‘ಅನಿಸುತಿದೆ ಯಾಕೋ ಇಂದು ನೀನೇನೆ ನನ್ನವಳೆಂದು, ಮಾಯದ ಲೋಕದಿಂದ ನನಗಾಗೆ ಬಂದವಳೆಂದು’, ಈ ಸಾಲುಗಳನ್ನು ಕೇಳದೇ ಇರುವ ಕಿವಿಗಳೇ ಇಲ್ಲವೇನೋ ಅನ್ನುವಷ್ಟರ ಮಟ್ಟಿಗೆ ಜನಪ್ರಿಯವಾದ ಹಾಡು ಇದು. ಜಯಂತ್ ಕಾಯ್ಕಿಣಿ ಅವರು ಬರೆದು, ಮನೋಮೂರ್ತಿ ಅವರು ಸಂಗೀತ ನೀಡಿರುವ ಈ ಸುಂದರ ಹಾಡನ್ನು, ಅಷ್ಟೇ ಸುಂದರವಾಗಿ ಹಾಡಿ, ಕನ್ನಡಿಗರು ಮಾತ್ರವಲ್ಲ, ಇತರೆ ಭಾಷೆಯ ಜನರೂ ಕೇಳಿ ಆನಂದಿಸುವಂತೆ ಮಾಡಿದವರೇ Super Singer ಸೋನು ನಿಗಮ್.

ಇಷ್ಟುಮಾತ್ರವಲ್ಲ, ಕಳೆದ ಎರಡು ದಶಕಗಳಿಗೂ ಹೆಚ್ಚು ಸಮಯದಿಂದ ಕನ್ನಡಿಗರಿಗಾಗಿ ಹತ್ತಾರು ಹಾಡುಗಳನ್ನು ಹಾಡಿರುವ ಇವರು, ಕನ್ನಡ ಅನ್ನೋ ಶಬ್ದ ಕೇಳಿದರೆ ಸಾಕು, ‘ಯಾವ ಜನ್ಮದ ಮೈತ್ರಿ ಈ ಜನ್ಮದಲಿ ಬಂದು, ನಮ್ಮಿಬ್ಬರನು ಮತ್ತೆ ಬಂಧಿಸಿಹುದೋ ಕಾಣೆ’ ಅಂತ ಹಾಡೋಕ್ಕೆ ಶುರು ಮಾಡಿಬಿಡ್ತಾರೆ. ‘ನಾನು, ಹಿಂದಿನ ಜನ್ಮದಲ್ಲಿ ಕನ್ನಡಿಗನಾಗಿದ್ದಿರಬಹುದು’ ಎಂದು ಹೇಳುವ ಮೂಲಕ, ಕನ್ನಡ ಭಾಷೆಯ ಬಗ್ಗೆ ತಮಗಿರುವ ಪ್ರೀತಿ ತೋರ್ಪಡಿಸುತ್ತಾರೆ.

ಜುಲೈ 30, ಸೋನು ನಿಗಮ್ ಹುಟ್ಟಿದ ದಿನ. ಸೋನು ನಿಗಮ್ ಅವರ ಈವರೆಗಿನ ಜೀವನ, ಸಾಧನೆ ಮತ್ತು ವಿವಾದಗಳೆಲ್ಲವನ್ನೂ ಒಳಗೊಂಡ ವಿಶೇಷ ವ್ಯಕ್ತಿ ಚಿತ್ರ ನಿಮಗಾಗಿ, ಎಲ್ಲ ಕನ್ನಡಿಗರಿಗಾಗಿ ಇಲ್ಲಿದೆ.

ಸೋನು ನಿಗಮ್ ಬಾಲ್ಯದ ದಿನಗಳು

ಸೋನು ನಿಗಮ್ ಹುಟ್ಟಿದ್ದು 1973 ನೇ ಇಸವಿ ಜೂನ್ 30 ರಂದು. ಹರಿಯಾಣ ರಾಜ್ಯದ ಫರೀದಾಬಾದ್ ಸೋನು ಹುಟ್ಟೂರು. ಈ ಊರು, ದೇಶದ ರಾಜಧಾನಿ ದೆಹಲಿಗೆ ಕೇವಲ 30 ಕಿ.ಮೀ ದೂರದಲ್ಲಿದೆ. ಸೋನು ತಂದೆ ಆಗಮ್ ಕುಮಾರ್ ನಿಗಮ್, ತಾಯಿ ಶೋಭಾ. ಸೋನುಗೆ ಮೀನಾಲ್ ಮತ್ತು ನಿಖಿತಾ ಎಂಬ ಸೋದರಿಯರೂ ಇದ್ದಾರೆ. ದೆಹಲಿಯ J D Titlor ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ ಸೋನು, ದೆಹಲಿ ವಿ.ವಿಯಿಂದ ಪದವಿ ಪಡೆದಿದ್ದಾರೆ.

ಸೋನು ತಂದೆ ಆಗಮ್ ಕುಮಾರ್, ಉತ್ತರ ಪ್ರದೇಶದ ಆಗ್ರಾ ಮೂಲದವರು. ಬಾಲಿವುಡ್ ನಲ್ಲೂ ಹಾಡಿರುವ ಆಗಮ್ ಕುಮಾರ್, stage showಗಳಲ್ಲಿ ಹಾಡುವುದನ್ನೇ ವೃತ್ತಿಯಾಗಿ ಮಾಡಿಕೊಂಡವರು. ತಾವು, ಯಾವುದೇ ಕಾರ್ಯಕ್ರಮಕ್ಕೆ ಹೋದರೂ ಪುಟಾಣಿ ಸೋನುವನ್ನು ಜೊತೆಯಲ್ಲಿ ಕರೆದೊಯ್ಯುತ್ತಿದ್ದರು. ಅಪ್ಪ ಹಾಡುವುದನ್ನು ನೋಡುತ್ತಿದ್ದ ಬಾಲಕ ಸೋನುವಿನಲ್ಲೂ ಹಾಡುವ ಆಸೆ ಹುಟ್ಟಿತು. ಕೇವಲ 4 ವರ್ಷ ವಯಸ್ಸಿನಲ್ಲೇ ನಾನು ಹಾಡಲೇಬೇಕು ಎಂದು ಹಠ ಹಿಡಿದ ಸೋನುವನ್ನು ವೇದಿಕೆ ಹತ್ತಿಸಲಾಯಿತು. ವೇದಿಕೆಯಲ್ಲಿ ನಿಂತು Mike ಹಿಡಿದ ಪುಟ್ಟ ಬಾಲಕ, ‘ಕ್ಯಾ ಹುವಾ ತೇರ ವಾದ’ ಅನ್ನುತ್ತಿದ್ದಾಗಲೇ ಚಪ್ಪಾಳೆಗಳ ಸುರಿಮಳೆ. ಇದು, ‘ಹಮ್ ಕಿಸೀಸೆ ಕಮ್ ನಹಿ’ ಸಿನೆಮಾದ ಸೂಪರ್ ಹಿಟ್ ಹಾಡು. ಇದನ್ನು ತಮ್ಮ ಅದ್ಭುತ ಕಂಠದಿಂದ ಹಾಡಿದ್ದವರು, ಅಮರ ಗಾಯಕ ಮೊಹಮದ್ ರಫಿ ಅವರು.

