟು ತಲೆಕೆಡಿಸಿಕೊಂಡರೂ ಹೆಚ್ಚಿನ ಪ್ರಯೋಜನ ಆಗಲಿಲ್ಲವಂತೆ. ಆದರೆ, ತಾವು ಬೆಳೆದಂತೆ, ಓದುತ್ತಾ, ಬರೆಯುತ್ತಾ ಹೋದಂತೆ ಇಂಗ್ಲಿಷ್ ಭಾಷೆಯನ್ನು ಚೆನ್ನಾಗಿ ಅರಗಿಸಿಕೊಂಡ ತೇಜಸ್ವಿ, ಸಾಕಷ್ಟು ಇಂಗ್ಲಿಷ್ ಕೃತಿಗಳನ್ನು ಸಮರ್ಥವಾಗಿ ಕನ್ನಡಕ್ಕೆ ತಂದು ಸೈ ಅನ್ನಿಸಿಕೊಂಡಿದ್ದು ಅವರ ಓದುಗರೆಲ್ಲರೂ ತಿಳಿದಿರುವ ಸತ್ಯ.

ತೇಜಸ್ವಿ ಮನೋಭಿಲಾಷೆ

ಕುವೆಂಪು ಅವರ ಬರಹಗಳಲ್ಲಿನ ಪ್ರಕೃತಿ ಪ್ರೇಮಕ್ಕಾಗಿ ಅವರನ್ನು ಕನ್ನಡದ ‘Wordsworth’ ಎಂದು ಕರೆಯಲಾಗುತ್ತದೆ. ತಮ್ಮ ಬಾಲ್ಯದ ದಿನಗಳಲ್ಲಿ ಪಡೆದ ಮಲೆನಾಡಿನ ಅನುಭವಗಳು ಮತ್ತು ಕಥೆಗಳನ್ನು ಕುವೆಂಪು ಅವರ ಬಾಯಿಂದ ಕೇಳಿದ ತೇಜಸ್ವಿಗೆ, ನಾಡಿಗಿಂತಲೂ ಕಾಡೇ ಹೆಚ್ಚು ಪ್ರಿಯವಾಗಿ, ಆಸಕ್ತಿದಾಯಕವಾಗಿ,  ಕುತೂಹಲಕಾರಿಯಾಗಿ ಕಾಣಿಸಿತ್ತು. ತಂದೆಯ ಮಾತುಗಳನ್ನು ಕೇಳುತ್ತಿದ್ದ ತೇಜಸ್ವಿಗೆ, “ನಮ್ಮ ಅಪ್ಪ ಇಂಥ ರೋಮಾಂಚಕ ಜಗತ್ತನ್ನು ಬಿಟ್ಟು ಮೈಸೂರಿಗೆ ಏಕಾದರೂ ಬಂದರೋ” ಅನ್ನಿಸುತ್ತಿತ್ತಂತೆ. ಬಾಲಕನಾಗಿದ್ದಾಗಿನಿಂದಲೂ ಸ್ವತಂತ್ರ ಚಿಂತನೆಗಳನ್ನು ಬೆಳೆಸಿಕೊಂಡಿದ್ದ ತೇಜಸ್ವಿಯವರಲ್ಲಿ ಯಾರದೇ ಮರ್ಜಿಗೊಳಪಟ್ಟು ಜೀವನ ನಡೆಸುವ ಇರಾದೆ ಇರಲಿಲ್ಲ. ಹೀಗಾಗಿ, ವಿದ್ಯಾಭ್ಯಾಸ ಮುಗಿದ ಬಳಿಕ ಮೈಸೂರಿನಲ್ಲಿ ಒಂದು ಪ್ರಿಂಟಿಂಗ್ ಪ್ರೆಸ್ ಆರಂಭಿಸಿದರು, ಆದರೆ ಅದು ಯಶಸ್ವಿಯಾಗಲಿಲ್ಲ. ಅಷ್ಟು ಹೊತ್ತಿಗೆ ನಗರದ ಬದುಕು ಸಾಕು ಎಂದು ನಿರ್ಧರಿಸಿದ್ದ ತೇಜಸ್ವಿ ಹಳ್ಳಿಯಲ್ಲಿ ನೆಲೆಸಿ ಕೃಷಿಕನಾಗಲು ಮುಂದಾದರು.

ತೇಜಸ್ವಿ ಮತ್ತು ರಾಜೇಶ್ವರಿ

ಪೂರ್ಣಚಂದ್ರ ತೇಜಸ್ವಿ ಅವರು ಮೈಸೂರಿನಲ್ಲಿ ಬಿ.ಎ ಓದುತ್ತಿದ್ದಾಗ ಅದೇ ಕಾಲೇಜಿನಲ್ಲಿ ಬೆಂಗಳೂರು ಮೂಲದ ರಾಜೇಶ್ವರಿ ಅವರೂ ವಿದ್ಯಾರ್ಥಿಯಾಗಿದ್ದರು. ಗೆಳೆಯರ ಮೂಲಕ ಪರಿಚಯವಾದ ತೇಜಸ್ವಿ ಮತ್ತು ರಾಜೇಶ್ವರಿ ನಡುವೆ ಸ್ನೇಹ ಬೆಳೆಯಿತು. ಇಬ್ಬರೂ ಎಂ.ಎ ಮಾಡಲು ಮೈಸೂರು ವಿವಿಗೆ ಸೇರಿದ ಮೇಲೆ ಈ ಸ್ನೇಹ ಮತ್ತಷ್ಟು ಗಾಢವಾಯಿತು. ರಾಜೇಶ್ವರಿ ಅವರು “ತತ್ವಶಾಸ್ತ್ರ”ದಲ್ಲಿ ಮತ್ತು ತೇಜಸ್ವಿ “ಕನ್ನಡ”ದಲ್ಲಿ ಎಂ.ಎ ಮುಗಿಸಿದರು. ಅಷ್ಟುಹೊತ್ತಿಗೆ ಇಬ್ಬರ ಮನಸ್ಸಿನಲ್ಲೂ ಪ್ರೀತಿ ಬೆಳೆದು ಮದುವೆ ಮಾಡಿಕೊಳ್ಳುವ ನಿರ್ಧಾರಕ್ಕೆ ಬಂದರು.

ಆ ಸಂದರ್ಭದಲ್ಲಿ ಮೈಸೂರಿನಿಂದ ಬೆಂಗಳೂರಿಗೆ ಹಿಂದಿರುಗಿದ ರಾಜೇಶ್ವರಿ ಮತ್ತು ತೇಜಸ್ವಿ ಅವರು ಪತ್ರಗಳ ಮೂಲಕವೇ ಮಾತನಾಡಿಕೊಳ್ಳುತ್ತಿದ್ದರು. ರಾಜೇಶ್ವರಿ ಅವರನ್ನು ಪ್ರೀತಿಯಿಂದ ‘ರಾಜೇಶ್’ ಎಂದು ಕರೆಯುತ್ತಿದ್ದ ತೇಜಸ್ವಿ, ತಾವು ಬರೆಯುತ್ತಿದ್ದ ಪತ್ರಗಳಲ್ಲಿ ಪ್ರೇಮ-ಕಾಮ, ಹುಟ್ಟು-ಸಾವು, ಅಧ್ಯಾತ್ಮ ಇತ್ಯಾದಿಗಳ ಬಗ್ಗೆ ತಮ್ಮ ನಿಲುವುಗಳನ್ನು ವ್ಯಕ್ತಪಡಿಸುತ್ತಿದ್ದರು.

ಅವರ ಒಂದು ಪತ್ರದಲ್ಲಿ,  “ಅಪ್ಪ ಅಮ್ಮಂದಿರಿಗೆಲ್ಲ ತಿಳಿಸಿ ಬಂಧು ಭಾಂಧವರನ್ನೆಲ್ಲ ಸಂತೋಷ ಸಾಗರದಲ್ಲಿ ಮುಳುಗಿಸಿ ಮದುವೆಯಾಗಬೇಕು, ಇತ್ಯಾದಿ ಭ್ರಮೆಯಿಂದ ನಾನು ಈಗ ಪಾರಾಗಿದ್ದೇನೆ. ನನ್ನ ಮದುವೆ ನನ್ನದೇ ಹೊರತು ಇನ್ಯಾರದ್ದೂ ಅಲ್ಲ”  ಎಂದು ತೇಜಸ್ವಿ ಬರೆಯುತ್ತಾರೆ. ಆನಂತರ,  “ನಾನು ಪ್ರೇಮಿಸಿದವಳನ್ನೇ ಮದುವೆಯಾಗುತ್ತೇನೆ ಜಾತಿ ಪಂಥಗಳನ್ನೆಲ್ಲಾ ತೊರೆದು ಎನ್ನುವುದು, ಒಂದು ಚೇತನದ ವ್ಯಕ್ತಿ ನಿಷ್ಠೆಯ ಮೊದಲ ಕುರುಹು”  ಅನ್ನುತ್ತಾರೆ.

6 ವರ್ಷಗಳ ಪ್ರೇಮದ ಬಳಿಕ 1966ರಲ್ಲಿ ಚಿಕ್ಕಮಗಳೂರಿನ ಗೋಣಿಬೀಡು ಬಳಿಯ ಚಿತ್ರಕೂಟ ತೋಟದಲ್ಲಿ, ಕುವೆಂಪು ಅವರೇ ರೂಪಿಸಿ ನೆರವೇರಿಸಿದ ‘ಮಂತ್ರ ಮಾಂಗಲ್ಯ’ ದ ರೀತಿಯಲ್ಲಿ ತೇಜಸ್ವಿ ಮತ್ತು ರಾಜೇಶ್ವರಿ ಅವರ ಸರಳ ವಿವಾಹ ನಡೆಯಿತು. ಈ ಮೂಲಕ ತೇಜಸ್ವಿ, ತಮ್ಮ ತಂದೆಯವರ ಚಿಂತನೆಗಳನ್ನು ಸಾಕಾರಗೊಳಿಸಿದ್ದರು. ತೇಜಸ್ವಿಯವರೂ ಸೇರಿದಂತೆ, ಕುವೆಂಪು ಅವರ ನಾಲ್ಕೂ ಜನ ಮಕ್ಕಳು ‘ಮಂತ್ರ ಮಾಂಗಲ್ಯ’ದ ಮೂಲಕವೇ ವೈವಾಹಿಕ ಜೀವನಕ್ಕೆ ಕಾಲಿಟ್ಟರು ಅನ್ನುವುದನ್ನು ಇಲ್ಲಿ ಉಲ್ಲೇಖಿಸಬಹುದು.

ತೇಜಸ್ವಿ ಮತ್ತು ಬರವಣಿಗೆ

ಸುಮಾರು ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಸಾಹಿತ್ಯ ಕೃಷಿ ನಡೆಸಿದ ತೇಜಸ್ವಿ ಅವರು ಅನೇಕ ಮಹತ್ವಪೂರ್ಣ ಕೃತಿಗಳನ್ನು ರಚಿಸುವ ಮೂಲಕ ಕನ್ನಡ ಸಾಹಿತ್ಯಕ್ಕೆ ವಿಶಿಷ್ಟ ಕೊಡುಗೆ ನೀಡಿದ್ದಾರೆ. ಕತೆ, ಕವಿತೆ, ಕಾದಂಬರಿ, ನಾಟಕ, ವಿಜ್ಞಾನ ಅನುವಾದ ಇತ್ಯಾದಿ ಹಲವು ಪ್ರಕಾರಗಳಲ್ಲಿ ತಮ್ಮ ಚಿಂತನೆಗಳನ್ನು ಅನಾವರಣಗೊಳಿಸಿದ್ದಾರೆ.

ತೇಜಸ್ವಿ ಅವರು ‘ಪೂಚಂತೇ’ಎಂಬ ಕಾವ್ಯನಾಮದಿಂದ ಹೆಸರಾಗಿದ್ದಾರೆ. ಆದರೆ, ‘ನಳಿನಿ ದೇಶಪಾಂಡೆ’ ಎಂಬ ಗುಪ್ತನಾಮದಲ್ಲಿ ಬರೆಯುತ್ತಿದ್ದದ್ದೂ ಇದೆ. ಪಿ.ಲಂಕೇಶ್ ಸಂಪಾದಿಸಿದ್ದ ‘ಅಕ್ಷರ ಹೊಸ ಕಾವ್ಯ’ ಪುಸ್ತಕದಲ್ಲಿ ನಳಿನಿ ದೇಶಪಾಂಡೆ ಹೆಸರಿನಲ್ಲಿ ಬರೆದಿರುವ ಎರಡು ಕವಿತೆಗಳು ಪ್ರಕಟವಾಗಿವೆ. ತೇಜಸ್ವಿ ಅವರು ಕತೆ ಇತ್ಯಾದಿಗಳನ್ನು ಬರೆಯಲು ಆರಂಭಿಸಿದ ಮೊದಮೊದಲ ದಿನಗಳಲ್ಲಿ, “ ಏ ಇದು ತೇಜಸ್ವಿ ಬರೆದಿರೋದಲ್ಲ, ಅವರ ತಂದೆ ಬರೆದಿದ್ದಿರಬೇಕು”  ಅನ್ನುವ ಕುಹಕದ ಮಾತುಗಳು ಕೇಳಿ ಬಂದಿದ್ದವಂತೆ. ಆದರೆ, ಇಂಥ ಮಾತುಗಳನ್ನು ಬಹು ಬೇಗನೆ ಸುಳ್ಳು ಮಾಡಿದ ತೇಜಸ್ವಿ, ಬರವಣಿಗೆಯ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದರು.

