1933ರ ಸೆಪ್ಟಂಬರ್ 8 ರಂದು ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ಜನಿಸಿದ ಆಶಾ ಭೋಂಸ್ಲೆ, ಭಾರತದ ಹೆಸರಾಂತ ಹಿನ್ನೆಲೆ ಗಾಯಕಿ. ತಮ್ಮ ಗಾಯನದ ಬದುಕಿನ ಆರಂಭದಲ್ಲಿ ಅಕ್ಕ, ಮಹಾನ್ ಹಿನ್ನೆಲೆ ಗಾಯಕಿ, ಲತಾ ಮಂಗೇಶ್ಕರ್ ಅವರ ನೆರಳಿನಲ್ಲೇ ಇದ್ದ ಆಶಾ, ಆನಂತರದ ದಿನಗಳಲ್ಲಿ ತಮ್ಮದೇ ವಿಶಿಷ್ಟ ಶೈಲಿ ಬೆಳೆಸಿಕೊಂಡರು. ಸರ್ವತೋಮುಖ ಹಾಡುಗಾರ್ತಿಯಾಗಿರುವ ಆಶಾ ಭೋಂಸ್ಲೆ, ‘Soprano’ ಅಥವ ಸ್ಥಾಯಿಯಲ್ಲಿನ ತಮ್ಮ ಹಾಡುಗಾರಿಕೆ ಶೈಲಿಗೆ ಹೆಸರಾಗಿದ್ದಾರೆ.

1943ರಲ್ಲಿ ಹಾಡಲು ಆರಂಭಿಸಿದ ಆಶಾ ಭೋಂಸ್ಲೆ, ಈವರೆಗೆ 20ಕ್ಕೂ ಹೆಚ್ಚು ಭಾಷೆಗಳಲ್ಲಿ 12 ಸಾವಿರಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ. ಆ ಮೂಲಕ, ಅತ್ಯಂತ ಹೆಚ್ಚು ಹಾಡುಗಳನ್ನು ಹಾಡಿರುವ (Most recorded artist in music history) ಗಾಯಕಿ ಅನ್ನಿಸಿಕೊಂಡು, ತಮ್ಮ ಹೆಸರನ್ನು Guinness Book of World Records ನಲ್ಲಿ ದಾಖಲಾಗುವಂತೆ ಮಾಡಿದ್ದಾರೆ.  ಪ್ರತಿ ಬಾರಿ ಹಾಡುವಾಗಲೂ, ‘ಇದು ನಾನು ಹಾಡುತ್ತಿರುವ ಮೊದಲ ಹಾಡು’ ಎಂದೇ ತಿಳಿದು ಹಾಡುತ್ತೇನೆ ಅನ್ನುವ ಮೂಲಕ ಗಾಯನದ ಬಗ್ಗೆ ತಮಗೆ ಎಷ್ಟರ ಮಟ್ಟಿಗಿನ ಶ್ರದ್ಧೆ ಇದೆ ಅನ್ನುವುದನ್ನು ಪ್ರಕಟ ಪಡಿಸುತ್ತಾರೆ.

ವೈವಿಧ್ಯಮಯ ಗಾಯಕಿಯಾಗಿರುವ ಆಶಾ ಭೋಂಸ್ಲೆ, ಚಿತ್ರಗೀತೆಗಳ ಜೊತೆಗೆ ಘಜಲ್ ಗಳು, ಖವ್ವಾಲಿಗಳು ಮತ್ತು ಜನಪದ ಗೀತೆಗಳನ್ನೂ ಹಾಡಿದ್ದಾರೆ. ಕನ್ನಡದ ಜೊತೆಗೂ ಸಂಬಂಧ ಹೊಂದಿರುವ ಆಶಾ ಭೋಂಸ್ಲೆ, 1973ರಲ್ಲಿ ಬಿಡುಗಡೆಯಾದ ಡಾ.ರಾಜ್ ಕುಮಾರ್ ಅಭಿನಯದ ‘ದೂರದ ಬೆಟ್ಟ’, 2010ರಲ್ಲಿ ಶ್ರೀನಗರ ಕಿಟ್ಟಿ ಅಭಿನಯದ ‘ಮತ್ತೆ ಮುಂಗಾರು’ ಮತ್ತು 2017ರಲ್ಲಿ ‘19/11’ ಎಂಬ ಹೊಸ ಕನ್ನಡ ಚಿತ್ರಕ್ಕಾಗಿ ಹಾಡಿದ್ದಾರೆ.

ಆಶಾ ಅವರು, 2013ರಲ್ಲಿ ಮರಾಠಿ ಸಿನೆಮಾ Mai ನಲ್ಲಿ ತಾಯಿಯ ಪಾತ್ರದಲ್ಲಿ ಅಭಿನಯಿಸುವ ಮೂಲಕ ನಟನಾ ಕ್ಷೇತ್ರಕ್ಕೂ ಕಾಲಿಟ್ಟಿದ್ದರು. ಅತ್ಯುತ್ತಮ ಹಿನ್ನೆಲೆ ಗಾಯನಕ್ಕಾಗಿ ಹಲವಾರು ಬಾರಿ ಫಿಲ್ಮ್ ಫೇರ್ ಪ್ರಶಸ್ತಿ ಪಡೆದಿರುವ ಆಶಾ ಭೋಂಸ್ಲೆ ಅವರಿಗೆ, 2000ನೇ ಇಸವಿಯ ಪ್ರತಿಷ್ಠಿತ ‘ದಾದಾ ಸಾಹೇಬ್ ಫಾಲ್ಕೆ’ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಆಶಾ ಭೋಂಸ್ಲೆ ಅವರು, 2008ರಲ್ಲಿ ‘ಪದ್ಮ ವಿಭೂಷಣ’ ಪ್ರಶಸ್ತಿಗೂ ಪಾತ್ರರಾಗಿದ್ದಾರೆ. ಅಪ್ರತಿಮ ಗಾಯಕಿ ಆಶಾ ಭೋಂಸ್ಲೆ ಅವರಿಗೆ ‘ಮಾಧ್ಯಮ ಅನೇಕದ’ ವತಿಯಿಂದ ಜನ್ಮ ದಿನದ ಶುಭ ಹಾರೈಕೆಗಳು