ಈ ಹಾಡಿನಿಂದ ತಮ್ಮ ಸಂಗೀತ ಯಾತ್ರೆ ಆರಂಭಿಸಿದ ಸೋನು, ಅಲ್ಲಿಂದಾಚೆಗಿನ ನಲವತ್ತು ವರ್ಷಗಳನ್ನು ದಾಟಿ ಮುನ್ನಡೆದು ದೇಶ ವಿದೇಶಗಳ ಲಕ್ಷಾಂತರ ಕೇಳುಗರ ಮನಸ್ಸನ್ನು ಸೂರೆಗೊಂಡಿದ್ದಾರೆ. ಆದರೆ, ಅಂದು ನಡೆದಿದ್ದು ಕೇವಲ ಆರಂಭ. ಸೋನು ನಿಗಮ್, ಓರ್ವ ವೃತ್ತಿಪರ ಹಾಡುಗಾರನಾಗಿ ರೂಪುಗೊಳ್ಳವುದರ ಹಿಂದೆ, ಸತತ ಪ್ರಯತ್ನ ಮತ್ತು ಅಪಾರ ಪರಿಶ್ರಮವಿದೆ.

ಸೋನು ಸಂಗೀತಾಭ್ಯಾಸ

ಬಾಲ್ಯದಲ್ಲಿ, ಅಪ್ಪನಿಂದಲೇ ಸಂಗೀತದ ಆರಂಭಿಕ ಪಾಠಗಳನ್ನು ಕಲಿತ ಸೋನು, ಆ ಬಳಿಕ ದೆಹಲಿಯಲ್ಲಿ ನೆಲೆಸಿದ್ದ ಉಸ್ತಾದ್ ಮಹಾ ಕಂಜಾರ್ ನವೀದ್ ಅವರ ಬಳಿ ಶಾಸ್ತ್ರೀಯ ಸಂಗೀತದ ತರಬೇತಿ ಪಡೆದರು. ತಮ್ಮ ವಯಸ್ಸಿನ ಬೇರೆ ಎಲ್ಲ ಬಾಲಕರಿಗಿದ್ದ ಆಟೋಟಗಳ ಆಸಕ್ತಿಯನ್ನು ಬದಿಗಿರಿಸಿದ ಸೋನು, ಸಂಗೀತಾಭ್ಯಾಸವನ್ನೇ ತಮ್ಮ ಉಸಿರಾಗಿರಿಸಿಕೊಂಡರು. ಹಲವಾರು ಸ್ಥಳೀಯ ಮತ್ತು ರಾಷ್ಟ್ರೀಯ ಸಂಗೀತ ಸ್ಪರ್ಧೆಗಳಲ್ಲಿ ಪಾಲ್ಗೊಂಡ ಸೋನು ನಿಗಮ್, ಬಹುತೇಕ ಎಲ್ಲದರಲ್ಲೂ ಬಹುಮಾನ ಗೆದ್ದುಕೊಂಡರು. ಆ ದಿನಗಳಲ್ಲೇ, ತಾನು ಬಾಲಿವುಡ್ ನಲ್ಲಿ ಓರ್ವ ಹಿನ್ನೆಲೆ ಗಾಯಕನಾಗಿ ಹೆಸರು ಮಾಡಲು ಸಾಧ್ಯ ಎಂದು ಸೋನು ನಿಗಮ್ ಗೆ ಅನ್ನಿಸಲು ಶುರುವಾಗಿದ್ದು. ತನ್ನ ಕನಸುಗಳಿಗೆ ರೆಕ್ಕೆ ಕಟ್ಟಿಕೊಂಡ ಸೋನು, ಫರೀದಾಬಾದ್ ನಿಂದ ಹಾರಿ ಮುಂಬೈ ಮಹಾನಗರಕ್ಕೆ ಬಂದರು.