ತೇಜಸ್ವಿ ಸಾಹಿತ್ಯ ವೈವಿಧ್ಯತೆ

ಕಥಾ ಸಂಕಲನಗಳು

ತೇಜಸ್ವಿ ಅವರು ಸಾಕಷ್ಟು ಕತೆಗಳನ್ನು ಬರೆದಿದ್ದು, ಅವುಗಳು ನಾಲ್ಕು ಸಂಕಲನಗಳಾಗಿ ಪ್ರಕಟಗೊಂಡಿವೆ. 1957ರಲ್ಲಿ ಪ್ರಜಾವಾಣಿ ಪತ್ರಿಕೆಯ ದೀಪಾವಳಿ ವಿಶೇಷಾಂಕಕ್ಕಾಗಿ ಬರೆದಿದ್ದ ‘ಲಿಂಗ ಬಂದ’ ಅನ್ನುವ ಕತೆ, ತೇಜಸ್ವಿ ಅವರು ಬರೆದ ಮೊದಲ ಕತೆ ಅನ್ನಲಾಗಿದೆ. ಈ ಕತೆಗೆ ಪ್ರಥಮ ಬಹುಮಾನ ಮತ್ತು ಅದರ ಜೊತೆಯಲ್ಲೇ ಕಳಿಸಿದ್ದ ‘ಗುಡುಗು ಹೇಳಿದ್ದೇನು’ ಅನ್ನುವ ಕತೆಗೆ, ತೀರ್ಪುಗಾರರ ಮೆಚ್ಚುಗೆಯ ಪ್ರಶಸ್ತಿಯೂ ದೊರಕಿತ್ತು.

1962ರಲ್ಲಿ ಬಂದ ‘ಹುಲಿಯೂರಿನ ಸರಹದ್ದು’ ತೇಜಸ್ವಿಯವರ ಮೊದಲ ಕಥಾ ಸಂಕಲನ. ಇದರಲ್ಲಿ ‘ಲಿಂಗ ಬಂದ’ ಕತೆಯೂ ಸೇರಿದಂತೆ 6 ಕತೆಗಳಿವೆ. 1973ರಲ್ಲಿ ಪ್ರಕಟವಾದ ‘ಅಬಚೂರಿನ ಪೋಸ್ಟ್ ಆಫೀಸು’ ಕಥಾ ಸಂಕಲನದಲ್ಲಿ, ಅದೇ ಹೆಸರಿನ ಕತೆ ಸೇರಿದಂತೆ ‘ತಬರನ ಕತೆ’, ‘ಕುಬಿ ಮತ್ತು ಇಯಾಲ’, ‘ತುಕ್ಕೋಜಿ’ ಹಾಗೂ ‘ಅವನತಿ’ ಎಂಬ ಶೀರ್ಷಿಕೆಯ ಕತೆಗಳಿವೆ. ಇವುಗಳ ಪೈಕಿ ‘ಅಬಚೂರಿನ ಪೋಸ್ಟ್ ಆಫೀಸು(1973ರಲ್ಲಿ)’, ‘ತಬರನ ಕತೆ(1987)’, ‘ಕುಬಿ ಮತ್ತು ಇಯಾಲ(1992ರಲ್ಲಿ)’ ಸಿನೆಮಾಗಳಾಗಿ ರಾಜ್ಯ ಮತ್ತು ರಾಷ್ಟ್ರ ಪ್ರಶಸ್ತಿ ಗಳಿಸಿವೆ. 1991ರಲ್ಲಿ ಬಂದ ‘ಕಿರಗೂರಿನ ಗಯ್ಯಾಳಿಗಳು’ ಕಥಾ ಸಂಕಲನದಲ್ಲಿ ನಾಲ್ಕು ಕತೆಗಳಿದ್ದು, ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಗಳಿಸಿದೆ. ಹಿಂದಿ, ಇಂಗ್ಲಿಷ್, ಮರಾಠಿ, ಮಲೆಯಾಳಮ್ ಮತ್ತು ಕೊಡವ ಭಾಷೆಗೂ ಅನುವಾದವಾಗಿರುವ ‘ಕಿರಗೂರಿನ ಗಯ್ಯಾಳಿಗಳು’, 2016ರಲ್ಲಿ ಸಿನೆಮಾ ಆಗಿ ತೆರೆಕಂಡಿದೆ.

ಪಾಕ ಕ್ರಾಂತಿ ಮತ್ತು ಇತರ ಕತೆಗಳು”     

2008ರಲ್ಲಿ ಬಂದ ಪಾಕ ಕ್ರಾಂತಿ ಮತ್ತು ಇತರ ಕತೆಗಳು ಸಂಕಲನದಲ್ಲಿ ತೇಜಸ್ವಿ ಅವರ ದಿನ ನಿತ್ಯದ ಬದುಕಿನ ಸಣ್ಣಪುಟ್ಟ ಘಟನೆಗಳು ಕತೆಗಳ ರೂಪ ಪಡೆದುಕೊಂಡಿವೆ.

ಕವನ ಸಂಕಲನ

1962ರಲ್ಲಿ ಪ್ರಕಟವಾದ ‘ಸೋಮುವಿನ ಸ್ವಗತ ಲಹರಿ ಮತ್ತು ಇತರ ಕವನಗಳು’, ತೇಜಸ್ವಿ ಅವರ ಏಕೈಕ ಕವನ ಸಂಕಲನ. ಇಲ್ಲಿ ಸಿಟ್ಟು, ಹತಾಶೆ, ಅಸಹಾಯಕತೆ ಮನೋಭಾವಗಳು ಕಾವ್ಯದ ವಸ್ತುಗಳಾಗಿವೆ.

ನಾಟಕ

1964ರಲ್ಲಿ ಪ್ರಕಟವಾದ ‘ಯಮಳ ಪ್ರಶ್ನೆ’  ತೇಜಸ್ವಿ ಅವರು ರಚಿಸಿದ ಒಂದು ಅಸಂಗತ ನಾಟಕ. ಇಲ್ಲಿ ಅಸಂಗತ ಅಂದರೆ, ಅಸ್ತವ್ಯಸ್ತವಾಗಿರುವುದು ಅಥವ ಪಾತ್ರ ಮತ್ತು ಸನ್ನಿವೇಶಗಳು ಒಂದಕ್ಕೊಂದು ಸಂಬಂಧವಿಲ್ಲದ ರೀತಿಯಲ್ಲಿರುವುದು ಎಂದು ಅರ್ಥ.

ತೇಜಸ್ವಿ ಕಾದಂಬರಿಗಳು

ಕರ್ವಾಲೋ”     

1980ರಲ್ಲಿ ಪ್ರಕಟಗೊಂಡ “ಕರ್ವಾಲೋ”  ಕಾದಂಬರಿ ತೇಜಸ್ವಿ ಅವರಿಗೆ ದೊಡ್ಡ ಜನಪ್ರಿಯತೆ ತಂದುಕೊಟ್ಟಿತ್ತು. ಅಲ್ಲಿಂದಾಚೆಗಿನ 40 ವರ್ಷಗಳಲ್ಲಿ 48ಕ್ಕೂ ಹೆಚ್ಚು ಬಾರಿ ಮರು ಮುದ್ರಣವಾಗಿರುವ “ಕರ್ವಾಲೋ” ತಮಿಳು, ಮರಾಠಿ, ಮಲೆಯಾಳಂ, ಇಂಗ್ಲಿಷ್, ಜಪಾನಿ ಹಾಗೂ ಜರ್ಮನ್ ಭಾಷೆಗಳಿಗೆ ಅನುವಾದಗೊಂಡಿದೆ. ಜೀವವಿಕಾಸದ ದಾರಿಯಲ್ಲಿ ರೂಪಾಂತರ ಹೊಂದಿದ ಹಾರುವ ಓತಿಯ ಕುರಿತು ಕುತೂಹಲ ಹುಟ್ಟಿಸುವ ಸನ್ನಿವೇಶಗಳನ್ನು ಹಲವಾರು ಸ್ವಾರಸ್ಯಕರ ಪ್ರಸಂಗಗಳ ಮೂಲಕ ತೇಜಸ್ವಿ ಅವರು ಇಲ್ಲಿ ಕಟ್ಟಿಕೊಟ್ಟಿದ್ದಾರೆ.

1966ರಲ್ಲಿ ವಿವಾಹವಾದ ನಂತರ, ತೇಜಸ್ವಿ ಮತ್ತು ರಾಜೇಶ್ವರಿ ಅವರು ನೆಲೆಸಿದ್ದ “ಚಿತ್ರಕೂಟ” ತೋಟದ ಮನೆಯಲ್ಲಿ ಮೊದಲ 10 ವರ್ಷಗಳ ಕಾಲ ವಿದ್ಯುತ್ ಸಂಪರ್ಕವೇ ಇರಲಿಲ್ಲ. ಹೀಗಾಗಿ, ತೇಜಸ್ವಿ ಅವರ ಮೊದಲ ಕಾದಂಬರಿ “ಕರ್ವಾಲೋ” ಸಿಮೇಎಣ್ಣೆ ದೀಪದ ಬೆಳಕಲ್ಲೇ ಸೃಷ್ಟಿಯಾದ ಮಹತ್ ಕೃತಿ ಅನ್ನಬಹುದು.

ಚಿದಂಬರ ರಹಸ್ಯ” 

1985ರಲ್ಲಿ ಬಿಡುಗಡೆಯಾದ “ಚಿದಂಬರ ರಹಸ್ಯ”  ಕಾದಂಬರಿಯೂ ಸಾಕಷ್ಟು ಜನಪ್ರಿಯವಾಗಿತ್ತು. ಭಾರತದ ಹಲವು ಭಾಷೆಗಳಿಗೆ ಅನುವಾದಗೊಂಡಿರುವ ಈ ಕಾದಂಬರಿ, ತೇಜಸ್ವಿ ಅವರಿಗೆ ರಾಜ್ಯ ಮತ್ತು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳನ್ನು ತಂದು ಕೊಟ್ಟಿದೆ.

ಜುಗಾರಿ ಕ್ರಾಸ್

ಆ ಬಳಿಕ 1994ರಲ್ಲಿ ಬಂದ “ಜುಗಾರಿ ಕ್ರಾಸ್” ಕಾದಂಬರಿ, ಇವತ್ತಿನ ಸನ್ನಿವೇಶದಲ್ಲಿ, ಅರಣ್ಯ ಅನ್ನುವುದು ಯಾವ ರೀತಿಯಲ್ಲಿ ದುಡ್ಡು ಮಾಡುವ ದಂಧೆಯ ಕೇಂದ್ರವಾಗಿದೆ, ಇಲ್ಲಿ ರಾಜಕೀಯ ಶಕ್ತಿಗಳ ಪಾತ್ರವೇನು ಅನ್ನುವುದನ್ನು ನಿರೂಪಿಸುತ್ತದೆ.

ಮಾಯಾಲೋಕ

ಆ ಬಳಿಕ 2006ರಲ್ಲಿ ಪ್ರಕಟವಾದ “ಮಾಯಾಲೋಕ” ತೇಜಸ್ವಿ ಅವರ ಜೀವಿತ ಕಾಲದಲ್ಲಿ ಪ್ರಕಟಗೊಂಡ ಕೊನೆಯ ಕಾದಂಬರಿ. ಈ ಕೃತಿಯೂ ಕೂಡ ನಿಂತ ನೀರಿನಂತಿದ್ದ ಕನ್ನಡದ ಕಥನದ ರೀತಿ ನೀತಿಗಳಿಗೆ ಹೊಸ ದಾರಿಯನ್ನು ಸೂಚಿಸಿದ ಕೃತಿಯೆಂದು ಪ್ರಶಂಸೆ ಪಡೆದಿದೆ. ಈ ಕಾದಂಬರಿಯ ಮತ್ತಷ್ಟು ಸಂಪುಟಗಳನ್ನು ಬರೆಯಲು ತೇಜಸ್ವಿ ಅವರು ಉದ್ದೇಶಿಸಿದ್ದರೂ ಕೂಡ ಅದು ಕೈಗೂಡಲಿಲ್ಲ.

ಕಾಡು ಮತ್ತು ಕ್ರೌರ್ಯ

ಇವೆಲ್ಲ ಕಾದಂಬರಿಗಳಿಗಿಂತಲೂ ಮೊದಲು 1962ರಲ್ಲಿ ತಮ್ಮ 24ರ ವಯಸ್ಸಿನ ಹರೆಯದಲ್ಲೇ “ಕಾಡು ಮತ್ತು ಕ್ರೌರ್ಯ” ಎಂಬ ಕಾದಂಬರಿಯನ್ನು ಬರೆದಿದ್ದ ತೇಜಸ್ವಿ, ಅದನ್ನು ಹಾಗೇ ಇರಿಸಿಕೊಂಡಿದ್ದರು. ತಮ್ಮ ಬದುಕಿನ ಕೊನೆಯ ದಿನಗಳಲ್ಲಿ ಇದನ್ನು ಮತ್ತೆ ತಿದ್ದಿ ಪ್ರಕಟಿಸುವ ಇರಾದೆ ಅವರಿಗಿತ್ತು. ಆದರೆ, ತನ್ನ ಜಾಯಮಾನಕ್ಕೆ ತಕ್ಕಂತೆ ಅನಿರೀಕ್ಷಿತವಾಗಿ ಬಂದ ಜವರಾಯನ ಕರೆಗೆ ಓಗೊಟ್ಟ ತೇಜಸ್ವಿ, ಈ ಕೆಲಸವನ್ನು ಮಾಡಲಾಗಲಿಲ್ಲ. ತೇಜಸ್ವಿ ನಿಧನರಾದ 6 ವರ್ಷಗಳ ಬಳಿಕ 2013ರಲ್ಲಿ ಈ ಕಾದಂಬರಿ ಪ್ರಕಟವಾಯಿತು.

ಕಿರು ಕಾದಂಬರಿಗಳು

1966ರಲ್ಲಿ ಪ್ರಕಟವಾದ “ಸ್ವರೂಪ” ಮತ್ತು 1973ರಲ್ಲಿ ಮುದ್ರಣವಾದ “ನಿಗೂಢ ಮನುಷ್ಯರು”  ತೇಜಸ್ವಿ ರಚಿಸಿದ ಎರಡು ಕಿರು ಕಾದಂಬರಿಗಳು. ಮನುಷ್ಯರ ನಡುವಿನ ಸಂಬಂಧಗಳ ನಿಗೂಢತೆ ಮತ್ತು ಸಂಕೀರ್ಣತೆಯನ್ನು ಹೇಳುವ ನಿಗೂಢ ಮನುಷ್ಯರು, ಇಂಗ್ಲಿಷ್ ಭಾಷೆಗೂ ಅನುವಾದಗೊಂಡಿದೆ.

