ಚಿತ್ರ ರಸಿಕರು, ಇತಿಹಾಸಕಾರರು, ಸಿನೆಮಾ ಬರಹಗಾರರು ಮತ್ತು ಸಿನೆಮಾಗಳನ್ನು ಅಧ್ಯಯನ ಮಾಡುವವರಿಗೂ ಒಂದು ಉತ್ತಮ ಮಾಹಿತಿಯ ಆಕರವಾಗಬಲ್ಲ “ಚಿತ್ರಪಥ Cinema Archives ಪೋರ್ಟಲ್” ಇದೀಗ ಲೋಕಾರ್ಪಣೆಯಾಗುತ್ತಿದೆ.

ಈ “ಚಿತ್ರಪಥ Cinema Archives ವೆಬ್ ಪೋರ್ಟಲ್” ಕನ್ನಡ ಚಿತ್ರರಂಗ ಮತ್ತು ಸಿನೆಮಾಗಳಿಗೆ ಸಂಬಂಧಿಸಿದ ಫೋಟೋಗಳು, ಸಿನೆಮಾ ಚಿತ್ರೀಕರಣ ಸಂದರ್ಭದ ಅಪರೂಪದ Clippings, ಚಿತ್ರರಂಗಕ್ಕೆ ಸಂಬಂಧವಾಗಿ ನಡೆದ ಕಾರ್ಯಕ್ರಮಗಳ ಫೋಟೋಗಳು, ಚಿತ್ರಕಲಾವಿದರ ಭಾವಚಿತ್ರಗಳು, ಕಲಾವಿದರ ಕುಟುಂಬಗಳ ವೈಯಕ್ತಿಕ ಸಮಾರಂಭಗಳ ಚಿತ್ರಗಳು, ದೃಶ್ಯಾವಳಿ ಹೀಗೆ ಅಪರೂಪದ, ಕುತೂಹಲಕರ ಮತ್ತು ಮಹತ್ವಪೂರ್ಣವೂ ಆದ ದಾಖಲೆಗಳ ಸಂಗ್ರಹ. ಅಷ್ಟೇ ಅಲ್ಲ ಸಿನೆಮಾಗಳ ಬಗ್ಗೆ ಆಸಕ್ತಿ ಇರುವವರು ಯಾರೇ ಕೂಡ ಚಿತ್ರಪಥಕ್ಕಾಗಿ ಲೇಖನಗಳನ್ನು ಬರೆಯಲು ಮತ್ತು ತಮ್ಮಲ್ಲಿರುವ ಅಪರೂಪದ ಫೋಟೊಗಳನ್ನು ಚಿತ್ರಪಥದೊಂದಿಗೆ ಹಂಚಿಕೊಳ್ಳುವುದಕ್ಕೂ ಅವಕಾಶವಿದೆ.

ಈ ಪೋರ್ಟಲ್ ನ ರೂವಾರಿ ಶಶಿಧರ ಚಿತ್ರದುರ್ಗ. ಸಿನೆಮಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಒಂದು ಮಹತ್ವದ ಹೆಜ್ಜೆಯಾಗಿರುವ ಚಿತ್ರಪಥದ ಪರಿಕಲ್ಪನೆಯನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಶಶಿಧರ್ ಅವರ ಕೊಡುಗೆ ಪ್ರಮುಖವಾಗಿದೆ. ಕನ್ನಡ ಚಿತ್ರರಂಗದ ಹಿರಿಯ ಸ್ಥಿರ ಚಿತ್ರ ಛಾಯಾಗ್ರಾಹಕರಾದ ಭವಾನಿ ಲಕ್ಷ್ಮೀನಾರಾಯಣ ಮತ್ತು ಪ್ರಗತಿ ಅಶ್ವತ್ಥ ನಾರಾಯಣ ಅವರು ಸೆರೆಹಿಡಿದ ಛಾಯಾಚಿತ್ರಗಳು ‘ಚಿತ್ರಪಥ’ದಲ್ಲಿ ಬಳಕೆಯಾಗುತ್ತವೆ.

ಇದೇ ಮಾರ್ಚ್ 6ರ ಶನಿವಾರ ಬೆಳಗ್ಗೆ Cinema Archives ವೆಬ್ ಪೋರ್ಟಲ್ ಚಿತ್ರಪಥ https://chithrapatha.com ಅನ್ನು ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ ಗಿರೀಶ್ ಕಾಸರವಳ್ಳಿ ಅವರು ಲೋಕಾರ್ಪಣೆ ಮಾಡಲಿದ್ದಾರೆ.

ಶಶಿಧರ್ ಚಿತ್ರದುರ್ಗ ಅವರ ಈ ಪ್ರಯತ್ನಕ್ಕೆ ಸಂಪೂರ್ಣ ಯಶಸ್ಸು ದೊರೆಯಲಿ ಎಂದು ಆಶಿಸುವ “ಮಾಧ್ಯಮ ಅನೇಕ”….ಚಿತ್ರಪಥ Webportal ಸಿನೆಮಾ ಪ್ರೇಮಿಗಳಿಗೆ ಪ್ರಮುಖ ಮಾಹಿತಿಕೇಂದ್ರವಾಗಲಿ, ಎಲ್ಲರೂ ಸಿನೆಮಾ ಮಾಧ್ಯಮವನ್ನು ಅರಿತುಕೊಳ್ಳಲು ಹಾಗೂ ಆ ಮೂಲಕ ಸಿನೆಮಾ ಸಂಸ್ಕೃತಿಯನ್ನು ಮತ್ತಷ್ಟು ವಿಸ್ತಾರವಾಗಿ ಬೆಳೆಸಲು ನೆರವಾಗಲಿ ಎಂದು ಹಾರೈಸುತ್ತದೆ.