ಮುಂಬೈನಗರಿಯಲ್ಲಿ ಸೋನು ನಿಗಮ್

ಕೇವಲ 18ರ ವಯಸ್ಸಿನಲ್ಲೇ ಮುಂಬೈಗೆ ಬಂದ ಸೋನು, ಸುಪ್ರಸಿದ್ಧ ಹಾಡುಗಾರ ಉಸ್ತಾದ್ ಗುಲಾಮ್ ಮುಸ್ತಫ ಖಾನ್ ಅವರ ಬಳಿ ಸಂಗೀತಾಭ್ಯಾಸವನ್ನು ಮುಂದುವರೆಸಿದರು. ಅದೇವೇಳೆ, ಹಾಡುವ ಅವಕಾಶಗಳಿಗಾಗಿ ಹುಡುಕಾಟ ನಡೆಸ ತೊಡಗಿದರು. ಸೋನುಗೆ 1990ರಲ್ಲಿ ಮೊದಲ ಬಾರಿಗೆ ಹಿನ್ನೆಲೆ ಗಾಯಕನಾಗುವ ಅವಕಾಶ ಸಿಕ್ಕಿತು. ಹಿಂದಿ ಸಿನೆಮಾ ಜಾನಮ್ ಗಾಗಿ ಸೋನು ಮೊದಲ ಹಾಡು ರೆಕಾರ್ಡ್ ಆಯಿತು. ಆದರೆ, ‘ಪ್ರಥಮ ಚುಂಬನೇ ದಂತ ಭಗ್ನಮ್’ ಅನ್ನುವ ಹಾಗೆ ಸೋನು ಹಾಡಿದ ಆ ಸಿನೆಮಾ ತೆರೆ ಕಾಣದೆ ಪೆಟ್ಟಿಗೆಯಲ್ಲೇ ಉಳಿಯಿತು. ಆ ಬಳಿಕ, T-series ಮಾಲೀಕ ದಿವಂಗತ ಗುಲ್ಷನ್ ಕುಮಾರ್, ತಮ್ಮ ಕಂಪನಿಗಾಗಿ ಹಾಡಲು ಸೋನು ಜೊತೆ ಒಪ್ಪಂದ ಮಾಡಿಕೊಂಡರು. ಆದರೆ, ಮೊದ ಮೊದಲ ದಿನಗಳಲ್ಲಿ ಇವರು ಹಾಡಿದ ಬಹುತೇಕ ಹಾಡುಗಳನ್ನು ತಿರಸ್ಕರಿಸಿ, ಅದಾಗಲೇ ಪ್ರಖ್ಯಾತರಾಗಿದ್ದ ಗಾಯಕರಿಂದ ಮತ್ತೆ ಹಾಡಿಸಲಾಯಿತು.

ಇಷ್ಟಾದರೂ ಧೈರ್ಯಗೆಡದ ಸೋನುಗೆ ಬ್ರೇಕ್ ಕೊಟ್ಟಿದ್ದು 1993ರಲ್ಲಿ ತೆರೆಕಂಡ ‘Aaja Meri Jaan’ ಸಿನೆಮಾದಲ್ಲಿನ ‘O Aasmaan Wale  Zameen Par Utar Ke Dekh’ ಹಾಡುಸಾಕಷ್ಟು ಜನಪ್ರಿಯವಾದ ಈ ಹಾಡು, ಬಾಲಿವುಡ್ ಸಿನೆಮಾ ರಂಗದ ಹಿನ್ನೆಲೆ ಗಾಯನ ಕ್ಷೇತ್ರಕ್ಕೆ ಸೋನು ನಿಗಮ್ ಎಂಟ್ರಿಯನ್ನು ಪ್ರಕಟಿಸಿತ್ತು. ಬಾಲಿವುಡ್ ಸಂಗೀತ ಕೋವಿದರು ಎದ್ದು ಕುಂತು, ಈ ಯುವ ಪ್ರತಿಭೆಯ ಕಡೆ ನೋಡತೊಡಗಿದರು. ಆದರೆ, ಇದಾದ ಬಳಿಕವೂ ಹೆಚ್ಚಿನ ಅವಕಾಶಗಳೇನೂ ಸೋನು ನಿಗಮ್ ಕಡೆಗೆ ಹರಿದು ಬರಲಿಲ್ಲ. ಹೀಗಾಗಿ, ಮುಂಬೈನಲ್ಲಿನ ಆ ದಿನಗಳು ಇವರ ಪಾಲಿಗೆ, ಕಷ್ಟದ ದಿನಗಳೇ ಆಗಿದ್ದವು.

ದೊಡ್ಡ ಅವಕಾಶಗಳು ಸಿಗದೇ ಇದ್ದ, ಆ ಸಮಯದಲ್ಲಿ ರೇಡಿಯೊ ಜಾಹೀರಾತುಗಳಿಗೆ ಧ್ವನಿ ನೀಡುತ್ತಿದ್ದ ಸೋನು ನಿಗಮ್, ಅದರಿಂದಲೇ ಬದುಕು ನಡೆಸುತ್ತಿದ್ದರು. ಆ ನಡುವೆ,

‘Shabnam’ (1993), ‘Aag’ (1994), ‘Khuddar’ (1994), ‘Hulchul’ (1994), ‘Stuntman’ (1994) ಮತ್ತು ‘Ram Jaane’ (1995) ಇತ್ಯಾದಿ ಸಿನೆಮಾಗಳಿಗಾಗಿ ಸೋನು ಹಾಡಿದರಾದರೂ, ಅವು ಯಾವೂ ಕೂಡ ನೆನಪಿನಲ್ಲಿಟ್ಟುಕೊಳ್ಳಲು ಲಾಯಕ್ಕಾಗಿದ್ದ ಹಾಡುಗಳಾಗಿರಲಿಲ್ಲ. 1995ರಲ್ಲಿ ತೆರೆಕಂಡ Bewafa Sanam ಚಿತ್ರದ ‘Achchha Sila Diya Tune Mere Pyar Ka’ ಅನ್ನುವ ಹಾಡು, ಸಿಕ್ಕಾಪಟ್ಟೆ ಜನಪ್ರಿಯವಾಯಿತು.

ಸೋನು ನಿಗಮ್ ಮಿಂಚಿನ ಓಟ

ಆ ಬಳಿಕ, 1997ರಲ್ಲಿ ತೆರೆಗೆ ಬಂದ ‘Border’ ಸಿನೆಮಾದ ‘Sandese Aate Hain’ ಹಾಡು ಸೋನು ಜನಪ್ರಿಯತೆ ಹೆಚ್ಚಿಸಿದ್ದರ ಜೊತೆಗೆ, Zee Cine Award ಕೂಡ ತಂದುಕೊಟ್ಟಿತ್ತು. ಆ ನಂತರ ‘Pardes’ (1999) ಚಿತ್ರದ ‘YehDil’ ಹಾಡು, ಸೋನು ನಿಗಮ್ ವೃತ್ತಿ ಜೀವನ ಗಟ್ಟಿಯಾಗಲು ನೆರವಾಯಿತು. 2004ರ ‘Kal Ho Na Ho’ ಸಿನೆಮಾದ Title Song ಅಪಾರವಾಗಿ ಜನಪ್ರಿಯವಾಯಿತು. ಅಲ್ಲಿಂದಾಚೆಗೆ ಅವಕಾಶಗಳ ಸಂಖ್ಯೆ ಹೆಚ್ಚಾದಂತೆ, ಸೋನು ನಿಗಮ್ ಗೆ ಬಾಲಿವುಡ್ ನ most experimental singer ಎಂಬ ವಿಶೇಷಣವೂ ಸೇರಿಕೊಂಡಿತು.