ಪರಿಸರ ಮತ್ತು ವೈಜ್ಞಾನಿಕ ಕತೆಗಳು

ಪರಿಸರ ಮತ್ತು ವಿಜ್ಞಾನವನ್ನು ಕಥಾ ವಸ್ತುವಾಗಿ ಒಳಗೊಂಡ 8 ಕಥಾ ಸಂಕಲನಗಳನ್ನು ತೇಜಸ್ವಿ ಅವರು ರಚಿಸಿದ್ದಾರೆ.1991ರಲ್ಲಿ ಪ್ರಕಟವಾದ ಪರಿಸರದ ಕಥೆ ಸಂಕಲನದಲ್ಲಿ ಕಿವಿಯೊಡನೆ ಒಂದು ದಿನ, ಎಂಗ್ಟನ ಪುಂಗಿ, ಸುಸ್ಮಿತಾ ಮತ್ತು ಹಕ್ಕಿ ಮರಿ ಇತ್ಯಾದಿ ಬರಹಗಳಿವೆ.

ನಡೆಯುವ ಕಡ್ಡಿ, ಹಾರುವ ಎಲೆ (ಹುಳುಗಳ ವಿಸ್ಮಯ ಕೋಶ-1)”  

ಇದು ತೇಜಸ್ವಿ ಮತ್ತು ಕೀಟ ತಜ್ಞ ಡಾ.ವಿ.ವಿ. ಬೆಳವಾಡಿ ಅವರು ಸೇರಿ ರಚಿಸಿರುವ ಪುಸ್ತಕ. ನಮ್ಮ ಪರಿಸರದಲ್ಲಿ ಕಾಣ ಸಿಗುವ ಚಿಟ್ಟೆ, ಜೇಡ, ಮಿಡತೆ, ಮಿಂಚುಹುಳು ಸೇರಿದಂತೆ ಹಲವಾರು ಕೀಟಗಳ ಬಗ್ಗೆ, ಅವುಗಳ ಅಂಗರಚನೆಯ ವಿಶೇಷಗಳ ಬಗ್ಗೆ ಸ್ವಾರಸ್ಯಕರ ವಿವವರಣೆಗಳನ್ನು ಈ ಪುಸ್ತಕದಲ್ಲಿ ನೀಡಿದ್ದಾರೆ.

ವಿಸ್ಮಯ(1993-94)-ಪರಿಸರದ ವಿಶ್ವರೂಪಮಾಲಿಕೆ

ಪ್ರದೀಪ್ ಕೆಂಜಿಗೆ ಅವರೊಂದಿಗೆ ಸೇರಿ, “ವಿಸ್ಮಯ ಭಾಗ 1, 2 ಮತ್ತು 3” ರಚಿಸಿರುವ ತೇಜಸ್ವಿಯವರು ವೈಜ್ಞಾನಿಕ ಪರಿಕಲ್ಪನೆಗಳನ್ನು ಸಾಮಾನ್ಯ ಜನರಿಗೂ ಅರ್ಥವಾಗುವಂತೆ ವಿವರಿಸಿದ್ದಾರೆ. 

1993ರಲ್ಲಿ ಬಂದ “ಏರೋಪ್ಲೇನ್ ಚಿಟ್ಟೆ ಮತ್ತು ಇತರ ಕಥೆಗಳು” ಸಂಗ್ರಹದಲ್ಲಿ, ಒಂಟೆ ಹುಳು, ಏರೋಪ್ಲೇನ್ ಚಿಟ್ಟೆ, ಚೀಂಕ್ರ ಮೇಸ್ತ್ರಿ ಮತ್ತು ಅರಿಸ್ಟಾಟಲ್, ಹಲ್ಲಿಯ ಪ್ರಾಣ ಬಾಲದಲ್ಲಿ, ನಾವು ಕೊಂದ ಹಕ್ಕಿ ಇತ್ಯಾದಿ ಕತೆಗಳಿವೆ.

ಅನುವಾದ ಕೃತಿಗಳು

1993ರಲ್ಲೇ ಪ್ರಕಟಗೊಂಡ ಕಾಡಿನ ಕಥೆಗಳು ಭಾಗ 1 ಮತ್ತು ಭಾಗ 2. ಇವೆರಡೂ ಪುಸ್ತಕಗಳಲ್ಲಿ ಭಾರತೀಯ ಸಂಜಾತ ಬ್ರಿಟಿಷ್ ಬರಹಗಾರ ‘ಕೆನೆತ್ ಆಂಡರ್ ಸನ್’ (Kenneth Anderson) ಅವರ ಕಾಡಿನ ಅನುಭವಗಳ ಸಂಗ್ರಹದ ರೂಪಾಂತರವಿದೆ. ಭಾಗ-1 ರಲ್ಲಿ ಬೆಳ್ಳಂದೂರಿನ ನರಭಕ್ಷಕ, ಷೇರ್ ಖಾನ್, ಎರಡನೇ ಭಾಗದಲ್ಲಿ ಪೆದ್ದಚೆರುವಿನ ರಾಕ್ಷಸ, ಲಕ್ಕವಳ್ಳಿಯ ಹೆಬ್ಬುಲಿ, ತಾಳವಾಡಿಯ ಮೂಕ ರಾಕ್ಷಸ ಇತ್ಯಾದಿ ಕತೆಗಳಿವೆ.

“ಕಾಡಿನ ಕಥೆಗಳು ಭಾಗ-3 (1994) ಮತ್ತು ಭಾಗ-4 (1998)” ರಲ್ಲಿ ಜಾಲಹಳ್ಳಿಯ ಕುರ್ಕ, ಮಂಚಹಳ್ಳಿಯ ಮುಗ್ಧರು, ಮುನಿಶಾಮಿ ಮತ್ತು ಮಾಗಡಿ ಚಿರತೆ, ಪುಂಡು ಕರಡಿ, ರಾಂಪುರದ ಒಕ್ಕಣ್ಣ, ಇತ್ಯಾದಿ ಕತೆಗಳಿವೆ.

ರುದ್ರ ಪ್ರಯಾಗದ ಭಯಾನಕ ನರಭಕ್ಷಕ

1995ರಲ್ಲಿ ಪ್ರಕಟವಾದ “ರುದ್ರಪ್ರಯಾಗದ ಭಯಾನಕ ನರಭಕ್ಷಕ” ಪುಸ್ತಕ, ವನ್ಯಜೀವಿ ಪ್ರೇಮಿ ‘ಜಿಮ್ ಕಾರ್ಬೆಟ್’ ಬರೆದಿರುವ “Man Eating Leopard of Rudraprayag ಪುಸ್ತಕದ ಕನ್ನಡ ರೂಪಾಂತರ.

ಪ್ಯಾಪಿಲಾನ್ 1, 2

1969ರಲ್ಲಿ ಫ್ರಾನ್ಸ್ ದೇಶದ ಬರಹಗಾರ  Henri Charrière ಬರೆದ ಆತ್ಮಕಥಾ ಸ್ವರೂಪದ ಪ್ರಸಿದ್ಧ ಕಾದಂಬರಿ “ಪ್ಯಾಪಿಲಾನ್” ಕೃತಿಯನ್ನು ತೇಜಸ್ವಿ ಅವರು 2004ರಲ್ಲಿ ಪ್ರದೀಪ ಕೆಂಜಿಗೆ ಅವರೊಂದಿಗೆ ಸೇರಿ ಕನ್ನಡಕ್ಕೆ ತಂದಿದ್ದಾರೆ.     

ವ್ಯಕ್ತಿ ವಿಶಿಷ್ಟ ಸಿದ್ಧಾಂತ

ತೇಜಸ್ವಿ ಅವರು ‘ಅಲಕ್ಷ್ಯ ಮತ್ತು ಸಂಸ್ಕೃತಿ ಸ್ಥಿತಿ’, ‘ವ್ಯಕ್ತಿ ವಿಶಿಷ್ಟ ಸಿದ್ಧಾಂತ’, ‘ವ್ಯಕ್ತಿ ವಿಶಿಷ್ಟವಾದಿ; ವಿವಾಹ; ಪ್ರೇಮ’ ಎಂಬ ಮೂರು ಶೀರ್ಷಿಕೆಗಳಲ್ಲಿ ‘ವ್ಯಕ್ತಿ ವಿಶಿಷ್ಟ ಸಿದ್ಧಾಂತ’ ಎಂಬ ವೈಚಾರಿಕ ಪ್ರಬಂಧಗಳು ಕೃತಿಯನ್ನು 1964ರಲ್ಲಿ ಪ್ರಕಟಿಸಿದ್ದರು.

ರೈತರು ಎಷ್ಟೇ ಬಡವರಾದರೂ ಆತ್ಮಗೌರವ ಉಳ್ಳವರು ಅನ್ನುತ್ತಿದ್ದ ತೇಜಸ್ವಿ, ಸಹಜ ಕೃಷಿ ಹರಿಕಾರ ಮಸನೊಬು ಪುಕುವೋಕರನ್ನು ಪರಿಚಯಿಸುವ “ಸಹಜ ಕೃಷಿ” (1991) ಪುಸ್ತಕ ಬರೆದಿದ್ದಾರೆ. “ಮಾಯೆಯ ಮುಖಗಳು-ಚಿತ್ರ ಲೇಖನ”(2010)ರಲ್ಲಿ ಪ್ರಕಟವಾಗಿವೆ. ಇವಲ್ಲದೆ, ತೇಜಸ್ವಿ ನಿಧನಾನಂತರ  “ವಿಮರ್ಶೆಯ ವಿಮರ್ಶೆ(2009)”, “ಹೊಸ ವಿಚಾರಗಳು(2012)” ಎಂಬ ಪುಸ್ತಕಗಳು ಪ್ರಕಟವಾಗಿವೆ.

ಪ್ರವಾಸ ಕಥನ

“ಅಲೆಮಾರಿಯ ಅಂಡಮಾನ್ ಹಾಗೂ ಮಹಾನದಿ ನೈಲ್(1990)”, ತೇಜಸ್ವಿ ಅವರು ರಚಿಸಿರುವ ವಿಶಿಷ್ಟ ನಿರೂಪಣೆಯ ಪ್ರವಾಸ ಕಥನ.

ಲೋಹಿಯಾಕೆಂಪು ಪುಸ್ತಕ

ರಾಮ್ ಮನೋಹರ್ ಲೋಹಿಯ ಅವರ ಕೆಲವು ಆಯ್ದ ಬರಹಗಳನ್ನು “ಲೋಹಿಯಾ-ಕೆಂಪು ಪುಸ್ತಕ” ಎಂಬ ಶೀರ್ಷಿಕೆಯಡಿ ಪ್ರೊಫೆಸರ್ ಎಂ.ಡಿ.ನಂಜುಂಡಸ್ವಾಮಿಯವರ ಜೊತೆಗೂಡಿ ಕನ್ನಡಕ್ಕೆ ತಂದಿದ್ದಾರೆ.

ಮಿಸ್ಸಿಂಗ್ ಲಿಂಕ್ಸ್ ಮತ್ತುಫ್ಲೈಯಿಂಗ್ ಸಾಸರ್ಸ್

1992ರಲ್ಲಿ ಬಂದ “ಮಿಸ್ಸಿಂಗ್ ಲಿಂಕ್ಸ್”  ಹಾಗೂ 1993ರಲ್ಲಿ ಪ್ರಕಟವಾದ “ಫ್ಲೈಯಿಂಗ್ ಸಾಸರ್ಸ್” ಭಾಗ 1 ಮತ್ತು 2 ಕೃತಿಗಳು ಮಾನವ ವಿಕಾಸ ಮತ್ತು ಹಾರುವ ತಟ್ಟೆಗಳ ರೋಚಕ ಸುದ್ದಿಯನ್ನು ವೈಜ್ಞಾನಿಕವಾಗಿ ವಿಶ್ಲೇಷಿಸುತ್ತವೆ.

ಹಕ್ಕಿಗಳ ಬಗ್ಗೆ ತೇಜಸ್ವಿ ಪುಸ್ತಕಗಳು

ಸುಪ್ರಸಿದ್ಧ ಪಕ್ಷಿ ತಜ್ಞ ಸಲೀಮ್ ಅಲಿ ಅವರ ಬಗ್ಗೆ ಅಪಾರ ಗೌರವ ಹೊಂದಿದ್ದ ತೇಜಸ್ವಿ ಅವರು 1993ರಲ್ಲಿ ಕೃಷಿ ವಿಜ್ಞಾನಿ ಚಕ್ರವರ್ತಿ ಅವರೊಂದಿಗೆ ಸೇರಿ ರಚಿಸಿರುವ ದಕ್ಷಿಣ ಭಾರತದ ಹಕ್ಕಿಗಳು ಪುಸ್ತಕ ಕನ್ನಡದ ಓದುಗರ ಪಕ್ಷಿ ವೀಕ್ಷಣೆ ಕೈಪಿಡಿಯಾಗಿದೆ. ಆ ಬಳಿಕ 1994ರಲ್ಲಿ “ಮಿಂಚುಳ್ಳಿ-ಕನ್ನಡ ನಾಡಿನ ಹಕ್ಕಿಗಳು ಭಾಗ-1”, “ಹೆಜ್ಜೆ ಮೂಡದ ಹಾದಿ-ಕನ್ನಡ ನಾಡಿನ ಹಕ್ಕಿಗಳು-ಭಾಗ 2(1996) ”, “ಹಕ್ಕಿ ಪುಕ್ಕ(1997) ” ಪುಸ್ತಕಗಳು ಹಲವಾರು ಹಕ್ಕಿಗಳ ಪರಿಚಯ ಮಾಡಿಕೊಡುತ್ತವೆ.

ಮಿಲೇನಿಯಮ್ ಸರಣಿಯ 16 ಪುಸ್ತಕಗಳು

ಸಾವಿರಾರು ವರ್ಷಗಳ ಹಿಂದೆ ನಡೆದಿರಬಹುದಾದ ಸಂಗತಿಗಳು, ಪ್ರಾಚೀನ ನಾಗರೀಕತೆಗಳು, ಅವಸಾನದ ಅಂಚಿಗೆ ಬಂದು ನಿಂತಿರುವ ಬುಡಕಟ್ಟು ಜನಾಂಗ, ವಿಸ್ಮಯಕಾರಿ ಸಮುದ್ರಯಾನಗಳು, ಅನ್ವೇಷಣೆಗಳು, ಪವಾಡ ಸದೃಶ ಘಟನೆಗಳು, ಅಗ್ನಿ ಪರ್ವತಗಳು, ಸಾವಿರಾರು ವರ್ಷಗಳಿಂದ ಉಳಿದು ಬಂದಿರುವ ಜೀವ ವೈವಿಧ್ಯತೆಗಳು, ಮಹಾಯುದ್ಧಗಳು, ಬಡದೇಶಗಳು ಮತ್ತು ಅವುಗಳ ಮೇಲೆ ಬಲಿಷ್ಟ ರಾಷ್ಟ್ರಗಳ ದಬ್ಬಾಳಿಕೆಗಳು ಇತ್ಯಾದಿ ಹತ್ತು ಹಲವಾರು ವಿಚಾರಗಳನ್ನು ಹೇಳುವ ಮಿಲೇನಿಯಮ್ ಸರಣಿಯ 16 ಪುಸ್ತಕಗಳು ಪ್ರಕಟವಾಗಿವೆ. 

ಅಣ್ಣನ ನೆನಪು

1996ರಲ್ಲಿ ಪ್ರಕಟವಾದ ತೇಜಸ್ವಿ ಅವರ “ಅಣ್ಣನ ನೆನಪು” ಪುಸ್ತಕ ನಮಗೆ ಕುವೆಂಪು ಅವರ ಜೊತೆಗೆ ತೇಜಸ್ವಿ ಅವರನ್ನೂ ಪರಿಚಯಿಸುತ್ತದೆ. ಈ ಪುಸ್ತಕದದಲ್ಲಿ ತೇಜಸ್ವಿ ಅವರು ಕುವೆಂಪು ಅವರ ನೈಜ ವ್ಯಕ್ತಿತ್ವವನ್ನು ಒಬ್ಬ ಸಾಮಾನ್ಯ ಮಗನಂತೆ ಕಟ್ಟಿಕೊಡುತ್ತಾರೆ. ತಂದೆಯವರ ಮಾನವೀಯತೆ, ಮುಗ್ಧತೆ ಮತ್ತು ನಿಷ್ಠುರತೆಗಳನ್ನು ಅನೇಕ ದೃಷ್ಟಾಂತಗಳ ಮೂಲಕ ಹೇಳುತ್ತಾರೆ. ತಮ್ಮ ಬಾಲ್ಯ ಮತ್ತು ಯೌವ್ವನದ ಹಲವಾರು ಘಟನೆಗಳನ್ನು ಸ್ವಾರಸ್ಯಕರವಾಗಿ ವಿವರಿಸುತ್ತಾರೆ. ಕನ್ನಡದ ಚಳವಳಿಗಳು, ಕರ್ನಾಟಕದ ಏಕೀಕರಣ, ಮಾಜಿ ಸಚಿವ ಬಸವಲಿಂಗಪ್ಪನವರ ಬೂಸಾ ಪ್ರಕರಣ ಇತ್ಯಾದಿಗಳನ್ನು ವಿಶ್ಲೇಷಿಸುತ್ತಾರೆ.

ಪ್ರಶಸ್ತಿ ಮತ್ತು ಪುರಸ್ಕಾರಗಳು

“ನಮ್ಮ ಅಂತಿಮ ಸವಾಲು ಇರೋದು ಪ್ರಶಸ್ತಿ ಗೆಲ್ಲೋದರಲ್ಲಿ ಅಲ್ಲ, ಓದುಗರನ್ನ ತಲುಪುವುದರಲ್ಲಿ. ಭಾಷೆ, ಸಾಹಿತ್ಯ ಎರಡೂ ಕಮ್ಯೂನಿಕೇಶನ್ ಗಾಗಿ ಇರೋದು. ಬರೆದು ಗೆಲ್ಲಬೇಕೇ ವಿನಃ ಪ್ರಶಸ್ತಿಯ ಬೆನ್ನು ಹತ್ತಬಾರದು” ಎಂದು ಹೇಳುತ್ತಿದ್ದ ತೇಜಸ್ವಿ ಅವರು, ಯಾವುದೇ ರೀತಿಯ ಮನ್ನಣೆ, ಪ್ರಚಾರಕ್ಕೆ ಎಂದೂ ಹಾತೊರೆದವರಲ್ಲ. “ಅವಾರ್ಡ್ ಫಿಲಂಗಳು ಮತ್ತು ಮಾರುಕಟ್ಟೆ ಫಿಲಂಗಳು ಅಂತ ವಿಭಾಗವಾದ ಹಾಗೆ, ಪ್ರಶಸ್ತಿಗಳ ಹಿಂದೆ ಹೋದ್ರೆ, ಪ್ರಶಸ್ತಿಗಾಗಿ ಬರೆದಿರೋ ಸಾಹಿತ್ಯ ಅಂತಲೂ ಒಂದು ವಿಭಾಗ ಶುರು ಆಗುತ್ತೆ” ಅಂತ ಅವರು ಕಟುವಾಗಿ ಹೇಳುತ್ತಿದ್ದರು. ಹೀಗಿದ್ದರೂ ಕೂಡ ಹಲವಾರು ಪ್ರಶಸ್ತಿ ಮತ್ತು ಪುರಸ್ಕಾರಗಳು ತೇಜಸ್ವಿ ಅವರನ್ನು ಹುಡುಕಿಕೊಂಡು ಬಂದಿವೆ.

ತೇಜಸ್ವಿ ಅವರಿಗೆ, “ಕರ್ನಾಟಕ ಸಾಹಿತ್ಯ ಅಕಾಡೆಮಿ”, “ಕೇಂದ್ರ ಸಾಹಿತ್ಯ ಅಕಾಡೆಮಿ”, “ಭಾರತೀಯ ಭಾಷಾ ಪರಿಷತ್”, “ಶಿವರಾಮ ಕಾರಂತ ಪ್ರಶಸ್ತಿ” ಸೇರಿದಂತೆ ಹಲವಾರು ಪ್ರಶಸ್ತಿಗಳು ಸಂದಿವೆ. ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಪೂರ್ಣಚಂದ್ರ ತೇಜಸ್ವಿಯವರು ನೀಡಿರುವ ಸಮಗ್ರ ಕೊಡುಗೆಯನ್ನು ಪರಿಗಣಿಸಿದ ಕರ್ನಾಟಕ ಸರ್ಕಾರ 2001ರಲ್ಲಿ ಪ್ರತಿಷ್ಠಿತ “ಪಂಪ” ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.

ತೇಜಸ್ವಿ ಬಗ್ಗೆ ಇತರರು ಬರೆದಿರುವ ಪುಸ್ತಕಗಳು

ತೇಜಸ್ವಿ ಅವರ ಅಕಾಲಿಕ ನಿಧನ ನಂತರದ ಇಲ್ಲಿಯವರೆಗೆ ಅವರ ಬಗ್ಗೆ ಹಲವಾರು ಪುಸ್ತಕಗಳು ಪ್ರಕಟವಾಗಿವೆ. “ತೇಜಸ್ವಿ ಲೋಕ”-2007 (ಡಿ.ವಿ.ಪ್ರಹ್ಲಾದ್), “ತೇಜಸ್ವಿ ನೆನಪು”-2007 (ಬಿ.ಎಲ್.ರಾಜು ಮತ್ತು ಬಿ.ಚಂದ್ರೇಗೌಡ), “ನೆನಪಿನಂಗಳದಲ್ಲಿ ತೇಜಸ್ವಿ-2010 (ಹಳೆಕೋಟೆ ರಮೇಶ್),  “ಪೂರ್ಣಚಂದ್ರ ತೇಜಸ್ವಿ”-2010 (ಬೆ.ಗೋ.ರಮೇಶ್), ಕಾಡಿನ ಸಂತ-ತೇಜಸ್ವಿ-ಕೆಲವು ನೆನಪುಗಳು(2011)-ಧನಂಜಯ ಜೀವಾಳ ಬಿ.ಕೆ.,  “ನಮ್ಮೆಲ್ಲರ ತೇಜಸ್ವಿ”-2012(ನರೇಂದ್ರ ರೈ ದೇರ್ಲ), “ತೇಜಸ್ವಿ ಬದುಕಿದ್ದಾರೆ”-2013(ಕೀರ್ತಿ ಕೋಲ್ಗಾರ್), “ತೇಜಸ್ವಿ ನಾನು ಕಂಡಷ್ಟು”-2013 (ಧನಂಜಯ ಜೀವಾಳ ಬಿ.ಕೆ), “ತೇಜಸ್ವಿಯನ್ನು ಹುಡುಕುತ್ತಾ”-2015(ಆರ್.ದೊಡ್ಡೇಗೌಡ), “ನಮ್ಮ ನಡುವಿನ ತೇಜಸ್ವಿ”-2016 (ಪ್ರಸಾದ್ ರಕ್ಷಿದಿ), ಮತ್ತು ತೇಜಸ್ವಿ ಅವರ ಪತ್ನಿ ರಾಜೇಶ್ವರಿ ಅವರು 2015ರಲ್ಲಿ  ಪ್ರಕಟಿಸಿರುವ “ನನ್ನ ತೇಜಸ್ವಿ” ಪುಸ್ತಕಗಳು ಮುಖ್ಯವಾಗಿವೆ. ಡಾ.ಕೆ.ಸಿ.ಶಿವಾರೆಡ್ಡಿ ಅವರು ಬರೆದಿರುವ “ಕೆ.ಪಿ.ಪೂರ್ಣಚಂದ್ರ ತೇಜಸ್ವಿ-ಬದುಕಿನ ಬಗೆ” ಎಂಬ ಶೀರ್ಷಿಕೆಯ ಕಿರು ಪುಸ್ತಕವನ್ನು, ಕರ್ನಾಟಕ ಸರ್ಕಾರದ ವಾರ್ತಾ ಮತ್ತು ಸಂಪರ್ಕ ಇಲಾಖೆಯವರು 2018ರಲ್ಲಿ ಪ್ರಕಟಿಸಿದ್ದಾರೆ.

ತೇಜಸ್ವಿ ಅವರು,  ತಮ್ಮ ಬದುಕಿನ ವಿವಿಧ ಘಟ್ಟಗಳಲ್ಲಿ ಬರೆದ ಪತ್ರಗಳನ್ನು ನರೇಂದ್ರ ರೈ ದೇರ್ಲ ಅವರು “ತೇಜಸ್ವಿ ಪತ್ರಗಳು(2005)” ಎಂಬ ಶೀರ್ಷಿಕೆಯಡಿ ಸಂಪಾದಿಸಿದ್ದಾರೆ. “ತೇಜಸ್ವಿ ಸಿಕ್ಕರು” … ಎಂಬ ಶೀರ್ಷಿಕೆಯಡಿಯಲ್ಲಿ ಕೆ.ಎಸ್.ಪರಮೇಶ್ವರ ಅವರು ತೇಜಸ್ವಿ ಕುಟುಂಬ ಮತ್ತು ಸ್ನೇಹಿತರ ಮಾತುಗಳನ್ನು ದಾಖಲಿಸಿದ್ದಾರೆ.

ತಮ್ಮದೇ ಬರವಣಿಗೆ ಬಗ್ಗೆ ತೇಜಸ್ವಿ

“ಕನ್ನಡಿಗರು, ನನ್ನ ಕೃತಿಗಳಿಗೂ ನನಗೂ ನನ್ನ ಯೋಗ್ಯತೆಗೆ ಮೀರಿದ ಮನ್ನಣೆ ಕೊಟ್ಟು ನನ್ನನ್ನು ಅವರ ಋಣಭಾರದಲ್ಲಿ ಮುಳುಗಿಸಿದ್ದಾರೆಂದೇ ನನಗೆ ಅನ್ನಿಸುತ್ತದೆ” ಎಂಬ ವಿನಮ್ರತೆ ವ್ಯಕ್ತಪಡಿಸುತ್ತಿದ್ದ ತೇಜಸ್ವಿ, “ನಾನು ಬರೆಯುವ ಪದಗಳ ಅರ್ಥವೇ, ಮನುಷ್ಯರೆಲ್ಲ ಒಂದೇ, ನನ್ನಂತೆಯೇ ಎನ್ನುವ ಆಳವಾದ ಶ್ರದ್ಧೆಯ ಮೇಲೆ ನಿಂತಿದೆ”  ಎಂದು ವಿವರಿಸುತ್ತಿದ್ದರು.

“ಭಿನ್ನವಾಗಿ ಬರೀಬೇಕಾದರೆ ಭಿನ್ನವಾಗಿ ಬದುಕಬೇಕು” ಅನ್ನುತ್ತಿದ್ದ ತೇಜಸ್ವಿ, “ನಾನು ಬೇಕೂಂತ ಬೇರೆಯಾಗಿ ಬರೆಯೋಕೆ ಯತ್ನಿಸಲಿಲ್ಲ. ನನ್ನ ಬದುಕೇ ಬೇರೆ ಥರ ಇತ್ತು. ಬೇರೆ ಥರ ಬರೆದೆ ಅಷ್ಟೇ. ನೀವು ಬೆಂಗಳೂರಲ್ಲಿ ಕೂತು ಅದೇ ರಸ್ತೇಲಿ ವಾಕಿಂಗ್ ಮಾಡ್ತಾ ಬೇರೆ ಥರ ಬರೀಬೇಕು ಅಂದ್ರೆ ಹ್ಯಾಗಾಗುತ್ತೆ ಹೇಳಿ” ಎಂದು ಪ್ರಶ್ನಿಸುತ್ತಿದ್ದರು.