‘Sathiyaa’ಸಿನೆಮಾಗಾಗಿ ಎ.ಆರ್.ರಹಮಾನ್ ನಿರ್ದೇಶನದಲ್ಲಿ ಹಾಡಿದ ಹಾಡುಗಳು, ಆ ಬಳಿಕ 2001ರಲ್ಲಿ ‘Dil Chahta Hai’ಸಿನೆಮಾಗಾಗಿ ಹಾಡಿದ ‘Tanhayee’ ಹಾಡು, ಸೋನು ನಿಗಮ್ ಅವರ amazing range  ಮತ್ತು versatilityಗೆ ಸಾಕ್ಷಿಯಾಯಿತು. ‘Kabhi Khushi Kabhi Gham’ ಸಿನೆಮಾದ ‘Suraj Hua Madhyam’  ಹಾಡು,  ‘Paheli’ ಸಿನೆಮಾದ ಭಾವಪೂರ್ಣ ‘Dheere Jalna’   ಹಾಡುಗಳು, ಸೋನು ನಿಗಮ್ ಗೆ ಮತ್ತೊಮ್ಮೆ Best Male Playback Singer ಪ್ರಶಸ್ತಿ ತಂದುಕೊಟ್ಟವು.

ಸೋನು ನಿಗಮ್ ವೃತ್ತಿ ಜೀವನದ Golden days

2010 ಮತ್ತು 2011ನೇ ವರ್ಷಗಳು ಸೋನು ನಿಗಮ್ ವೃತ್ತಿ ಜೀವನದ ಉತ್ತುಂಗದ ಸಮಯ. ಆ ದಿನಗಳಲ್ಲಿ, ಬಾಲಿವುಡ್ ನಲ್ಲಿ ತಯಾರಾಗುತ್ತಿದ್ದ ಒಟ್ಟಾರೆ ಹಾಡುಗಳಲ್ಲಿ ಅರ್ಧದಷ್ಟು ಹಾಡುಗಳು, ಸೋನು ನಿಗಮ್ ಅವರ ಕಂಠದಿಂದಲೇ ಹೊರಬರುತ್ತಿದ್ದವು. ಹೀಗಾಗಿ, ಆ ದಿನಗಳಲ್ಲಿ ಸೋನು ನಿಗಮ್, ಅತ್ಯಂತ ಹೆಚ್ಚಿನ ಸಂಭಾವನೆ ಪಡೆಯುವ male playback singer ಆಗಿದ್ದರು. ಭಾರತ ರತ್ನ ಲತಾ ಮಂಗೇಶ್ಕರ್ ಮತ್ತು ಪ್ರಖ್ಯಾತ ಸಂಗೀತಗಾರ ಖಯ್ಯಾಮ್ ಅವರಂಥ ದಿಗ್ಗಜರ ಜೊತೆಗೂ ಕೆಲಸ ಮಾಡುವ ಅವಕಾಶ ಸೋನು ನಿಗಮ್ ಗೆ ಸಿಕ್ಕಿತ್ತು.  ಸೋನು ಹಾಡುವ ಶೈಲಿ, ಮಹಾನ್ ಗಾಯಕ ಮೊಹಮದ್ ರಫಿ ಅವರ ಗಾಯನದ ಶೈಲಿಯನ್ನು ಹೋಲುವಂತೆ ಕಾಣುತ್ತದೆ, ಹೀಗಾಗಿ ಸೋನು ಅವರನ್ನು Modern Rafi ಎಂದೂ ಕರೆಯಲಾಗುತ್ತದೆ.

Actor ಆಗಿ ಸೋನು ನಿಗಮ್

ಸುಮಧುರ ಧ್ವನಿ ಹೊಂದಿರುವ ಸೋನು ನಿಗಮ್, ಸ್ಫುರದ್ರೂಪಿಯೂ ಹೌದು. 1983ರಲ್ಲಿ ತನ್ನ 10ನೇ ವಯಸ್ಸಿನಲ್ಲಿದ್ದಾಗ Betaab ಸಿನೆಮಾದಲ್ಲಿ, ಬಾಲಕ ಸನ್ನಿ ಡಿಯೋಲ್ ಪಾತ್ರ ಮಾಡಿದ್ದ ಸೋನು ನಿಗಮ್, ಮತ್ತೆ ಬಣ್ಣ ಹಚ್ಚಿದ್ದು 2002ರಲ್ಲಿ ಬಿಡುಗಡೆಯಾದ. ‘Jaani Dushman: Ek Anokhi Kahani’ ಸಿನೆಮಾದಲ್ಲಿ. 2003ರಲ್ಲಿ  ‘Kash Aap Hamare Hote’ ಸಿನೆಮಾದಲ್ಲೂ ನಟಿಸಿದ ಸೋನು, 2004ರಲ್ಲಿ ಬಿಡುಗಡೆಯಾದ ‘Love in Nepal’ ಸಿನೆಮಾದಲ್ಲಿ ಹೀರೋ ಆಗಿ ಕಾಣಿಸಿಕೊಂಡರು. ಆದರೆ, ಸೋನು ಅಭಿನಯದ ಸಿನೆಮಾಗಳ ಪೈಕಿ ಯಾವುದೂ ಕೂಡ Box office ನಲ್ಲಿ Hit ಸಿನೆಮಾ ಅನ್ನಿಸಿಕೊಳ್ಳದಿದ್ದರಿಂದ ಅವರ Acting Career ಸದ್ಯಕ್ಕೆ ಅಲ್ಲಿಗೆ ನಿಂತಿದೆ.

ಸೋನು ನಿಗಮ್ Music albumಗಳು

1992ರಲ್ಲಿ ‘Rafi Ki Yaadein’ ಎಂಬ ಮೊದಲ ನಿಂದ ಆರಂಭಿಸಿ, ಈವರೆಗೆ ಹಲವಾರು albumಗಳನ್ನು ಹೊರತಂದಿದ್ದಾರೆ. ಅವುಗಳಲ್ಲಿ, 1999ರಲ್ಲಿ T-series ಮೂಲಕ ‘Deewana’, 2000ದಲ್ಲಿ  ‘Jaan’,  2005ರಲ್ಲಿ ‘Chanda Ki Doli’ albumಗಳು ಸೇರಿವೆ. 2007ರಲ್ಲಿ ಸೋನು ನಿಗಮ್ ಬಿಡುಗಡೆ ಮಾಡಿದ  ‘Kal Aaj aur Kal’ album, ನೂರಕ್ಕೂ ಹೆಚ್ಚು ಹಾಡುಗಳನ್ನು ಹೊಂದಿತ್ತು. 2008ರಲ್ಲಿ ‘Rafi Resurrected’ ಹಾಗೂ ‘Classically Mild’  ಎಂಬ album ರಿಲೀಸ್ ಮಾಡಿದ್ದಾರೆ. 2014ರಲ್ಲಿ ಪ್ರಖ್ಯಾತ ತಬಲಾ ವಾದಕ Bickram Ghosh ಜೊತೆ ಸೇರಿ ‘The Music Room’ album ಹೊರ ತಂದಿದ್ದಾರೆ.

ಹಿನ್ನೆಲೆ ಗಾಯನಕ್ಕೆ ಸೀಮಿತರಾಗದ ಸೋನು ನಿಗಮ್, ಬಾಲಿವುಡ್ ಸಿನೆಮಾಗಳಾದ ‘Singh Saab the Great’ (2013), ‘Jal’ (2014), ‘Happy Anniversary’ (2016) ಮತ್ತು ‘Tum Jo Mil Gaye Ho’ (2016) ಇತ್ಯಾದಿ ಸಿನೆಮಾಗಳಿಗೆ music composer ಆಗಿ ಕೆಲಸ ಮಾಡಿದ್ದಾರೆ.

ಹಿನ್ನೆಲೆ ಸಂಗೀತ ಕ್ಷೇತ್ರದಲ್ಲಿನ ಗಾಯನಕ್ಕಾಗಿ Film Fare, Zee Cine Awards ಮತ್ತು National Film Awards ಸೇರಿದಂತೆ ಈವರೆಗೆ 15ಕ್ಕೂ ಹೆಚ್ಚು ಪ್ರಶಸ್ತಿಗಳು ಸೋನು ನಿಗಮ್ ಅವರ ಸಾಧನೆಗೆ ಸಂದ ಗೌರವಗಳಾಗಿವೆ.

ದೇಶ-ವಿದೇಶಗಳಲ್ಲಿ ಪ್ರಸಿದ್ಧಿ

ಪ್ರತಿಭಾವಂತ ಗಾಯಕ ಸೋನು ನಿಗಮ್, ಜಗತ್ತಿನ ಹಲವಾರು ಸಂಗೀತಗಾರರ ಜೊತೆಗೆ ಸೇರಿ ಕೆಲಸ ಮಾಡಿದ್ದಾರೆ. ಪಾಪ್ ಸಂಗೀತದ ದಂತಕತೆ Michael Jackson ನಿಧನದ ನಂತರ, ಅವರ ಸ್ಮರಣೆಗಾಗಿ ಬಂದ ‘The Beat of Our Hearts’ ಎಂಬ album ನಲ್ಲೂ ಸೋನು ಹಾಡಿದ್ದಾರೆ. 2008ರಲ್ಲಿ CBSO(City of Birmingham Symphony Orchestra) ಜೊತೆ, ಇಂಗ್ಲೆಂಡ್ ದೇಶದ ಹಲವು ನಗರಗಳಲ್ಲಿ, ಮೊಹಮದ್ ರಫಿ ಅವರ ಜನಪ್ರಿಯ ಹಾಡುಗಳನ್ನು ಹಾಡಿದ ಸೋನು, ಅದನ್ನೇ ‘Rafi Resurrected’ ಎಂಬ album ಆಗಿಸಿದ್ದರು. 2011ರಲ್ಲಿ Britney Spears ಅವರ ‘I Wanna Go’ ಎಂಬ a remix album ಗಾಗಿ ಮತ್ತು 2012ರಲ್ಲಿ DJ Avicii ಜೊತೆ ‘Indian Levels’ album ನಲ್ಲಿಯೂ ಸೋನು ನಿಗಮ್ ಹಾಡಿದ್ದಾರೆ. ಇದಲ್ಲದೆ, Hollywood ಸಿನೆಮಾಗಳಾದ Rioಹಾಗೂ Aladdinಗೆ ಹಿಂದಿ Voiceover ಕೂಡ ಕೊಟ್ಟಿದ್ದಾರೆ.

ರೇಡಿಯೋ ಮತ್ತು TV ಶೋಗಳಲ್ಲಿ ಸೋನು ನಿಗಮ್

1995ರಲ್ಲಿ ತಮ್ಮ ವೃತ್ತಿ ಜೀವನದ ಆರಂಭದಲ್ಲಿ ‘Sa Re Ga Ma’ ದ ನಿರೂಪಕನಾಗಿ ಕೆಲಸ ಮಾಡಿದ್ದ ಸೋನು ನಿಗಮ್, ಆ ದಿನಗಳಲ್ಲೇ ಮನೆಮಾತಾಗಿದ್ದರು. ಆ ಬಳಿಕ Indian Idol (seasons 1, 2, 3, 4  ಮತ್ತು 7), Amul STAR Voice of India (seasons 1 ಮತ್ತು 2), Chhote Ustaad ಮತ್ತು X –Factor India,  Kisme kitna Hai Dum ಇತ್ಯಾದಿ TV ಶೋಗಳ Judge ಆಗಿ ಜನಪ್ರಿಯರಾಗಿದ್ದರು. ಇದರ ಜೊತೆಗೆ, Radio City 91 FM, ನಲ್ಲಿ ‘Life Ki Dhun’ ಎಂಬ ರೇಡಿಯೊ Showಕೂಡ ನಡೆಸಿಕೊಟ್ಟಿದ್ದರು.