“ನನ್ನ ಮೆಚ್ಚಿನ ಲೇಖಕರು ಯಾವತ್ತಿಗೂ ಶಿವರಾಮ ಕಾರಂತರು, ಕುವೆಂಪು. ಅದೇ Artistry ತಗೊಂಡ್ರೆ ಕುವೆಂಪು is the greatest example. ಜೀವನದ Experimentation ಮತ್ತು ಪ್ರಯೋಗಶೀಲತೆ ತಗೊಂಡ್ರೆ ಕಾರಂತ್ is my greatest example. I have learnt a lot from these people” ಅನ್ನುತ್ತಿದ್ದರು.

ತೇಜಸ್ವಿ ಮತ್ತು ಹವ್ಯಾಸಗಳು

ತೇಜಸ್ವಿ ಹಲವಾರು ಹವ್ಯಾಸಗಳನ್ನು ಬೆಳೆಸಿಕೊಂಡಿದ್ದರು. ಅವುಗಳಲ್ಲಿ ಕೆಲವು ಹವ್ಯಾಸಗಳ ಮಟ್ಟದಲ್ಲೇ ಉಳಿದರೆ, ಇನ್ನು ಕೆಲವು ಒಂದು ದಿನವೂ ಬಿಟ್ಟಿರಲಾರದ  ಗೀಳಿನಂತಾಗಿದ್ದವು.

ಬರವಣಿಗೆಗಿಂತಲೂ ಚಿತ್ರಕಲೆಯೇ ತೇಜಸ್ವಿ ಅವರ ಮೊದಲ ಆಸಕ್ತಿ ಆಗಿತ್ತು. ತೇಜಸ್ವಿ ಅವರು ಹಲವಾರು ಅತ್ಯುತ್ತಮ ಪೇಂಟಿಂಗ್ ಮಾಡಿದ್ದಾರೆ ಹಾಗೂ ಚಿತ್ರಗಳನ್ನು ಬಿಡಿಸಿದ್ದಾರೆ. ಸಂಗೀತಾಭ್ಯಾಸವನ್ನೂ ಮಾಡಿದ್ದ ತೇಜಸ್ವಿ, ಸಿತಾರ್ ಕೂಡ ನುಡಿಸುತ್ತಿದ್ದರು. ವಿದ್ಯಾಭ್ಯಾಸ ಮುಗಿಸಿ ಕೃಷಿಯಲ್ಲಿ ತೊಡಗಿಕೊಂಡ ದಿನಗಳ ಆರಂಭದಲ್ಲಿ ಶಿಕಾರಿಗೆಂದು, ಮೀನು ಹಿಡಿಯಲೆಂದು ಕಾಡಿನಲ್ಲಿ, ಕೆರೆ, ಹಳ್ಳಗಳ ದಡದಲ್ಲಿ ದಿನಗಟ್ಟಲೆ ಕಳೆಯುತ್ತಿದ್ದರು. ಇದರ ಜೊತೆಗೆ, ಸ್ಕೂಟರ್ ರಿಪೇರಿ, ಜೀಪ್ ರಿಪೇರಿಯನ್ನೂ ಮಾಡುತ್ತಿದ್ದರು. ವಸ್ತುಗಳನ್ನು, ಉಪಕರಣಗಳನ್ನು ರಿಪೇರಿ ಮಾಡುವ ಬುದ್ಧಿ ಬಾಲ್ಯದಿಂದಲೇ ಶುರುವಾಗಿತ್ತು. ಎಷ್ಟೋ ಬಾರಿ ಇವರ ರಿಪೇರಿಯ ಫಲವಾಗಿ ಅನೇಕ ವಸ್ತುಗಳು ಹಾಳಾಗಿ ಗುಜರಿ ಸೇರುತ್ತಿದ್ದವು.

ತೇಜಸ್ವಿ ಮತ್ತು ಕ್ಯಾಮರಾ ಪ್ರೀತಿ

ತೇಜಸ್ವಿ ಅವರು ಹೈಸ್ಕೂಲ್ ಓದುತ್ತಿದ್ದಾಗಲೇ ಕ್ಯಾಮರಾದ ಬಗ್ಗೆ ಭಾರಿ ಆಕರ್ಷಣೆ ಬೆಳೆದಿತ್ತು. ಆದರೆ, ಈ ಹೊತ್ತಿನಂತೆ ಆಗಿನ್ನೂ ಕ್ಯಾಮರ ಅನ್ನುವುದು ಸರ್ವಾಂತರ್ಯಾಮಿ ಆಗಿರಲಿಲ್ಲ, ಬೇಕು ಅನ್ನಿಸಿದವರೆಲ್ಲ ಕೊಂಡುಕೊಳ್ಳೋಷ್ಟು ಸುಲಭವೂ ಆಗಿರಲಿಲ್ಲ. ಅಪ್ಪ ಅಮ್ಮಾನೂ ಕೊಡಿಸುತ್ತಿರಲಿಲ್ಲ. ಹೀಗಾಗಿ, ಏನಾದ್ರೂ ಮಾಡಿ ಒಂದು ಕ್ಯಾಮರ ಖರೀದಿಸಿ ಫೋಟೊ ತೆಗೆಯಬೇಕು ಅನ್ನುವ ಭಾರಿ ಆಸೆ ಹೊಂದಿದ್ದ ತೇಜಸ್ವಿ ಅದಕ್ಕೊಂದು ಅವಕಾಶಕ್ಕಾಗಿ ಕಾಯುತ್ತಿದ್ದರು.

ಒಮ್ಮೆ ಮೈಸೂರಿನ ರಾಮಕೃಷ್ಣ ಆಶ್ರಮದವರು ಆಯೋಜಿಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ ತೇಜಸ್ವಿಯವರಿಗೆ ಮೂರನೇ ಬಹುಮಾನ ಬಂತು. ಬಹುಮಾನವಾಗಿ ದೊರೆತ ಹಣಕ್ಕೆ ತಾವು ಸೇರಿಸಿಟ್ಟುಕೊಂಡಿದ್ದ ಒಂದಿಷ್ಟು ದುಡ್ಡನ್ನು ಸೇರಿಸಿಯೋಏನೋ, ಚಿಕ್ಕದೊಂದು Kodak Baby Brownie ಕ್ಯಾಮರ ಖರೀದಿಸಿದರು. ಆ ನಂತರ ಅದನ್ನು ಬಳಸಿ, ತಮ್ಮ ತಂದೆ ಮತ್ತು ಮನೆಯ ಇತರರ ಜೊತೆಗೆ ಸುತ್ತಲಿನ ಪರಿಸರದ ಫೋಟೊ ತೆಗೆಯಲು ಆರಂಭಿಸಿದರು. ಅಲ್ಲಿಂದ ಶುರುವಾದ ಕ್ಯಾಮರ ಜೊತೆಗಿನ ಒಡನಾಟ, ತೇಜಸ್ವಿ ಜೀವನದ ಉದ್ದಕ್ಕೂ ಮುಂದುವರೆಯಿತು. ಅಲ್ಲಿಂದಾಚೆಗಿನ ದಿನದಲ್ಲಿ, ಯಾರಿಗಾದರೂ ಹಳೆ ಕ್ಯಾಮರ ಮಾರೋದು, ಹೊಸದನ್ನು ಕೊಳ್ಳೋದು ಮಾಡುತ್ತಿದ್ದರು.

ಮೈಸೂರಿನಲ್ಲಿ ವಿದ್ಯಾಭ್ಯಾಸ ಮುಗಿಸಿ ಕೃಷಿ ಮಾಡಲೆಂದು ಮೂಡಿಗೆರೆ ಬಂದ ಮೇಲಂತೂ ಹವ್ಯಾಸ ಅನ್ನುವುದು ಗೀಳಿನಂತಾಯಿತು. ಹಕ್ಕಿಗಳ ಚಿತ್ರ ತೆಗೆಯುವುದು ದಿನನಿತ್ಯದ ಕೆಲಸವಾಯಿತು. ತೇಜಸ್ವಿ ಅವರ ಕ್ಯಾಮರ ಹುಚ್ಚು ಎಷ್ಟರಮಟ್ಟಿಗಿತ್ತೆಂದರೆ, ವಿದೇಶದಲ್ಲಿದ್ದ ಸೋದರ ಪ್ರತಿಬಾರಿ ಭಾರತಕ್ಕೆ ಬರುವಾಗಲೂ “ನನಗೊಂದು ಹೊಸ ಕ್ಯಾಮರ ತಾ” ಅನ್ನುತ್ತಿದ್ದರಂತೆ. ಇದು ಹಲವು ಬಾರಿ ಮರುಕಳಿಸಿದ ನಂತರ ಅವರ ಸೋದರ, “ನೀನೇನು ಕ್ಯಾಮರ ತಿಂತೀಯಾ ಹೇಗೆ” ಎಂದು ತೇಜಸ್ವಿಯವರನ್ನು ಕೇಳಿದ್ದರಂತೆ.

ಹಕ್ಕಿ-ಪಕ್ಷಿಗಳ ಫೋಟೊ ತೆಗೆಯುತ್ತಲೇ ಅವುಗಳ ಜೀವನ ಕ್ರಮವನ್ನೂ ತಿಳಿಯುವ ಪ್ರಯತ್ನ ಮಾಡಿದ ತೇಜಸ್ವಿ, “ಹಕ್ಕಿಗಳ ಫೋಟೊ ತೆಗೆಯುವುದು ಸುಲಭವಲ್ಲ ಅದಕ್ಕಾಗಿ ಛಾಯಾಗ್ರಾಹಕ ಹಠಯೋಗಿಯಾಗಬೇಕು” ಅನ್ನುತ್ತಿದ್ದರು. ತೇಜಸ್ವಿ ತೆಗೆದ ಹಕ್ಕಿಗಳ ಚಿತ್ರಗಳು ಮತ್ತು ಲೇಖನಗಳು ತುಷಾರ ಇತ್ಯಾದಿ ನಿಯತ ಕಾಲಿಕೆಗಳಲ್ಲಿ ಪ್ರಕಟವಾಗಿದ್ದವು. ತೇಜಸ್ವಿ  ಅವರು ರಚಿಸಿರುವ “ಕನ್ನಡ ನಾಡಿನ ಹಕ್ಕಿಗಳು”, “ಹಕ್ಕಿಪುಕ್ಕ” ಪುಸ್ತಕಗಳಲ್ಲೂ ಪ್ರಕಟವಾಗಿವೆ. ಬೆಂಗಳೂರಿನ ಚಿತ್ರಕಲಾ ಪರಿಷತ್ ಮತ್ತು ಮೈಸೂರಿನ ರಂಗಾಯಣದಲ್ಲೂ ತೇಜಸ್ವಿ ತೆಗೆದ ಚಿತ್ರಗಳನ್ನು ಪ್ರದರ್ಶಿಸಲಾಗಿದೆ. ತೇಜಸ್ವಿ ಚಿತ್ರಗಳು ಶುಭಾಶಯ ಪತ್ರಗಳಾಗಿ, ಕ್ಯಾಲೆಂಡರ್ ಗಳಾಗಿ ರಾಜ್ಯದ ಮನೆ ಮನೆಗಳನ್ನು ತಲುಪಿವೆ. ಮಕ್ಕಳಿಂದ ಹಿಡಿದು ಹಿರಿಯರಲ್ಲೂ ಪರಿಸರದ ಬಗ್ಗೆ ಕೌತುಕ ಮತ್ತು ಕಾಳಜಿ ಮೂಡಿಸಲು ನೆರವಾಗಿವೆ.

ತೇಜಸ್ವಿ, ಕಂಪ್ಯೂಟರ್ ಮತ್ತು ಕನ್ನಡ ತಂತ್ರಾಂಶ

ಜಗತ್ತಿನ ಬಹುತೇಕ ದೇಶಗಳಂತೆ ಭಾರತವೂ ಕೂಡ ಕೊರೋನ ಮಹಾಮಾರಿಯ ಹಿಡಿತಕ್ಕೆ ಸಿಲುಕಿದ ಮೇಲೆ, ಪುಟ್ಟ ಮಕ್ಕಳಿಂದ ಹಿಡಿದು ಬಹುತೇಕ ಎಲ್ಲರೂ ಕೂಡ, ತಾವು ತಮ್ಮ ಶಾಲೆ, ಕಾಲೇಜು, ಕಚೇರಿ, ಉದ್ಯೋಗ ಸ್ಥಳಕ್ಕೆ ಹೋಗಿ ಮಾಡಬೇಕಿದ್ದ ಕೆಲಸವನ್ನು ತಮ್ಮ ತಮ್ಮ ಮನೆಯಿಂದಲೇ ನಿರ್ವಹಿಸಬೇಕಾದ ಅನಿವಾರ್ಯ ಪರಿಸ್ಥಿತಿ ಉಂಟಾಗಿದೆ. ಈ ಸನ್ನಿವೇಶದಲ್ಲಿ ಎಲ್ಲರ ನೆರವಿಗೆ ಬಂದಿದ್ದೇ ಮಾಹಿತಿ ತಂತ್ರಜ್ಞಾನ.

ಆದರೆ, ಇಂಥ ಒಂದು ಸಾಧ್ಯತೆಯನ್ನು 30ಕ್ಕೂ ಹೆಚ್ಚು ವರ್ಷಗಳ ಹಿಂದೆಯೇ ಗುರುತಿಸಿದ್ದ ತೇಜಸ್ವಿ ಅವರು ಅದಕ್ಕಾಗಿ ತಮ್ಮನ್ನು ಆ ಹೊತ್ತಿನಲ್ಲೇ ಸಜ್ಜುಗೊಳಿಸಿಕೊಂಡಿದ್ದರು. ತಮ್ಮ ಗೆಳೆಯರ ಸಹಾಯದಿಂದ ಕಂಪ್ಯೂಟರ್ ತರಿಸಿಕೊಂಡು, ಅದನ್ನು ಬಳಸಿ ಕೆಲಸ ಮಾಡಲು ಆರಂಭಿಸಿದ್ದರು. ಆ ಹೊತ್ತಿನಲ್ಲೇ ಅವರಿಗೆ ಕಂಪ್ಯೂಟರ್ ಗೆ ಕನ್ನಡವನ್ನು ಒಗ್ಗಿಸಿಕೊಳ್ಳುವುದು ಅನಿವಾರ್ಯ ಅನ್ನಿಸಿತ್ತು.