ಸೋನು ನಿಗಮ್ ಮತ್ತು ವಿವಾದಗಳು

ಸಿನೆಮಾ ಕ್ಷೇತ್ರದಲ್ಲಿ, ಹಿನ್ನೆಲೆ ಗಾಯಕರ Copyrightಗಾಗಿ ಸಾಕಷ್ಟು ಹೋರಾಟ ನಡೆಸಿರುವ ಸೋನು ನಿಗಮ್, ಅದಕ್ಕಾಗಿ Bollywood music industryಯನ್ನೂ ಎದುರು ಹಾಕಿಕೊಂಡಿದ್ದಾರೆ.

ಇತ್ತೀಚೆಗೆ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ನಂತರ, Bollywood ನಲ್ಲಿ ಅತಿಯಾದ ಸ್ವಜನ ಪಕ್ಷಪಾತವಿದೆ ಮತ್ತು ಮುಂಬೈ ಹೊರಗಿನವರ ಬಗ್ಗೆ ಸಾಕಷ್ಟು ತಾರತಮ್ಯ ಅನುಸರಿಸಲಾಗುತ್ತದೆ ಎಂಬ ಮಾತುಗಳು ಕೇಳಿ ಬಂದಿದ್ದವು. ಈ ಬಗ್ಗೆ ಪ್ರತಿಕ್ರಿಯಿಸಿದ್ದ ಸೋನು ನಿಗಮ್, ನಾನೂ ಕೂಡ ಈ ಎಲ್ಲ ಕಿರುಕುಳಗಳನ್ನು ಅನುಭವಿಸಿದ್ದೇನೆ, ಸಿನೆಮಾ ಸಂಗೀತ ಕ್ಷೇತ್ರದಲ್ಲಿ ಮಾಫಿಯಾಗಳು ಹಾವಳಿ ನಡೆಸುತ್ತಿವೆ ಎಂದು ಆರೋಪಿಸಿದ್ದರು.

2018ರ ಡಿಸೆಂಬರ್ ನಲ್ಲಿ ಖಾಸಗಿ ಟಿವಿ ಚಾನಲ್ ಒಂದರ ಸಂದರ್ಶನದಲ್ಲೂ ಬಾಲಿವುಡ್ ನ Music Industry ಬಗ್ಗೆ ಕಿಡಿಕಾರಿದ್ದ ಸೋನು, ಒಂದು ವೇಳೆ ನಾನು ಪಾಕಿಸ್ತಾನಿ ಮೂಲದ ಹಾಡುಗಾರನಾಗಿದ್ದರೆ ಹೆಚ್ಚು ಅವಕಾಶ ಸಿಗುತ್ತಿತ್ತು ಎಂದು ಹೇಳಿ ಹಲವರ ಹುಬ್ಬೇರುವಂತೆ ಮಾಡಿದ್ದರು.

ಇಷ್ಟು ಮಾತ್ರವಲ್ಲದೆ,  2017ರಲ್ಲಿ  ಮಸೀದಿಗಳಲ್ಲಿ Loud Speaker ಮೂಲಕ ಆಜಾನ್ ಕೂಗುವುದರಿಂದ ನನಗೆ ಭಾರಿ ಕಿರಿಕಿರಿ ಆಗುತ್ತಿದೆ ಎಂದು ಹೇಳಿ, ವಿವಾದ ಸೃಷ್ಟಿಸಿದ್ದರು. ಇದು, ಒಂದು ರೀತಿಯ ಒತ್ತಾಯಪೂರ್ವಕ ಧಾರ್ಮಿಕತೆ ಎಂದು ಟೀಕಿಸಿದ್ದರು. ಈ ಹೇಳಿಕೆಯ ನಂತರ, ಒಬ್ಬ ಮುಸ್ಲಿಮ್ ಧಾರ್ಮಿಕ ಮುಖಂಡ ಸೋನು ವಿರುದ್ಧ ಫತ್ವಾ ಜಾರಿ ಮಾಡಿದ್ದ. ಸೋನು, ತಲೆ ಬೋಳಿಸಿದವರಿಗೆ 10 ಲಕ್ಷ ರೂಪಾಯಿ ಬಹುಮಾನ ಕೊಡುವುದಾಗಿ ಘೋಷಿಸಿದ್ದ. ಇದಕ್ಕೆ ಉತ್ತರವಾಗಿ ತಾವೇ ತಲೆ ಬೋಳಿಸಿಕೊಂಡಿದ್ದ ಸೋನು ನಿಗಮ್, 10 ಲಕ್ಷ ರೂಪಾಯಿಗಳನ್ನು ತನಗೇ ಕೊಡುವಂತೆ ಆಗ್ರಹಿಸಿದ್ದರು. ಆ ಬಳಿಕ ಹೇಳಿಕೆ ನೀಡಿದ್ದ, ಸೋನು, ‘ನಾನು ಆಕ್ಷೇಪ ವ್ಯಕ್ತಪಡಿಸಿದ್ದು ಧ್ವನಿ ವರ್ಧಕಗಳನ್ನು ಬಳಸುವುದರಿಂದ ಆಗುವ ತೊಂದರೆಯ ವಿರುದ್ಧವೇ ಹೊರತು, ಯಾವುದೇ ಧರ್ಮದ ವಿರುದ್ಧ ಅಲ್ಲ. ಅದು ಮಸೀದಿ, ಮಂದಿರ ಅಥವ ಗುರುದ್ವಾರವೇ ಆಗಿದ್ದರೂ ಕೂಡ Loud Speaker ಬಳಸಿ ಇತರರ ನೆಮ್ಮದಿ ಹಾಳು ಮಾಡುವುದನ್ನು ವಿರೋಧಿಸುತ್ತೇನೆ’ ಎಂದು ಸ್ಫಷ್ಟೀಕರಣ ನೀಡಿದ್ದರು. ಮೊಹಮದ್ ರಫಿಯವರನ್ನು ತನ್ನ ಗುರುವೆಂಬಂತೆ ಆರಾಧಿಸುತ್ತಾ ಬಂದಿದ್ದ, ಸೋನು ನಿಗಮ್, ಮುಸ್ಲಿಮ್ ಸಮುದಾಯದ ಆಕ್ರೋಶಕ್ಕೆ ಸಿಲುಕಿದ್ದೂ ಕೂಡ ಒಂದು ವಿಪರ್ಯಾಸ.