“ಕಂಪ್ಯೂಟರ್ ನಲ್ಲಿ ಇಂಗ್ಲಿಷ್ ನಷ್ಟೇ ಸರಳ ಮತ್ತು ಸಹಜವಾಗಿ ಕನ್ನಡವನ್ನು ಬಳಸಲು ಸಾಧ್ಯವಾಗದಿದ್ದರೆ ಭಾಷೆಯನ್ನು ಉಳಿಸಲು ಸಾಧ್ಯವಿಲ್ಲ” ಅನ್ನುವುದು ತೇಜಸ್ವಿ ಅವರ ಚಿಂತನೆಯಾಗಿತ್ತು. ಹೀಗಾಗಿ, ಕಂಪ್ಯೂಟರ್ ನಲ್ಲಿ ಕನ್ನಡ ಬಳಕೆಯ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಮತ್ತು ಉಚಿತ ಮತ್ತು ಮುಕ್ತ ಕನ್ನಡ ತಂತ್ರಾಂಶ ರೂಪಿಸುವ ಪ್ರಯತ್ನಗಳಲ್ಲಿ ತೊಡಗಿಸಿಕೊಂಡಿದ್ದರು.

ಅದಕ್ಕಾಗಿ, ಹಂಪಿಯಲ್ಲಿ ಆರಂಭವಾಗಿದ್ದ ಕನ್ನಡ ವಿ.ವಿ ಜೊತೆಗೂಡಿ ಕುವೆಂಪು ಕನ್ನಡ ತಂತ್ರಾಂಶ ರೂಪಿಸಲು ಶ್ರಮಿಸಿದರು.

ಸಮಾಜವಾದ ಮತ್ತು ತೇಜಸ್ವಿ

ಶಾಂತವೇರಿ ಗೋಪಾಲ ಗೌಡರ ಜೊತೆಗೆ ಒಡನಾಟವಿದ್ದ ತೇಜಸ್ವಿ, ಸಮಾಜವಾದಿ ಚಿಂತನೆಗಳನ್ನು ಬೆಳೆಸಿಕೊಂಡಿದ್ದರು, ರಾಮ್ ಮನೋಹರ್ ಲೋಹಿಯಾ ಅವರ ಚಿಂತನೆಗಳಿಂದ ಪ್ರಭಾವಿತರಾಗಿದ್ದರು. ಲೋಹಿಯಾ ಅವರು ಒಮ್ಮೆ ಮೈಸೂರಿಗೆ ಬಂದಿದ್ದಾಗ, ರಾಷ್ಟ್ರಕವಿ ಕುವೆಂಪು ಅವರನ್ನು ಭೇಟಿಯಾಗುವ ಇಚ್ಛೆ ವ್ಯಕ್ತಪಡಿಸಿದ್ದರು. ಆಗ ಕೋಣಂದೂರು ಲಿಂಗಪ್ಪನವರು, ತೇಜಸ್ವಿಯವರ ಜೊತೆ ಮಾತನಾಡಿ ಕುವೆಂಪು ಅವರನ್ನು ಒಪ್ಪಿಸಿದ್ದರಂತೆ. ಮೊದಲಿಗೆ 15 ನಿಮಿಷದ ಮಾತುಕತೆ ಎಂದುಕೊಂಡಿದ್ದು ಮುಗಿಯುವ ಹೊತ್ತಿಗೆ ಎರಡೂವರೆ ಗಂಟೆ ಆಗಿತ್ತಂತೆ.

ಪ್ರೊಫೆಸರ್ ಎಂ.ಡಿ.ನಂಜುಂಡಸ್ವಾಮಿ, ಕಡಿದಾಳ್ ಶಾಮಣ್ಣ, ಎನ್.ಡಿ.ಸುಂದರೇಶ್, ಪಿ.ಲಂಕೇಶ್, ಕೋಣಂದೂರು ಲಿಂಗಪ್ಪ ಮುಂತಾದವರ ಜೊತೆ ಆಪ್ತ ಸ್ನೇಹ ಹೊಂದಿದ್ದ, ತೇಜಸ್ವಿ ಅವರು, ಜಾತಿ ವಿನಾಶ ಸಮ್ಮೇಳನ, ಯುವಜನ ಸಭಾ, ನವ ನಿರ್ಮಾಣ ಸಮಿತಿ, ಲೋಹಿಯಾ ವಿಚಾರ ಮಂಚ, ಕರ್ನಾಟಕ ಬರಹಗಾರರ ಮತ್ತು ಕಲಾವಿದರ ಒಕ್ಕೂಟದ ರಚನೆ ಹಾಗೂ ರೈತ ಚಳವಳಿಗಳಲ್ಲಿ ಪಾಲ್ಗೊಂಡಿದ್ದರು. ಕುದುರೆ ಮುಖದಲ್ಲಿ ಗಣಿಗಾರಿಕೆಯಿಂದ ಆಗುತ್ತಿದ್ದ ಅನಾಹುತಗಳ ವಿರುದ್ಧವೂ ದನಿ ಎತ್ತಿದ್ದರು.

ಮಾನವತಾವಾದಿ ತೇಜಸ್ವಿ

ತಂದೆ ಕುವೆಂಪು ವಿಶ್ವಮಾನವತ್ವದ ಪ್ರತಿಪಾದಕರಾದರೆ ಮಗ ತೇಜಸ್ವಿ ತಾನು ಇದ್ದ ಜಾಗದಿಂದಲೇ ಜಗತ್ತನ್ನು ಅರ್ಥೈಸಿಕೊಳ್ಳಲು ಪ್ರಯತ್ನಿಸಿದ ಮಾನವತಾವಾದಿ. ತಾನು ಕೋಟ್ಯಂತರ ಜನರು ಗೌರವಿಸುವ, ಆರಾಧಿಸುವ ಮಹಾನ್ ಕವಿಯೊಬ್ಬರ ಮಗನೆಂಬುದನ್ನು ಎಂದಿಗೂ ತೋರಿಸಿಕೊಳ್ಳದ ಮತ್ತು ತನ್ನ ಲಾಭಕ್ಕಾಗಿ ಬಳಸಿಕೊಳ್ಳದ ತೇಜಸ್ವಿ, ತಂದೆಯ ನೆರಳಿನಿಂದಾಚೆಗೆ ನಿಂತು ತನ್ನದೇ ಆದ ವ್ಯಕ್ತಿತ್ವ, ಜೀವನ ಮತ್ತು ಬರವಣಿಗೆಯ ರೀತಿ ನೀತಿಗಳನ್ನು ರೂಪಿಸಿಕೊಂಡ ಮಹಾನ್ ಸಾಧಕ.

ಛಲ ಮತ್ತು ಸಂಕಲ್ಪದ ಬಲದಿಂದ ದೊಡ್ಡ ಎತ್ತರಕ್ಕೆ ಬೆಳೆದರೂ ಕೂಡ, ಸಾಮಾನ್ಯರಲ್ಲಿ ಸಾಮಾನ್ಯನಂತಿರುತ್ತಿದ್ದ ತೇಜಸ್ವಿ, ಮೂಡಿಗೆರೆಯ ಜನರಿಗೆ ತಾನು ಎಷ್ಟು ದೊಡ್ಡ ಮನುಷ್ಯ ಅನ್ನುವುದರ ಸುಳಿವನ್ನೇ ಬಿಟ್ಟುಕೊಡದಷ್ಟು ಸರಳವಾಗಿ ಬದುಕಿದ್ದರು.

ಓಲೈಕೆ ಮತ್ತು ಪ್ರಶಂಸೆಗಳನ್ನು ಸುತಾರಾಮ್ ಒಪ್ಪದ ತೇಜಸ್ವಿ, ಚೆನ್ನಾಗಿ ಪರಿಚಯವಿದ್ದವರ ಪೈಕಿ ಯಾರಾದ್ರೂ ನಮಸ್ಕಾರ ಸರ್ ಅಂದ್ರೂ ಕೂಡ, “ಯಾಕ್ರೀ ಅದು” ಎಂದು ಪ್ರಶ್ನಿಸುತ್ತಿದ್ದರು. ಆದರೆ, ಅವರಲ್ಲಿ ಸಾಕಷ್ಟು ಹಾಸ್ಯಪ್ರಜ್ಞೆಯೂ ಇತ್ತು. ಇಷ್ಟು ಮಾತ್ರವಲ್ಲದೆ, ತಮಗೆ ಯಾರೇ ಪತ್ರ ಬರೆದರೂ ಅದಕ್ಕೆ ಉತ್ತರಿಸುತ್ತಿದ್ದ ತೇಜಸ್ವಿ, ಆ ಮೂಲಕ ಅವರನ್ನೂ ಕೂಡ ಸಾಧನೆ ಮಾಡಲು ಪ್ರೇರೇಪಿಸುತ್ತಿದ್ದರು.

ಜಾತಿವಾದದಿಂದ ಸಂಪೂರ್ಣವಾಗಿ ದೂರವಿದ್ದ ತೇಜಸ್ವಿ, ಒಮ್ಮೆ ತಂದೆ ಕುವೆಂಪು ಅವರನ್ನು ತಮ್ಮ ಸಮುದಾಯದ ಕಾರ್ಯಕ್ರಮಕ್ಕೆ ಬರಬೇಕು ಎಂದು ಆಹ್ವಾನಿಸಲು ಬಂದ ಜನರನ್ನು ತರಾಟೆಗೆ ತೆಗೆದುಕೊಂಡಿದ್ದರು. “ಮಹಾ ಕವಿಗಳಾದ ಪಂಪ, ರನ್ನ, ಕುಮಾರವ್ಯಾಸ ರಂಥವರು ಇನ್ನೂ ಜನರ ಮನಸ್ಸಿನಲ್ಲಿ ಉಳಿದಿರುವುದು ಅವರ ಕಾವ್ಯದ ಶ್ರೇಷ್ಠತೆಯಿಂದಲೇ ಹೊರತು, ಅವರ ಜಾತಿಯಿಂದ ಅಥವ ಅಭಿಮಾನಿಗಳ ಸಂಘದಿಂದ ಅಲ್ಲ” ಎಂದು ನಿಷ್ಠುರವಾಗಿ ಹೇಳುತ್ತಿದ್ದರು.

ತೇಜಸ್ವಿ ಕಂಡ ಬಸವಣ್ಣ 

ತಂದೆ ಕುವೆಂಪು ಅವರಂತೆಯೇ ತೇಜಸ್ವಿ ಕೂಡ ಬಸವಣ್ಣನ ಚಿಂತನೆಗಳಿಂದ ಪ್ರಭಾವಿತರಾಗಿದ್ದರು. “ಬಸವಣ್ಣನ ಚಳವಳಿ ಜಾತ್ಯತೀತ ಚಳವಳಿಯಾಗಿತ್ತು. ಅವರು ಜಾತಿ ಪದ್ಧತಿಯಿಂದ ಬಿಡುಗಡೆ ಕೊಟ್ಟಿದ್ದರಿಂದ, ಮಹಿಳೆಯರಿಗೆ ಸಮಾನ ಸ್ಥಾನಮಾನ ನೀಡಿದ್ದರಿಂದ ಲಿಂಗಾಯತ ಧರ್ಮ, ಅಹಿಂದೂ  ಧರ್ಮ”  ಅನ್ನುವುದು ತೇಜಸ್ವಿ ಅವರ ಚಿಂತನೆಯಾಗಿತ್ತು.