Sandalwood ಮತ್ತು ಸೋನು ನಿಗಮ್

ಹಿಂದಿ ಭಾಷೆಯ ಜೊತೆಗೆ, ಬಂಗಾಳಿ, ತಮಿಳು, ಉರ್ದು, ಮಲೆಯಾಳಮ್, ಮರಾಠಿ ಮತ್ತು ತುಳು ಸೇರಿದಂತೆ ಹಲವಾರು ಭಾಷೆಗಳಲ್ಲಿ ಹಾಡಿರುವ ಸೋನು ವೃತ್ತಿ ಜೀವನಕ್ಕೆ ಅತ್ಯಂತ ದೊಡ್ಡ ಯಶಸ್ಸು ನೀಡಿದ್ದು ಕನ್ನಡ ಭಾಷೆ. ಬಾಲಿವುಡ್ ನಲ್ಲಿ ಹೆಸರು ಮಾಡುತ್ತಿದ್ದ ದಿನಗಳಲ್ಲೇ Sandal woodಗೂ ಕಾಲಿಟ್ಟ ಸೋನು ನಿಗಮ್, 1996ರಲ್ಲಿ ತೆರೆ ಕಂಡ ವಿಷ್ಣುವರ್ಧನ್ ಅಭಿನಯದ ಜೀವನದಿ ಸಿನೆಮಾದ ಎಲ್ಲೋ ಯಾರೋ ಹೇಗೋ ಹಾಡಿನಿಂದ ಆರಂಭಿಸಿ, ಈವರೆಗೆ 100ಕ್ಕೂ ಹೆಚ್ಚು ಕನ್ನಡ ಚಿತ್ರಗಳಲ್ಲಿ ಹಾಡಿದ್ದಾರೆ.  ಯಜಮಾನ ಚಿತ್ರದ ‘ಒಂದು ಮುಂಜಾನೆ’, ಮಳೆಯಲಿ ಜೊತೆಯಲಿ ಸಿನೆಮಾದ ‘ನೀ ಸನಿಹಕೆ ಬಂದರೆ’, ಈ ಬಂಧನ ಸಿನೆಮಾದ ‘ಅದೇ ಭೂಮಿ ಅದೇ ಭಾನು’, ಹುಚ್ಚ ಸಿನೆಮಾದ ‘ಉಸಿರೇ ಉಸಿರೇ’, ಆಕ್ಸಿಡೆಂಟ್ ಸಿನೆಮಾದ ‘ಬಾ ಮಳೆಯೇ ಬಾ’, ‘ಈ ಸಂಜೆ ಯಾಕಾಗಿದೆ’ (ಗೆಳೆಯ), ನಿನ್ನಿಂದಲೇ ಮತ್ತು ‘ಮಳೆ ನಿಂತುಹೋದ ಮೇಲೆ’ (ಮಿಲನ), ‘ಮಿಂಚಾಗಿ ನೀನು ಬರಲು’ (ಗಾಳಿಪಟ), ‘ಏನಾಗಲಿ’ ಮತ್ತು ‘ನಿನ್ನ ನೋಡಲೆಂತೋ’ (ಮುಸ್ಸಂಜೆ ಮಾತು 2008), ‘ಕಣ್ ಕಣ್ಣ ಸಲಿಗೆ’ (ನವಗ್ರಹ), ‘ಕಳ್ಳಿ ಇವಳು’ (ಪ್ರೇಮ್ ಅಡ್ಡ), ‘ಕಣ್ಣಲ್ಲೇ ಕಣ್ಣಲ್ಲೇ’ (ಅಹಂ ಪ್ರೇಮಾಸ್ಮಿ) ಹೀಗೆ, ಸೋನು ಹಾಡಿರುವ ಹತ್ತಾರು ಕನ್ನಡದ ಹಾಡುಗಳು, ಅವರನ್ನು ಕನ್ನಡಿಗರ ಮನೆ-ಮನಗಳಲ್ಲಿ ನೆಲೆಯೂರುವಂತೆ ಮಾಡಿವೆ. ಹೀಗಾಗಿ, ನಾನು ಹಿಂದಿ ಸಿನೆಮಾಗಳಿಗಿಂತಲೂ ಕನ್ನಡ ಸಿನೆಮಾಗಳಲ್ಲೇ ಅತ್ಯುತ್ತಮ ಹಾಡುಗಳನ್ನು ಹಾಡಿದ್ದೇನೆ ಅನ್ನುವ ಸೋನು, ಕನ್ನಡದಲ್ಲಿ ಒಂದು Music Album ಕೂಡ ಬಿಡುಗಡೆ ಮಾಡಿ, ಕನ್ನಡಿಗರಿಗೆ ಮತ್ತಷ್ಟು ಆಪ್ತರಾಗಿದ್ದಾರೆ. Music ಶೋಗಳನ್ನು ನೀಡಲು ವಿದೇಶಗಳಿಗೆ ಹೋದಾಗ, ಅಲ್ಲಿ ಸೇರಿದ್ದ ಪ್ರೇಕ್ಷಕರಲ್ಲಿ ಯಾರಾದರೂ ಕನ್ನಡ-ಕನ್ನಡ ಎಂದು ಕೂಗಿದರೆ, ಅವರ ಆಸೆಯಂತೆ ಕನ್ನಡದ ಹಾಡನ್ನು ಹಾಡಲು ಮನಸ್ಸು ಮುಂದಾಗುತ್ತದೆ ಅನ್ನುತ್ತಾರೆ.