ತೇಜಸ್ವಿ ಮತ್ತು ರಾಜಕಾರಣ

ತಾವು ನಂಬಿದ ಸಿದ್ಧಾಂತಗಳ ಜೊತೆಗೆ ಕಿಂಚಿತ್ತೂ ರಾಜಿಮಾಡಿಕೊಳ್ಳದ ತೇಜಸ್ವಿ, ರಾಜಕೀಯ ಮತ್ತು ರಾಜಕಾರಣಿಗಳಿಂದ ಸಾಕಷ್ಟು ಅಂತರ ಕಾಯ್ದುಕೊಂಡಿದ್ದರು. ಹೀಗಿದ್ದರೂ ಕೂಡ, 1972ರ ವಿಧಾನಸಭಾ ಚುನಾವಣೆ ವೇಳೆ ತೇಜಸ್ವಿ ಅವರನ್ನು ತೀರ್ಥಹಳ್ಳಿ ಕ್ಷೇತ್ರದಿಂದ ಕಣಕ್ಕಿಳಿಸಲು ಅವರ ಸ್ನೇಹಿತರ ಬಳಗ ಬಯಸಿತ್ತು. ಏಕೆಂದರೆ, ಆ ಕ್ಷೇತ್ರವನ್ನು ಶಾಂತವೇರಿ ಗೋಪಾಲ ಗೌಡರು ಎರಡು ಬಾರಿ ಪ್ರತಿನಿಧಿಸಿದ್ದರು. ಅನಾರೋಗ್ಯದ ಕಾರಣ ಅವರು ಮತ್ತೆ ಸ್ಪರ್ಧಿಸಲಾಗುತ್ತಿರಲಿಲ್ಲ. ಹೀಗಾಗಿ, ಸಮಾಜವಾದಿ ಚಿಂತನೆಯನ್ನು ಮೈಗೂಡಿಸಿಕೊಂಡಿದ್ದ ತೇಜಸ್ವಿ ಅವರನ್ನು ಕಣಕ್ಕಿಳಿಸಿದರೆ ಸರಿಯಾಗುತ್ತದೆ ಎಂದು ಭಾವಿಸಿದ್ದರು. ಆದರೆ, ತೇಜಸ್ವಿ ಅವರನ್ನು ಒಪ್ಪಿಸುವುದು ಅಷ್ಟು ಸುಲಭವಲ್ಲ ಅನ್ನುವುದು ಅವರಿಗೆ ಗೊತ್ತಿತ್ತು. ಹೀಗಾಗಿ ತೇಜಸ್ವಿ ಅವರಿಗೆ ಆಪ್ತ ಗೆಳೆಯರಾಗಿದ್ದ ಕೋಣಂದೂರು ಲಿಂಗಪ್ಪ ಮತ್ತು ಕಡಿದಾಳ್ ಶಾಮಣ್ಣನವರಿಗೆ ತೇಜಸ್ವಿಯವರನ್ನು ಒಪ್ಪಿಸುವ ಜವಾಬ್ದಾರಿ ಕೊಟ್ಟಿದ್ದರು. ಮೂಡಿಗೆರೆಯ ತೇಜಸ್ವಿ ಮನೆಗೆ ಹೋದ ಅವರಿಬ್ಬರೂ ಹೇಗೋ ಮಾಡಿ ತೇಜಸ್ವಿ ಅವರನ್ನು ಒಪ್ಪಿಸಿದರು. ನಾಮಪತ್ರ ಸಲ್ಲಿಸಲು ಅಗತ್ಯವಿದ್ದ ದಾಖಲೆಗಳನ್ನು ಹೊಂದಿಸಿಕೊಂಡು, ಮೂವರೂ ಕಾರಿನಲ್ಲಿ ತೀರ್ಥಹಳ್ಳಿಗೆ ಹೊರಟರು. ಮನಸ್ಸಿಲ್ಲದ ಮನಸ್ಸಿನಿಂದ ಒಪ್ಪಿಕೊಂಡಿದ್ದ ತೇಜಸ್ವಿಯವರಿಗೆ ಏನನ್ನಿಸಿತೋ ಏನೋ, “ಲಿಂಗಪ್ಪ, ಅದೇನೋ ನಾಮಪತ್ರದ ದಾಖಲೆ ಅಂದ್ಯಲ್ಲ ತೋರಿಸೋ”, ಅಂದರಂತೆ. ನೋಡುವುದಕ್ಕಾಗಿ ಕೇಳುತ್ತಿರಬೇಕು ಅಂದುಕೊಂಡ ಲಿಂಗಪ್ಪನವರು ಕೈಚೀಲದಲ್ಲಿದ್ದ ನಾಮಪತ್ರ ಮತ್ತಿತರ ದಾಖಲೆಗಳನ್ನು ತೇಜಸ್ವಿ ಕೈಗಿಟ್ಟರಂತೆ, ತಕ್ಷಣವೇ ಅಷ್ಟೂ ದಾಖಲೆ ಪತ್ರಗಳನ್ನು ಪರಪರನೆ ಹರಿದ ತೇಜಸ್ವಿ, ಕಾರಿನ ಕಿಟಕಿಯಿಂದ ಆಚೆಗೆ ಎಸೆದು “ನೀವು ಯಾರಾದರೂ ಚುನಾವಣೆಗೆ ನಿಲ್ಲಿ ಅಂದ್ರೆ, ನನ್ನ ತಲೆಗೆ ಕಟ್ಟಲು ಬಂದಿದ್ದೀರಾ ನನ್ನನ್ನು ಏನು ಮಾಡಬೇಕು ಅಂದ್ಕೊಂಡಿದ್ದೀರಾ” ಎಂದು ತರಾಟೆಗೆ ತೆಗೆದುಕೊಂಡರಂತೆ. ಇಷ್ಟಾದ ಮೇಲೆ, “ನಾನೇ ಆ ಕ್ಷೇತ್ರದಿಂದ ಕಣಕ್ಕಿಳಿದು, ಶಾಸಕನಾಗಿ ಆಯ್ಕೆಯಾದೆ” ಎಂದು ಕೋಣಂದೂರು ಲಿಂಗಪ್ಪನವರು ಹೇಳಿದ್ದರು.

ಇದೆಲ್ಲವೂ ಆದ ಸಾಕಷ್ಟು ವರ್ಷಗಳ ನಂತರ, ರಾಜಕೀಯ ಪಕ್ಷದ ದೊಡ್ಡ ಮುಖಂಡರೊಬ್ಬರು, ತೇಜಸ್ವಿಯವರನ್ನು ವಿಧಾನಪರಿಷತ್ ಸದಸ್ಯರಾಗಿ ನಾಮಕರಣ ಮಾಡಲು ಬಯಸಿದ್ದರಂತೆ. ಅವರ ಮಾತಿಗೂ ಸೊಪ್ಪುಹಾಕದ ತೇಜಸ್ವಿ, ಮತ್ತೊಮ್ಮೆ ತಮ್ಮ ವ್ಯಕ್ತಿತ್ವ ಎಂಥದ್ದು ಅನ್ನುವುದನ್ನು ನಿರೂಪಿಸಿದ್ದರು.

ಕನ್ನಡ ಪ್ರೀತಿ, ಶಿಕ್ಷಣ ಮಾಧ್ಯಮ ಮತ್ತು ತೇಜಸ್ವಿ

“ಕನ್ನಡದಲ್ಲಿ ಏನೂ ಇಲ್ಲ, ಇರುವುದೆಲ್ಲ ಬೂಸ ಎನ್ನುವವರೂ, ಕನ್ನಡದಲ್ಲಿ ಸರ್ವಸಮಸ್ತವೂ ಇದೆ ಎನ್ನುವವರೂ ಕೊಂಚ ವಿವೇಕ ತೋರಿ ಮೌನ ವಹಿಸಿದರೆ, ನಮ್ಮ ಮುಂದಿರುವ ಆಗಾಧ ರಚನಾತ್ಮಕ ಜವಾಬ್ದಾರಿಗಳನ್ನು ನಿರ್ವಹಿಸಲು ತುಂಬಾ ಅನುಕೂಲವಾಗುತ್ತದೆ. ಕನ್ನಡ ಭಾಷೆಯ ಏಳಿಗೆಗೂ ಅಪಾರ ಸಹಾಯವಾಗುತ್ತದೆ” ಅನ್ನುವುದು ತೇಜಸ್ವಿ ಅವರ ನಿಷ್ಠುರ ನಿಲುವಾಗಿತ್ತು.

“ಅತಿ ಮಡಿವಂತಿಕೆಯಿಂದ ಭಾಷೆ ಬೆಳೆಯೋದಿಲ್ಲ. ಇಂಗ್ಲಿಷ್ ಭಾಷೆ ಯಾಕೆ ಪಾಪ್ಯುಲರ್ ಆಗ್ತಿದೆ ಅಂದ್ರೆ, ಜಗತ್ತಿನ ಎಲ್ಲ ಭಾಷೆಗಳಿಂದಲೂ ಅದು ಪದಗಳನ್ನ ತನ್ನೊಳಗೆ ಸೇರಿಸ್ಕೋತಾ ಇದೆ ಅದಕ್ಕೆ” ಅನ್ನುವುದು ತೇಜಸ್ವಿ ಅವರ ಚಿಂತನೆಯಾಗಿತ್ತು.

ಇದೇ ವೇಳೆ, ಶಿಕ್ಷಣ ಮಾಧ್ಯಮದ ಬಗ್ಗೆಯೂ ತಮ್ಮ ಅನಿಸಿಕೆ ವ್ಯಕ್ತಪಡಿಸುತ್ತಿದ್ದ ತೇಜಸ್ವಿ, “ಯಾವುದೇ ವಿಚಾರವನ್ನು ಮಾತೃಭಾಷೆಯಲ್ಲಿ ಕಲಿತರಷ್ಟೇ ಮಕ್ಕಳು ಸರಿಯಾಗಿ ಗ್ರಹಿಸುವುದು. ಭಾಷೆ ಕಲಿಯುವುದಕ್ಕೂ ಮತ್ತು ಆ ಭಾಷಾ ಮಾಧ್ಯಮದಲ್ಲಿ ಇತರ ವಿಷಯಗಳನ್ನು ಕಲಿಯುವುದಕ್ಕೂ ವ್ಯತ್ಯಾಸವಿದೆ” ಅನ್ನುತ್ತಿದ್ದರು.

ತೇಜಸ್ವಿ ಮತ್ತು ಪರಿಸರ ಕಾಳಜಿ

“ನನಗೂ ಕಾಡಿಗೂ ಇರುವ ಸಂಬಂಧ, ನನ್ನ ತಂದೆ, ತಾಯಿ, ಹೆಂಡತಿ, ಮಕ್ಕಳ ಜೊತೆ ಇರುವ ಸಂಬಂಧದಂತೆ ವಿವರಿಸಲು ಸಾಧ್ಯವಾಗದಷ್ಟು ನಿಗೂಢ” ಅನ್ನುತ್ತಿದ್ದ ತೇಜಸ್ವಿ ಪರಿಸರವನ್ನು ಅಪಾರವಾಗಿ ಪ್ರೀತಿಸುತ್ತಿದ್ದರು. ನದಿಗಳು ಕಲುಷಿತವಾಗುತ್ತಿರುವುದರ ಬಗ್ಗೆ ಆಕ್ರೋಶ ವ್ಯಕ್ತಪಡಿಸುತ್ತಿದ್ದ ತೇಜಸ್ವಿ, “ನದಿಗಳು ನಮ್ಮೆಲ್ಲ ಮಾನವ ಸಮಾಜ ಮತ್ತು ಸಂಸ್ಕೃತಿಗಳ ಜೀವವಾಹಿನಿಗಳು, ಅವು ಕೊಳಕಾದರೆ, ಬತ್ತಿದರೆ ನಮ್ಮ ಉಸಿರು ಉಡುಗುತ್ತಾ ಬಂದಂತೆ ಅನ್ನುತ್ತಿದ್ದರು”. ನದಿಯನ್ನು ಕಲುಷಿತಗೊಳಿಸುವವರಿಗೆ ಕಠಿಣ ಶಿಕ್ಷೆ ವಿಧಿಸುವ ಕಾನೂನು ರೂಪಿಸಬೇಕು ಎಂದು ಆಗ್ರಹಿಸುತ್ತಿದ್ದರು.

ನಗರ ಜೀವನತೇಜಸ್ವಿ ದೃಷ್ಟಿಕೋನ

ತಂದೆ ಕುವೆಂಪು ಅವರು ಮೈಸೂರಿನಲ್ಲಿ ನೆಲೆಸಿದ್ದ ಕಾರಣದಿಂದಾಗಿ ತೇಜಸ್ವಿ ಅವರಿಗೆ ನಗರದಲ್ಲಿನ ಜೀವನ ಹೊಸದಾಗಲಿ ಅಥವ ಗೊತ್ತಿಲ್ಲದ್ದಾಗಲಿ ಆಗಿರಲಿಲ್ಲ. ಆದರೆ, ತಂದೆಯವರು ಹಳ್ಳಿಯಲ್ಲಿನ ತಮ್ಮ ಬಾಲ್ಯದ ಬಗ್ಗೆ, ಕಾಡಿನ ಬಗ್ಗೆ ಹೇಳುತ್ತಿದ್ದ ಕತೆಗಳನ್ನು ಕೇಳುತ್ತಲೇ ಬೆಳೆದಿದ್ದ ತೇಜಸ್ವಿ ಅವರಿಗೆ, “ನಾನು ನಗರದಿಂದ ದೂರ ಪ್ರಕೃತಿಯ ಜೊತೆಗೇ ಇರಬೇಕು ಅನ್ನಿಸಿತ್ತು”. ಈ ಕಾರಣದಿಂದಾಗಿಯೇ ಮೂಡಿಗೆರೆಗೆ ಹೋಗಿ ನೆಲೆಸಿದ್ದ ತೇಜಸ್ವಿ, ತಮ್ಮ ವ್ಯಕ್ತಿತ್ವ ಮತ್ತು ಬರವಣಿಗೆಯ ತೇಜಸ್ಸಿನಿಂದ ಎಲ್ಲರನ್ನೂ ಆಕರ್ಷಿಸುತ್ತಿದ್ದರು. ಹೀಗಾಗಿ, ಯಾವುದೇ ಕಾರಣಕ್ಕಾಗಿ ಅವರು ಬೇರೆ ಊರುಗಳಿಗೆ ಹೋದಾಗ ಅವರ ಸುತ್ತ ಜನ ಜಾತ್ರೆಯೇ ಸೇರುತ್ತಿತ್ತು. ತಮ್ಮ ಇಬ್ಬರು ಹೆಣ್ಣುಮಕ್ಕಳು ಬೆಂಗಳೂರಿನಲ್ಲಿ ನೆಲೆಸಿದ್ದರೂ ಕೂಡ, ತೇಜಸ್ವಿ ಅವರು ಬೆಂಗಳೂರಿಗೆ ಬರುತ್ತಿದ್ದಿದ್ದು ಅಪರೂಪ. ಹಾಗೊಮ್ಮೆ ಬಂದಾಗ ಇಲ್ಲಿನ ಟ್ರಾಫಿಕ್ ನಲ್ಲಿ ಸಿಕ್ಕಿಬಿದ್ದರೆ, “ಎಂಥ ನರಕ ಇದು, ನನಗೆ ಒಂದೇ ದಿನಕ್ಕೆ ಸಾಕಾಯಿತು. ನೀವೆಲ್ಲ ಇಲ್ಲಿ ಹೇಗಿರ್ತೀರಿ” ಎಂದು ಪ್ರಶ್ನಿಸುತ್ತಿದ್ದ ತೇಜಸ್ವಿ, “ಬೆಂಗಳೂರಿನ ಟ್ರಾಫಿಕ್ ನಲ್ಲಿ ಹತ್ತು ವರ್ಷ ಬದುಕಿದವನಿಗೆ ಇಲ್ಲೇ ನರಕದ ಅನುಭವ ಆಗಿರುತ್ತೆ, ಹಂಗಾಗಿ ಸತ್ತ ಮೇಲೆ ಅವರಿಗೆ ನರಕದಲ್ಲಿ ಶಿಕ್ಷೆನೇ ಇರಲ್ಲ” ಅಂತ ಹೇಳಿ ನಗುತ್ತಿದ್ದರಂತೆ.