ಸೋನು ಸಂಸಾರ

ಸೋನು ನಿಗಮ್, 2002ರಲ್ಲಿ ಹಾಡುಗಾರ್ತಿ ಮಧುರಿಮ ಬ್ಯಾನರ್ಜಿ ಅವರನ್ನು  ತಮ್ಮ ಜೀವನ ಸಂಗಾತಿಯಾಗಿ ಮಾಡಿಕೊಂಡರು. ಈ ದಂಪತಿಗೆ ನೀವನ್(Neevan) ಎಂಬ 13 ವರ್ಷದ ಮಗನಿದ್ದಾನೆ. ಅಂದಹಾಗೆ, ಸೋನು ಕುಟುಂಬದಲ್ಲಿ ಇನ್ನೂ ಮೂವರು ವಿಶೇಷ ಸದಸ್ಯರಿದ್ದಾರೆ. ಅವರ ಹೆಸರುಗಳು ಹೀಗಿವೆ. Goggles Nigam, Shifu Nigam, Zen Nigam ಯಾರಪ್ಪ ಇವರೆಲ್ಲ ಅಂತೀರಾ, ಇವು ಮೂರೂ ಕೂಡ ಸೋನು ಅವರ ಪ್ರೀತಿಯ ನಾಯಿಗಳು.

Showman: ಸೋನು ನಿಗಮ್

ವಿಶಿಷ್ಟ ವ್ಯಕ್ತಿತ್ವದ ಸೋನು ನಿಗಮ್,  ರಾಜ್ ಕಪೂರ್ ರೀತಿಯಲ್ಲೇ ಒಬ್ಬ Showman ಕೂಡ ಅನ್ನಬಹುದು. ಎಷ್ಟರಮಟ್ಟಿಗೆ ಅಂದರೆ, 2003ರಲ್ಲಿ ಹಿನ್ನೆಲೆ ಗಾಯನಕ್ಕಾಗಿ ರಾಷ್ಟ್ರ ಪ್ರಶಸ್ತಿ ಸ್ವೀಕಾರದ ಸಮಯದಲ್ಲಿ, ತಾವೂಕೂಡ ಅಂದಿನ ರಾಷ್ಟ್ರಪತಿ ಅಬ್ದುಲ್ ಕಲಾಮ್ ರಂತೆಯೇ Hairstyle ಮಾಡಿಸಿಕೊಂಡು ಹೋಗಿ, ಅವಾರ್ಡ್ ಸ್ವೀಕರಿಸಿದ್ದರು.

ಒಂದು ದಿನ, ಮುಂಬೈನ ಜುಹು ಪ್ರದೇಶದ Footpathನಲ್ಲಿ ವೇಷ ಮರೆಸಿಕೊಂಡು ಭಿಕ್ಷುಕನಂತೆ ಕುಳಿತು ಹಾಡಿ ಜನರನ್ನು ಚಕಿತಗೊಳಿಸಿದ್ದ ಸೋನು ನಿಗಮ್, Road Side ಉಸ್ತಾದ್ ಎಂದೂ ಕರೆಸಿಕೊಂಡಿದ್ದರು.

ಭಾರತದ Elvis Presley

ಸೋನು ನಿಗಮ್ ಅವರನ್ನು ಅಮೆರಿಕದ ಪ್ರಖ್ಯಾತ ಗಾಯಕ ಮತ್ತು ನಟ Elvis Presley ಅವರಿಗೆ ಹೋಲಿಸಲಾಗುತ್ತದೆ. ಸದಾ ಚಟುವಟಿಕೆಯಿಂದ ಕೂಡಿರುವ ಸೋನು, ಪ್ರಖ್ಯಾತ ನಟರು ಮತ್ತು ಗಾಯಕರನ್ನು ಮಿಮಿಕ್ ಮಾಡುತ್ತಾರೆ. ಕೊರಿಯ ದೇಶದ ಸಮರ ಕಲೆ(Martial art) Taekwondoದಲ್ಲಿ ನಿಪುಣರಾಗಿರುವ ಸೋನು ನಿಗಮ್ ಗೆ ಜಿರಲೆ ಕಂಡರೆ ಮಾತ್ರ ಭಾರಿ ಭಯವಂತೆ.

ಹತ್ತು ಭಾಷೆ, 2000ಕ್ಕೂ ಹೆಚ್ಚು ಹಾಡುಗಳು

ಈವರೆಗೆ, ಸುಮಾರು 10 ಭಾಷೆಗಳಲ್ಲಿ 2000ಕ್ಕೂ ಹೆಚ್ಚು ಹಾಡುಗಳನ್ನು ಹಾಡಿರುವ ಸೋನು ನಿಗಮ್, ‘ಸಂಗೀತ ಅನ್ನುವುದು ನಿರಂತರವಾಗಿ ಸಾಗುವ ಒಂದು ಮಹಾ ಪ್ರಯಾಣ, ನಾವು ನಮ್ಮ ಮೈಮನಗಳನ್ನು ಸಂಗೀತಾಭ್ಯಾಸದಲ್ಲಿ ತೊಡಗಿಸಿಕೊಳ್ಳಬೇಕು ಮತ್ತು ಕಲಿಯುವಿಕೆಯನ್ನು ಎಂದೂ ನಿಲ್ಲಿಸಬಾರದು’ ಅನ್ನುತ್ತಾರೆ.

ಹೃದಯ ಮೀಟುವ melodious song ಇರಬಹುದು, ಶಾಸ್ತ್ರೀಯ-ಲಘು ಶಾಸ್ತ್ರೀಯ ಧಾಟಿಯ ಗಾಯನ, ಘಜಲ್ ಅಥವ Pop rock  ಸಂಗೀತವಿರಬಹುದು, ಯಾವುದೇ ಶೈಲಿಯಲ್ಲೂ ಸುಲಲಿತವಾಗಿ, ಸುಶ್ರಾವ್ಯವಾಗಿ ಹಾಡಬಲ್ಲ ಸೋನು ನಿಗಮ್, ಸರ್ವತೋಮುಖ ಸಾಮರ್ಥ್ಯವುಳ್ಳ ಹಾಡುಗಾರ. ಒಬ್ಬ ಹಿನ್ನೆಲೆ ಗಾಯಕನೂ ಕೂಡ, SuperStar ಅನ್ನಿಸಿಕೊಳ್ಳುವಷ್ಟು ಎತ್ತರ ತಲುಪಬಲ್ಲ ಅನ್ನುವುದನ್ನು ಸಾಧಿಸಿ ತೋರಿಸಿದ್ದು ಸೋನು ನಿಗಮ್ ಹೆಗ್ಗಳಿಕೆ.