ಟಿ.ವಿ ಸಂದರ್ಶನ ಮತ್ತು ತೇಜಸ್ವಿ

ಯಾವುದೇ ಮುಖವಾಡವಿಲ್ಲದ ವ್ಯಕ್ತಿಯಾಗಿದ್ದ ತೇಜಸ್ವಿ ಅವರನ್ನು ಟಿ.ವಿ ಕಾರ್ಯಕ್ರಮಗಳ ಸಂದರ್ಶನದಲ್ಲಿ ಪಾಲ್ಗೊಳ್ಳುವಂತೆ ಒಪ್ಪಿಸುವುದು ತುಂಬಾ ಕಷ್ಟವಾಗಿತ್ತು. ಒಂದ ವೇಳೆ ಹೂಂ ಆಯ್ತು, ಅಂದರೂ ಕೂಡ “ನನಗೆ ಲಿಪ್ ಸ್ಟಿಕ್ ಹಚ್ಚಲು ಬರಬೇಡಿ” ಅನ್ನುತ್ತಿದ್ದ ತೇಜಸ್ವಿ, ಮೇಕಪ್ ಮಾಡಿಸಿಕೊಳ್ಳಲು ಬಿಲ್ ಕುಲ್ ಒಪ್ಪುತ್ತಿರಲಿಲ್ಲ.

ತೇಜಸ್ವಿದೊಡ್ಡವರು ಕಂಡಂತೆ

.ರಾ.ಬೇಂದ್ರೆ

ವರಕವಿ ಬೇಂದ್ರೆಯವರು “ಕುವೆಂಪು ಅವರು ರಚಿಸಿದ ಶ್ರೇಷ್ಠ ಕೃತಿ ತೇಜಸ್ವಿ” ಎಂದು ತುಂಬಾ ಹಿಂದೆಯೇ ಬಣ್ಣಿಸಿದ್ದರು.

ಡಾ. ಕೆ.ಶಿವರಾಮ ಕಾರಂತ

“ನೀವು ಅಧ್ಯಯನ, ಪರಿಶೀಲನೆ, ಓದುಗಳೆಲ್ಲವುದರಿಂದಲೂ ನಿಮ್ಮ ಜೀವ ವೈಜ್ಞಾನಿಕ ತಿಳಿವನ್ನು ಹೆಚ್ಚಿಸಿಕೊಂಡಿರುವುದರಿಂದ ಅನುಭವಪೂರ್ವವಾದ ಸಾಹಿತ್ಯ ಬಲು ಆಕರ್ಷಕವಾಗಿದೆ. ಯಾರ ಮನಸ್ಸನ್ನೂ ಸೆರೆಹಿಡಿಯುವಂಥದ್ದು. ಈ ತೆರನ ಲೇಖನ ನಮ್ಮ ನಾಡಿನ ಕೆಲವರಲ್ಲಿ ಮಾತ್ರ ಕಾಣಿಸೀತು. ಅದನ್ನು ತಿಳಿಯಲು ತೀರ ಆನಂದವಾಗುತ್ತದೆ”.

ಪ್ರೊ. ಎಂ.ಡಿ.ನಂಜುಂಡಸ್ವಾಮಿ

ತೇಜಸ್ವಿ ತನ್ನ ಸುತ್ತಮುತ್ತ ಇರೋ ಸಮಸ್ಯೆಗಳ ಬಗ್ಗೆ ಬಹಳ ಸ್ಪಷ್ಟತೆ ಇರುವಂಥ ಒಬ್ಬ ಲೇಖಕ. ಅದನ್ನು ಹಾಸ್ಯದ ರೂಪದಲ್ಲಿ ಹೇಳಿರಬಹುದು, ಕೆಲವು ಸಾರಿ ಗಂಭೀರವಾಗಿ ಹೇಳಿರಬಹುದು. ಆದ್ರೆ, he is a writer with a total clarity on issues”.
ಪಿ.ಲಂಕೇಶ್

ಕಾರಂತ, ಕುವೆಂಪು ತರುವಾಯ, ಪ್ರಕೃತಿಯನ್ನು ಇಷ್ಟು ಆಳವಾಗಿ ಪ್ರೀತಿಸುವ ಮತ್ತು ಅದಕ್ಕೆ ತಕ್ಕ ಕಾರಣಗಳುಳ್ಳ ವ್ಯಕ್ತಿ ಪೂರ್ಣಚಂದ್ರ ತೇಜಸ್ವಿ ಮಾತ್ರ ಎಂದು ಕಾಣುತ್ತದೆ.

ವೈ.ಎನ್.ಕೆ

ಪೂರ್ಣ ಚಂದ್ರ ತೇಜಸ್ವಿ ಅವರ ಹೆಸರಿನ ಬಗ್ಗೆ ತಮ್ಮದೇ ಆದ ಧಾಟಿಯಲ್ಲಿ ಹೇಳುತ್ತಿದ್ದ ಪ್ರಸಿದ್ಧ ಪತ್ರಕರ್ತ ಮತ್ತು ಅಕ್ಷರಗಳ PUNಡಿತ ವೈ.ಎನ್.ಕೆ, “Kuvempu had not named his son, he had sentenced him. Just!” ಅಂದಿದ್ದರಂತೆ.

ತೇಜಸ್ವಿ ಕುಟುಂಬದ ಪರಿಚಯ

ತೇಜಸ್ವಿ ಅವರ ತಮ್ಮ ಕೋಕಿಲೋದಯ ಚೈತ್ರ (1941), ಎಂ.ಇ ವಿದ್ಯಾಭ್ಯಾಸ ಮಾಡಿರುವ ಇವರು ಡಿಸೈನ್ ಇಂಜಿನಿಯರ್ ಆಗಿದ್ದು, ಆಸ್ಟ್ರೇಲಿಯದ ಮೆಲ್ಬೋರ್ನ್ ನಗದರಲ್ಲಿ ನೆಲೆಸಿದ್ದಾರೆ. ಇವರ ಪತ್ನಿ ಮರ್ಲಿನ್, ಮಗಳು ಸಿಮೋನ್ ಶಿವಾಣಿ.

ತೇಜಸ್ವಿ ಅವರ ಮೊದಲ ತಂಗಿ ದಿವಂಗತ ಇಂದುಕಲಾ (1943-1998). ಇವರು ಎಂ.ಎ ಪದವೀಧರರಾಗಿದ್ದರು. ಇವರ ಪತಿ ಆರ್ಥೋಸರ್ಜನ್ ಡಾ.ಕೆ.ಟಿ.ಸುರೇಂದ್ರ (ಬೆಂಗಳೂರು). ಎರಡನೇ ತಂಗಿ ತಾರಿಣಿ(1945). ಇವರೂ ಕೂಡ ಎಂ.ಎ ಮಾಡಿದ್ದು ಕಾಲೇಜೊಂದರಲ್ಲಿ ಪ್ರಾಧ್ಯಾಪಕಿಯಾಗಿದ್ದರು. ಇವರ ಪತಿ ಡಾ. ಕೆ. ಚಿದಾನಂದ ಗೌಡ. ಇವರು ಬೆಂಗಳೂರಿನ ಪ್ರತಿಷ್ಠಿತ UVCEನಲ್ಲಿ ಬಿ.ಇ ಮತ್ತು ಬರೋಡಾದ ಮಹರಾಜ ಸಯ್ಯಾಜಿ ರಾವ್ ವಿವಿಯಿಂದ ಎಂ.ಇ ಪದವಿ ಪಡೆದಿದ್ದಾರೆ. ಮೈಸೂರಿನ ಜಯಚಾಮರಾಜೇಂದ್ರ ಇಂಜಿನಿಯರಿಂಗ್ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದರು, ಬಳಿಕ ಕುವೆಂಪು ವಿ.ವಿ ಉಪಕುಲಪತಿಯಾಗಿದ್ದರು.

ತೇಜಸ್ವಿ ಮತ್ತು ರಾಜೇಶ್ವರಿ ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ.  ಮೊದಲನೆಯವರು ಸುಸ್ಮಿತಾ(1971), ಇಂಜಿನಿಯರಿಂಗ್ ಪದವೀಧರೆ. ಇವರ ಪತಿ ದೀಪಕ್.  ಎರಡನೆಯ ಮಗಳು ಈಶಾನ್ಯೆ(1973). ಇವರೂ ಕೂಡ ಬಿ.ಇ ಮಾಡಿದ್ದಾರೆ, ಇವರ ಪತಿ ಜ್ಞಾನೇಶ್. ತೇಜಸ್ವಿ ಅವರ ಇಬ್ಬರೂ ಮಕ್ಕಳು ಬೆಂಗಳೂರಿನಲ್ಲೇ ನೆಲೆಸಿದ್ದಾರೆ. ತೇಜಸ್ವಿ ಅವರ ಪತ್ನಿ ರಾಜೇಶ್ವರಿ ಅವರು ಮೂಡಿಗೆರೆಯ “ನಿರುತ್ತರ”ದಲ್ಲೇ ವಾಸವಾಗಿದ್ದಾರೆ. ತೇಜಸ್ವಿ ಅವರ ಬಗೆಗಿನ ಪ್ರೀತಿಯಿಂದ, ಆಸೆಯಿಂದ, ಆಸಕ್ತಿಯಿಂದ ಅಲ್ಲಿಗೆ ಬರುವ ಎಲ್ಲರನ್ನೂ ಸತ್ಕರಿಸುತ್ತಾರೆ. ಕೋಕಿಲೋದಯ ಚೈತ್ರ ಅವರು 2019ರ ಫೆಬ್ರವರಿಯಲ್ಲಿ ಭಾರತಕ್ಕೆ ಭೇಟಿ ನೀಡಿದ್ದರು.

ತೇಲಿಹೋದರು ತೇಜಸ್ವಿ

‘ಎಲ್ಲ ಉತ್ತಮ ಸಂಗತಿಗಳೂ ಒಂದುದಿನ ಕೊನೆಯಾಗಲೇಬೇಕು’ ಅನ್ನುವ ಮಾತನ್ನು ಸತ್ಯಗೊಳಿಸುವುದಕ್ಕೋ ಏನೋ ಎಂಬಂತೆ, ಪೂರ್ಣಚಂದ್ರ ತೇಜಸ್ವಿ ಅವರು 2007ರ ಏಪ್ರಿಲ್ 5ರ ಮಧ್ಯಾಹ್ನ, ಮೂಡಿಗೆರೆಯ ತಮ್ಮ ನಿವಾಸ “ನಿರುತ್ತರ”ದಲ್ಲಿ  ಹೃದಯಾಘಾತಕ್ಕೊಳಗಾಗಿ ಇದ್ದಕ್ಕಿದ್ದಂತೆ ನಮ್ಮನ್ನು ಅಗಲಿ ಹೋಗಿಯೇಬಿಟ್ಟರು.

ಯಾರ ಜಪ್ತಿಗೂ ಸಿಗದ ತೇಜಸ್ವಿ

ಕನ್ನಡದ ಬಹುಮುಖ್ಯ ಗದ್ಯ ಲೇಖಕರಲ್ಲಿ ಒಬ್ಬರಾಗಿದ್ದ ತೇಜಸ್ವಿ ಅವರದ್ದು “ಹೀಗೆಂದು ಹಾಗೆಂದು”  ವಿವರಿಸಲು ಸಾಧ್ಯವೇ ಆಗದಂಥ ವಿಶಿಷ್ಟ ವ್ಯಕ್ತಿತ್ವ. ಸಾಹಿತ್ಯ ಕ್ಷೇತ್ರದಲ್ಲಿ, ಈವರೆಗೆ ರೂಪಿತವಾಗಿರುವ ಯಾವುದೇ ನಿರ್ದಿಷ್ಟತೆಗನುಗುಣವಾಗಿ “ಲೇಬಲ್”  ಮಾಡಲಾಗದಂಥ ಬಹುಮುಖ ಪ್ರತಿಭೆ. “ಎಲ್ಲರೂ ದೊಡ್ಡ ಮನುಷ್ಯರೆಂದು ಕರೆದರೆಂದು, ನಾವು ಹಾಗೆ ನಟಿಸಲು ತೊಡಗಬಾರದು” ಅನ್ನುತ್ತಿದ್ದ ತೇಜಸ್ವಿ, ಅನಗತ್ಯ ಆಚರಣೆ ಮತ್ತು ಶಿಷ್ಟಾಚಾರಗಳನ್ನು ಸಹಿಸುತ್ತಿರಲಿಲ್ಲ. ಅವರು, ಎಂದೂ ಕೂಡ ತಮ್ಮ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರಲಿಲ್ಲ. ಆದರೆ, ಅವರ 83ನೇ ಜನ್ಮದಿನದ ಈ ಸಂದರ್ಭದಲ್ಲಿ, ತೇಜಸ್ವಿ ಅವರ ಜೀವನ, ಚಿಂತನೆಗಳು ಮತ್ತು ವೈವಿಧ್ಯಮಯ ಸಾಹಿತ್ಯ ಸೃಷ್ಟಿಯನ್ನು ಹೊಸ ಪೀಳಿಗೆಯವರಿಗೆ ಪರಿಚಯಿಸುವುದು “ಮಾಧ್ಯಮ ಅನೇಕ”ದ ಆಶಯ. ಇದರೊಂದಿಗೆ, ತೇಜಸ್ವಿ ಅವರು ಇವತ್ತಿಗೂ ಎಷ್ಟೊಂದು ಪ್ರಸ್ತುತ ಅನ್ನುವುದನ್ನು ಮತ್ತೊಮ್ಮೆ ನಿರೂಪಿಸುವುದು ನಮ್ಮ ಉದ್ದೇಶ. ಹೀಗಾಗಿ ತಮ್ಮ ಬದುಕು, ಬರಹ ಮತ್ತು ಚಿಂತನೆಗಳನ್ನು ಎಲ್ಲರ ಮುಂದಿಡುವ ನಮ್ಮ ಈ ಪ್ರಯತ್ನವನ್ನು ಪೂರ್ಣಚಂದ್ರ ತೇಜಸ್ವಿಯವರು ಒಪ್ಪುತ್ತಾರೆ ಅನ್ನುವುದು “ಮಾಧ್ಯಮ ಅನೇಕ”ದ ವಿಶ್ವಾಸ.